

ಬೆಂಗಳೂರು: ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷವಾಗಿ ಸುದ್ದಿಯಾಗುತ್ತಿರುವ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್, ಹೋದ ವೇದಿಕೆಗಳಲ್ಲಿ ತಮ್ಮ ವಿರುದ್ಧ ಕೇಳಿಬರುತ್ತಿರುವ ಹೇಳಿಕೆಗಳಿಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಇದೀಗ ಅದೇ ರೀತಿ ಮತ್ತೊಂದು ವೇದಿಕೆಯಲ್ಲಿ ಕಾಣಿಸಿಕೊಂಡ ಸಂತೋಷ್, ಪ್ರತಿಯೊಬ್ಬರ ಜೀವನದಲ್ಲೂ ಇದು ನಡೆದಿರುತ್ತದೆ. ನಮ್ಮ ಜೀವನದಲ್ಲಿ ಎರಡು ತರ ವ್ಯಕ್ತಿಗಳು ನಮ್ಮೆಲರ ನಡುವೆ ಇರುತ್ತಾರೆ. ಒಂದು ರೀತಿಯ ವ್ಯಕ್ತಿಗಳು ಹೆಂಗೆ ಅಂದರೆ ಕಾಗೆ ತರ ಎಂದಿದ್ದಾರೆ.
"ಒಂದು ರೀತಿ ಕಾಗೆ ತರ ಇವರು. ವಲಸು ತಿನ್ನೋದು, ಮಾತನಾಡೋದು, ಕಾ..ಕಾ ಅಂತ ಕಿರುಚೋದು. ಅದರ ಪುಕ್ಕ ಬಿದ್ದೋದರು, ಸತ್ತದೋರು ಯಾರು ಮುಟ್ಟಲ್ಲ. ಇಲ್ಲಿ ಕಾಗೆ ಹೋಲಿಕೆ ಮಾಡ್ತಿದ್ದೀನಿ ಅಂದರೆ ಅದು ವಾಸ್ತವ ನಾನು ಹೇಳ್ತಿರೋದು. ಇದೇ ನವಿಲು ಸಹ ಒಂದು ಪಕ್ಷಿ, ಅದರ ಗರಿ ಬಿದ್ದರೆ ಅದನ್ನು ತೆಗೆದುಕೊಂಡು ಮನೆಯಲ್ಲಿ ಅಥವಾ ಶೋಕೇಸ್ನಲ್ಲಿ ಇಡುತ್ತೇವೆ ಅಲ್ವಾ" ಎಂದರು.
"ಹಾಗಾದ್ರೆ ಕಾಗೆಗೂ ನವಿಲಿಗೂ ಏನು ವ್ಯತ್ಯಾಸ? ಕಾಗೆ ಕೆಲಸ ವಲಸು ತಿಂದು ಕಾ...ಕಾ ಎಂದು ಹೇಳೋದು. ನಿಮಗೂ ಮಾಡ್ತಾ ಇರ್ತಾರೆ, ನಿಮ್ಮ ಜತೆಯಲ್ಲೇ ಇದ್ದು, ನಿಮ್ಮೊಂದಿಗೆ ತಿಂದು, ನಿಮಗೆ ಹೇಳುತ್ತಾರೆ. ಆ ವರ್ಗ ನಮಗೆ ಬೇಡ. ನಾವು ನವಿಲಾಗಿ ಇರೋಣ. ನವಿಲು ಹಾರುತ್ತಿದ್ದರೆ ಅದನ್ನು ನೋಡುವುದೇ ಒಂದು ಚೆಂದ, ಅದರ ಪುಕ್ಕ ಬಿದ್ದರೆ ಸಾಕು ಮನೆಯಲ್ಲಿ ಇಟ್ಟುಕೊಳ್ಳಬೇಕು ಅನಿಸುತ್ತದೆ. ಅಂದರೆ ನಾವೆಲ್ಲಾದರೂ ಹೋದರೆ ನಮ್ಮ ವ್ಯಕ್ತಿತ್ವ ಹೇಗಿರಬೇಕು ಅಂದ್ರೆ ನಾಲ್ಕು ಜನ ಮೆಚ್ಚುವಂತೆ ಇರಬೇಕು" ಎಂದರು.
"ನಾವು ನಮ್ಮ ಕೆಲಸದ ಮೂಲಕವೇ ಮಾತನಾಡಬೇಕು. ಈ ರೀತಿಯ ವ್ಯಕ್ತಿತ್ವಗಳು ಇರುತ್ತವೆ ಎಂದು ಉದಾಹರಣೆ ಕೊಟ್ಟಿದ್ದು. ಅವನು ಹೀಗಂತೆ, ಅವರು ಹಂಗಂತೆ.. ಅವೆಲ್ಲಾ ಯಾಕೆ ಬೇಕು, ನಿಮ್ಮ ಸಾಧನೆ ಕಡೆ ಗಮನಹರಿಸಿ" ಎಂದು ಪರೋಕ್ಷವಾಗಿ ತಮ್ಮ ವಿರುದ್ಧ ಮಾತನಾಡುವವರಿಗೆ ಸಂತೋಷ್ ಟಾಂಗ್ ಕೊಟ್ಟಿದ್ದಾರೆ.