ಮಹಿಳೆಯರಂತೆ ಸೀರೆ ಉಡ್ತಾರೆ ಇಲ್ಲಿನ ಗಂಡಸರು! ಅಚ್ಚರಿ ಮೂಡಿಸುತ್ತೆ ಇದರ ಹಿಂದಿರುವ ಕಾರಣ

men weara saree
Published on

ಸಾಮಾನ್ಯವಾಗಿ ನವರಾತ್ರಿ ಹಬ್ಬದ (Durga Puja) ಸಮಯದಲ್ಲಿ ಮಹಿಳೆಯರು ಬಣ್ಣ ಬಣ್ಣದ ಸೀರೆಯನ್ನು ತೊಟ್ಟು ಕಂಗೊಳಿಸುತ್ತಾರೆ. ಇದು ಹಬ್ಬದ ಆಚರಣೆಯ ಸಲುವಾಗಿಯೂ ಹೌದು, ತಾವು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂಬ ಉದ್ದೇಶವೂ ಹೌದು. 9 ದಿನಗಳ ಪೂಜಾ ಕಾರ್ಯಗಳಲ್ಲಿ ಆಯಾ ದಿನಕ್ಕೆ ಸೂಚಿಸಲಾದ ಬಣ್ಣದ ಸಂಕೇತವಾಗಿ ಸೀರೆಯನ್ನು ಉಡಲಾಗುತ್ತದೆ. ಇದೊಂದು ಹಳೆಯ ಸಂಪ್ರದಾಯ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ಸಂಗತಿಯೇ. ಆದ್ರೆ, ಇಲ್ಲೊಂದು ಊರಿನಲ್ಲಿ ಈ ಆಚರಣೆಯ ಸಲುವಾಗಿ ಗಂಡಸರೇ ಹೆಂಗಸರಂತೆ ಸೀರೆಯುಟ್ಟು (Men Wear Saree), ಕುಣಿದು ಕುಪ್ಪಳಿಸುತ್ತಾರೆ. ಅಸಲಿಗೆ ಏಕೆ? ಇದು ಯಾವ ಊರು? ಎಂಬ ಹತ್ತು ಹಲವು ಕುತೂಹಲಕಾರಿ ಪ್ರಶ್ನೆಗಳಿಗೆ ಹೀಗಿದೆ ನೋಡಿ ಉತ್ತರ.

ದಕ್ಷಿಣ ಮತ್ತು ಉತ್ತರ ಭಾರತ

ನವರಾತ್ರಿ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಈ ಸಂಭ್ರಮವನ್ನು ದಕ್ಷಿಣ ಭಾರತದಲ್ಲಿ ಎಷ್ಟು ವಿಜೃಂಭಣೆಯಿಂದ ನಡೆಸಲಾಗುತ್ತದೆಯೋ ಅದೇ ರೀತಿ ಉತ್ತರ ಭಾರತದ ಭಾಗಗಳಲ್ಲಿಯೂ ಆಚರಿಸಲಾಗುತ್ತದೆ. ವಿಶೇಷತೆ ಏನು ಎಂದರೆ ಉತ್ತರ ಭಾರತದಲ್ಲಿ ನವರಾತ್ರಿಯನ್ನು ದಾಂಡಿಯಾ ಮತ್ತು ಗಾರ್ಬಾ ನೃತ್ಯ ಮಾಡುವ ಮುಖೇನ ಸಂಭ್ರಮಿಸಲಾಗುತ್ತದೆ. ಈ ಮೂಲಕ ಅಲ್ಲಿನ ಜನರು ದುರ್ಗಾ ಮಾತೆಗೆ ಪೂಜೆ ಸಲ್ಲಿಸುತ್ತಾರೆ. ಗಾರ್ಬಾ ಡ್ಯಾನ್ಸ್​ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಗುಜರಾತ್​. ಹೀಗಿದ್ದಮೇಲೆ ನವರಾತ್ರಿ ಉತ್ಸವದಲ್ಲಿ ಎಲ್ಲರ ಗಮನ ಸೆಳೆಯುವ ಆ ಆಚರಣೆ ನಡೆಯುವುದು ಇದೇ ಊರಿನಲ್ಲಿ ಎಂಬುದು ಇಲ್ಲಿ ಗಮನಾರ್ಹ.

men

200 ವರ್ಷಗಳ ಇತಿಹಾಸ

ದೇವಿಯ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಗುಜರಾತಿನ ರಾಜಧಾನಿ ಅಹಮದಾಬಾದ್​ನ ಹಳೆಯ ಪಟ್ಟಣದಲ್ಲಿ ಈ ವಿಶೇಷ ಸಂಪ್ರದಾಯ ಜನರ ಗಮನ ಸೆಳೆಯುತ್ತಿದೆ. ಶಾಪುರ್ ಪ್ರದೇಶದ ಸಾಧು ಮಾತಾ ಗಲಿ ಮತ್ತು ಅಂಬಾ ಮಾತಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಎಂಟನೇ ದಿನದಂದು ಸ್ತ್ರೀವೇಷ ಧರಿಸಿ, ಪುರುಷರು ಮಾಡುವ ನೃತ್ಯ ಸಂಪ್ರದಾಯವು ಇಂದಿಗೂ ಇಲ್ಲಿ ಮುಂದುವರಿದಿದೆ. ಈ ಆಚರಣೆ ಬರೋಬ್ಬರಿ 200 ವರ್ಷಗಳಷ್ಟು ಹಳೆಯದ್ದು. ಅಂದಿನಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ.

ಗಂಡಸರು ಗಾರ್ಬಾ ನೃತ್ಯ

ಇಲ್ಲಿ ಬರೋಟ್ ಸಮುದಾಯದ 1000ಕ್ಕೂ ಹೆಚ್ಚು ಪುರುಷರು ಇದ್ದಾರೆ. ಅವರು ನವರಾತ್ರಿ ಆಚರಣೆಯ ಸಮಯದಲ್ಲಿ ಸುಂದರವಾದ ಮುಸ್ತಾಬಾಯಿ ಗುಡಿ ಮತ್ತು ಬೀದಿಗಳಲ್ಲಿ ಗಾರ್ಬಾ ಮತ್ತು ದಾಂಡಿಯಾವನ್ನು ಮಹಿಳೆಯರಂತೆ ಬಳೆ ಮತ್ತು ಸೀರೆಯುಟ್ಟು ಕುಣಿಯುತ್ತಾರೆ. ಸ್ಥಳೀಯರು ಹೇಳುವ ಪ್ರಕಾರ, ಇದು 200 ವರ್ಷಗಳ ಹಿಂದಿನ ಶಾಪ. ಹೀಗಾಗಿಯೇ ಇದನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಈ ಆಚರಣೆ ಗೌರವಿಸಲು ಗಂಡಸರು ಗಾರ್ಬಾ ಎಂಬ ಜಾನಪದ ನೃತ್ಯವನ್ನು ಮಾಡುತ್ತಾರೆ ಎನ್ನಲಾಗಿದೆ. ಇದಕ್ಕೆ ದೊಡ್ಡ ಇತಿಹಾಸವೂ ಇದೆ.

ಇತಿಹಾಸ ಹೇಳುವುದೇನು?


ಭಾರತದ ಮೊಘಲ್ ಆಳ್ವಿಕೆಯಲ್ಲಿ, ಮೊಘಲ್ ರಾಜನು ಸದುಬೆನ್ ಎಂಬ ಮಹಿಳೆಯನ್ನು ಪ್ರೀತಿಸುತ್ತಿದ್ದನು. ಆದ್ರೆ, ಆಕೆಗೆ ಅದಾಗಲೇ ಮದುವೆಯಾಗಿ ಒಂದು ಮಗುವಿತ್ತು. ಆದಾಗ್ಯೂ, ಮೊಘಲ್ ರಾಜನು ಕಾಮದಾಸೆಯಿಂದ ಅವಳನ್ನು ತನ್ನೊಂದಿಗೆ ಕರೆದೊಯ್ಯಲು ಪ್ರಯತ್ನಿಸಿದನು. ಆಗ ಅವರನ್ನು ರಕ್ಷಿಸಲು ಬರೋಟ್ ಸಮುದಾಯದವರು ಆಗಮಿಸಿದರು. ಆದರೆ ಮೊಘಲ್ ರಾಜನ ಸೈನ್ಯವನ್ನು ನೋಡಿದ ಬಾರೋಟ್ ಸಮುದಾಯದ ಪುರುಷರು ಅವಳನ್ನು ಉಳಿಸಲು ಮುಂದೆ ಬರಲಿಲ್ಲ. ಇದರ ಪರಿಣಾಮ ಆಕೆಯ ಮಗು ಸಾವನ್ನಪ್ಪಿತು. ಇದರಿಂದ ತೀವ್ರ ದುಃಖಿತಳಾದ ಸದುಬೆನ್, ಭವಿಷ್ಯದಲ್ಲಿ ಬರೋಟ್ ಸಮುದಾಯದ ಪುರುಷರು ಹೇಡಿಗಳಾಗಲಿ ಎಂದು ಶಾಪವಿಟ್ಟು, ಆತ್ಮಹತ್ಯೆ ಮಾಡಿಕೊಂಡರು ಎನ್ನಲಾಗಿದೆ.

ಸದುಬೆನ್​ ಶಾಪದ ಬೆನ್ನಲ್ಲೇ ದೇವಾಲಯ

ಸದುಬೆನ್‌ನ ಶಾಪಕ್ಕೆ ಹೆದರಿದ ಬಾರೋಟ್ ಸಮುದಾಯವು ಆಕೆಯ ಆತ್ಮಕ್ಕೆ ಶಾಂತಿ ಸಿಗಲೆಂದು ಅವರ ಹೆಸರಿನಡಿ ಅಹಮದಾಬಾದ್‌ನಲ್ಲಿ ದೇವಾಲಯವನ್ನು ನಿರ್ಮಿಸಿತು. ಈ ಶಾಪವನ್ನು ಹೋಗಲಾಡಿಸಲು ನವರಾತ್ರಿಯಂದು ಗಾರ್ಬಾ ನೃತ್ಯವನ್ನು ಮಾಡಲಾಗುತ್ತದೆ. ಇದನ್ನು ಶೇರಿ ಗಾರ್ಬಾ ಎಂದು ಕರೆಯಲಾಗುತ್ತದೆ. ಈ ಸಾಂಪ್ರದಾಯಿಕ ನೃತ್ಯವನ್ನು ವೀಕ್ಷಿಸಲು ನಗರದೆಲ್ಲೆಡೆಯಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಸಾಮಾನ್ಯವಾಗಿ ಮಹಿಳೆಯರಂತೆ ಸೀರೆ, ಆಭರಣಗಳನ್ನು ಧರಿಸುವ ಗಂಡಸರನ್ನು ಸಾಮಾಜದಲ್ಲಿ ಕೀಳಾಗಿ ಕಾಣಲಾಗುತ್ತದೆ. ಆದರೆ, ಬರೋಟ್ ಸಮುದಾಯಕ್ಕೆ ಸೇರಿದ ಪುರುಷರು ಮಹಿಳೆಯರಿಗೆ ಗೌರವ ಮತ್ತು ಸೌಜನ್ಯದ ಸಂಕೇತವೆಂದು ಪರಿಗಣಿಸಿ, ಸೀರೆಯುಟ್ಟು, ಶೇರಿ ಗರ್ಬಾ ನೃತ್ಯ ಮಾಡ್ತಾರೆ. ಇದನ್ನು ಮಾಡುವುದರಿಂದ ಹುಟ್ಟುವ ಶಿಶುಗಳು ಆರೋಗ್ಯವಾಗಿ ಜನಿಸುತ್ತವೆ ಎಂಬ ಬಲವಾದ ನಂಬಿಕೆಯಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net