

ಕೊಟ್ಟೂರಪ್ಪ ಹೀರೆಕೊಪ್ಪಲು
ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ, ಮಹಿಳೆಯರು ಆಚರಿಸುವ ವರಮಹಾಲಕ್ಷ್ಮಿ ವ್ರತ ಮುಖ್ಯವಾದದ್ದು. ಶ್ರಾವಣ ಪೂರ್ಣಿಮೆಯ ಮುನ್ನ ಬರುವ ಶುಕ್ರವಾರ ದಿನ ಇದರ ಆಚರಣೆ. ಈ ದಿನವೇ ಏಕೆ ಆಚರಿಸಬೇಕು ಎಂಬ ಪ್ರಶ್ನೆ ಬರುತ್ತದೆ. ಆಯಾ ದೇವತಾಕೇಂದ್ರಗಳು ಸಹಜವಾಗಿ ತೆರೆದು ದೇವತಾನುಗ್ರಹವು ವಿಶೇಷವಾಗಿ ಹರಿಯುವುದಕ್ಕೆ ಒಳ ಹೊರ ಪ್ರಕೃತಿಗಳ ಅನುಕೂಲ ಕೂಡಿಬರುವ ದಿನವನ್ನು ಆಯಾ ದೇವತೆಯ ವಿಶೇಷ ಪೂಜೆಗೆ ಜ್ಞಾನಿಗಳು ನಿಯತ ಮಾಡಿರುತ್ತಾರೆ. ಈ ವ್ರತವನ್ನು ಮುತ್ತೈದೆಯರು ಮಾತ್ರ ಆಚರಿಸುವರು. ಇದು ನಿತ್ಯವ್ರತಗಳಲ್ಲಿ ಸೇರಿಲ್ಲವಾದರೂ,
ಜಗನ್ಮಾತೆಯ ಪ್ರಸನ್ನತೆಗೋಸ್ಕರ ಇದನ್ನು ಭಕ್ತಿ-ಶ್ರದ್ಧೆಗಳಿಂದ ಆಚರಿಸುವ ಭಕ್ತರು ಬಹು ಮಂದಿ ಇದ್ದಾರೆ. ಕೆಲವರ ಮನೆಯಲ್ಲಿ ವ್ರತ ಮಾಡುವ ಪದಟಛಿತಿ ಇರುತ್ತದೆ. ವ್ರತ ಮಾಡುವ ಪದ್ಧತಿ ಇಲ್ಲದಿದ್ದರೆ ಲಕ್ಷ್ಮಿದೇವಿಯ ಪೂಜೆ ಮಾಡುತ್ತಾರೆ. ಈ ಪರ್ವದಲ್ಲಿ ಆರಾಧಿಸಲ್ಪಡುವ ದೇವತೆ ಮಹಾಲಕ್ಷ್ಮೀ. ವರಗಳನ್ನು ದಯಪಾಲಿಸುವುದರಿಂದ ಮತ್ತು ಶ್ರೇಷ್ಠಳಾಗಿರುವುದರಿಂದ ಆಕೆಯು ವರಮಹಾಲಕ್ಷ್ಮೀ ಎನಿಸುತ್ತಾಳೆ. ಐಶ್ವರ್ಯ-ಅಭಿವೃದ್ಧಿಗಳ ದೇವತೆಯಾದ ಮಹಾಲಕ್ಷ್ಮಿಯನ್ನು ಮಂಡಲ(ಯಂತ್ರಪೀಠ)ದ ಮೇಲೆ ಇಟ್ಟಿರುವ ಕಲಶದಲ್ಲಿ ಆವಾಹಿಸಿ ಪೂಜಿಸುವುದು ಈ ವ್ರತದ ಮುಖ್ಯ ಕಾರ್ಯ.
ಒಮ್ಮೆ ದೂರ್ವಾಸಮಹರ್ಷಿಗಳ ಶಾಪದಿಂದ ಇಂದ್ರನುರಾಜ್ಯಭ್ರಷ್ಟನಾಗಲು, ಸ್ವರ್ಗಲಕ್ಷ್ಮಿಯೂ ಸ್ವರ್ಗವನ್ನು ಬಿಟ್ಟು ವೈಕುಂಠವನ್ನು ಸೇರಿದಳು. ಆಗ ದುಃಖಿತರಾದ ದೇವತೆಗಳೆಲ್ಲರೂ ಬ್ರಹ್ಮನನ್ನು ಮುಂದಿಟ್ಟುಕೊಂಡು ವೈಕುಂಠದಲ್ಲಿ ವಿಷ್ಣುವನ್ನು ಶರಣುಹೋದರು. ಪರಮ ದಯಾಳುವಾದ ವಿಷ್ಣುವಿನ ಆಜ್ಞೆಯಂತೆ ದೇವತೆಗಳು ದಾನವರೊಡನೆ ಸೇರಿ ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಮಥಿಸಲು, ಅಲ್ಲಿ ಸಂಪತ್ ಸ್ವರೂಪಿಣಿಯಾದ ಮಹಾಲಕ್ಷ್ಮಿಯು ಆವಿರ್ಭವಿಸಿ, ದೇವತೆಗಳಿಗೆ ವರವನ್ನು ಅನುಗ್ರಹಿಸಿದಳು ಹಾಗೂ ಮಹಾವಿಷ್ಣುವನ್ನು ವಿವಾಹವಾದಳು.
ಧನಲಕ್ಷ್ಮೀ, ಧಾನ್ಯಲಕ್ಷ್ಮೀ, ಸಂತಾನಲಕ್ಷ್ಮೀ, ವಿದ್ಯಾಲಕ್ಷ್ಮೀ, ಶೌರ್ಯಲಕ್ಷ್ಮೀ, ಕೀರ್ತಿಲಕ್ಷ್ಮೀ, ಸೌಮ್ಯಲಕ್ಷ್ಮೀ ಮತ್ತು ವಿಜಯಲಕ್ಷ್ಮೀ ಎಂಬಿವು ಅಷ್ಟಲಕ್ಷ್ಮೀ ರೂಪಗಳು ಎಂಬುದು ಆಗಮಶಾಸ್ತ್ರದಲ್ಲಿ ಪ್ರಸಿದ್ಧವಾಗಿದೆ. ಲಕ್ಷ್ಮೀ ಎಂಬ ಶಬ್ದಕ್ಕೆ ಎಲ್ಲವನ್ನೂ ಯಾವಾಗಲೂ ನೋಡುತ್ತಿರುವವಳು ಎಂಬ ಅರ್ಥವನ್ನು ನೋಡುತ್ತೇವೆ. ಸರ್ವಸಾಕ್ಷಿಯಾಗಿರುವ ಭಗವಂತನೊಡನೆ ನಿತ್ಯಯೋಗವನ್ನು ಹೊಂದಿ ಸರ್ವಜ್ಞಳಾಗಿ ಸರ್ವಸಾಕ್ಷಿಣಿಯಾಗಿರುವ ಜಗನ್ಮಾತೆಯೇ ಆಕೆ ಎಂಬ ಭಾವವನ್ನೂ ಆ ಶಬ್ದವು ಸೂಚಿಸುತ್ತದೆ. ಆಕೆಗೆ ಪ್ರಸಿದಟಛಿವಾಗಿರುವ ’ಶ್ರೀಃ’ ಎಂಬ ಪದವೂ ಆಕೆಯ ಸವೋತ್ತಮತ್ವವನ್ನು ಸ್ಪಷ್ಟವಾಗಿ ಸಾರುತ್ತದೆ. ಲಕ್ಷ್ಮೀ ಶಬ್ದದ ದಿವ್ಯವೂ ಭವ್ಯವೂ ಆದ ಅರ್ಥವ್ಯಾಪ್ತಿಯನ್ನು ಗಮನಿಸದೆ ಹಿಂದಿನ ಕಾಲದಲ್ಲೂ ಕೆಲವರು ಆಕೆಯನ್ನು ತಿರಸ್ಕಾರದಿಂದ ಉಲ್ಲೇಖಿಸಿದ್ದಾರೆ. ಆದರೆ ಅವರು ಅಪೇಕ್ಷಿಸುವ ಜನಸಂಪತ್ತು, ಗುಣಸಂಪತ್ತು, ಕಾರ್ಯಸಿದ್ಧಿ, ಲೋಕದ ಏಳಿಗೆ, ಮೋಕ್ಷ - ಈ ಎಲ್ಲವೂ ಲಕ್ಷ್ಮೀರೂಪವೇ ಆಗಿವೆ.
ಪೂಜಾವಿಧಾನ: ಈ ಉತ್ಸವದ ದಿವಸ ಸಾಯಂಕಾಲದವರೆಗೂ ಉಪವಾಸನಿಯಮದಲ್ಲಿದ್ದು ಕಲಶಾದಿಗಳಲ್ಲಿ ಶ್ರೀ ಜಗನ್ಮಾತೆಯನ್ನು ಆವಾಹನೆ ಮಾಡಿ ಆರಾಧನೆ ಮಾಡುವ ವ್ರತನಿಷ್ಠರೂ ಉಂಟು, ಆ ನಿಯಮವಿಲ್ಲದೆ ದೇವಿಪೂಜೆ ಮಾಡಿ ಹಬ್ಬವನ್ನು ಆಚರಿಸುವವರೂ ಉಂಟು. ವ್ರತನಿಷ್ಠೆಯುಳ್ಳವರು ಸಂಕಲ್ಪಸಮೇತವಾಗಿ ದೇವಿಯನ್ನು ಕಲಶ ವಿಗ್ರಹಾದಿಗಳಲ್ಲಿ ಆವಾಹಿಸಿ ಪೂಜೆ ಮಾಡಬೇಕು. ತಮಗೆ ಆಯುಸ್ಸು, ಆರೋಗ್ಯ, ಸಂತಾನ, ಐಶ್ವರ್ಯ, ಕ್ಷೇಮಾದಿ ಸಮಸ್ತ ಶುಭಫಲಗಳೂ ಕೈಗೂಡಲಿ ಎಂದು ಸಂಕಲ್ಪ ಮಾಡಬೇಕು.
ಧ್ಯಾನವೇ ಮುಂತಾದ ಷೋಡಶೋಪಚಾರ ಪೂಜೆಗಳನ್ನು ಸಮರ್ಪಿಸಬೇಕು. ಆ ಮಹಾಪೂಜೆಯಲ್ಲಿ ಕಲಶಪೂಜೆ ಪೀಠಪೂಜೆಗಳ ನಂತರ ಹೊಚ್ಚಹೊಸದಾದ ಹನ್ನೆರಡು ದಾರಗಳಿಂದಲೂ ಹನ್ನೆರಡು ಗ್ರಂಥಿಗಳಿಂದಲೂ ಕೂಡಿದ ಹಿರಣ್ಯವರ್ಣದ ತಂತುಪುಂಜವನ್ನು ಸ್ಥಾಪಿಸಿ ಅದರಲ್ಲಿ ಶ್ರೀದೇವಿಯನ್ನು ಆವಾಹಿಸಿ, ಪೂಜೆ ಮಾಡಬೇಕು. ಅಂಗಪೂಜೆ, ಪುಷ್ಪಪೂಜೆ, ಪತ್ರಪೂಜೆಗಳನ್ನೂ, ಅಷ್ಟೋತ್ತರ ಪೂಜೆಯನ್ನೂ ಸಮರ್ಪಿಸಬೇಕು, ದೋರದಲ್ಲಿ ಆವಾಹಿತಳಾದ ದೇವಿಗೆ ದ್ವಾದಶ ನಾಮಾವಳಿಗಳಿಂದ ಪೂಜೆಯನ್ನು ಸಲ್ಲಿಸಬೇಕು. ಈ ಪೂಜೆಯಲ್ಲಿ ಬಳಸುವ ವೈದಿಕ ಮಂತ್ರಗಳಲ್ಲಿ ಶ್ರೀಸೂಕ್ತವು ಮುಖ್ಯವಾದುದು. ಸಾಯಂಕಾಲದಲ್ಲಿ ದೇವಿಗೆ ವಿಶೇಷ ಪೂಜೆ. ಪೂಜೆಯಲ್ಲಿ ದೋರ ಎಂಬ ದಾರವನರ್ಪಿಸಿ ಅದನ್ನು ಬಲಗೈ ಮಣಿಕಟ್ಟಿನಲ್ಲಿ ಧರಿಸುವುದು ಅತಿ ಮುಖ್ಯವಾದ ಭಾಗ.
ಸಾಕ್ಷಾತ್ ಜಗನ್ಮಾತೆಯೇ ತಂತುರೂಪದಲ್ಲಿದ್ದು ಪೂಜೆಯನ್ನು ಒಪ್ಪಿಸಿಕೊಳ್ಳುತ್ತಾಳೆ. ಪೂಜೆಯ ಕೊನೆಯ ಭಾಗದಲ್ಲಿ ಇಷ್ಟಾರ್ಥಗಳನ್ನು ಅನುಗ್ರಹಿಸಬೇಕೆಂದು ಶ್ರದ್ಧಾಭಕ್ತಿಪೂರ್ವಕ ಆಕೆಯನ್ನು ಪ್ರಾರ್ಥಿಸಿ, ಆಕೆಯ ಅನುಮತಿ ಪಡೆದು, ದೋರವನ್ನು ತೆಗೆದುಕೊಂಡು, ನಮಸ್ಕಾರಪೂರ್ವಕ ಬಲಹಸ್ತದಲ್ಲಿ ಕಟ್ಟಿಕೊಳ್ಳಬೇಕು. ಆಕೆಯ ಅನುಮತಿಯಿಂದ ಹಳೆಯ ದಾರದ ವಿಸರ್ಜನೆಯನ್ನೂ ಮಾಡಬೇಕು. ಮುತ್ತೈದೆಯರಿಗೆ ಮಂಗಳದ್ರವ್ಯಗಳೊಡನೆ ಉಡುಗೊರೆಗಳನ್ನು ಕೊಡುವುದು ಪೂಜೆಯ ನಂತರದ ಕಾರ್ಯ. ವ್ರತದ ಫಲವಾಗಿ ಪತಿಯ ಆಯುರಾರೋಗ್ಯ, ಐಶ್ವರ್ಯ, ಸತ್ಸಂತಾನಗಳು ಲಭ್ಯವಾಗುತ್ತವೆ ಎಂಬ ನಂಬಿಕೆ, ಶ್ರದ್ಧೆ ಇದೆ.