

ಡೆಹ್ರಾಡೂನ್: ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಪಕ್ಷದ ಮೌಲ್ಯವನ್ನು ಕಡಿಮೆ ಮಾಡುತ್ತಿದ್ದಾರೆ. ಇದರ ಬಗ್ಗೆ ನೀವು ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದ ಮಾಜಿ ಶಾಸಕನನ್ನು ಉತ್ತರಾಖಂಡ ಬಿಜೆಪಿ ಪಕ್ಷದಿಂದ ವಜಾಗೊಳಿಸಿದೆ.
ರಾಜ್ಯದ ಮಾಜಿ ಸಚಿವ, ಹಾಲಿ ಶಾಸಕ ಲಖಿ ರಾಮ್ ಜೋಶಿ ಅವರು ನವೆಂಬರ್ 11ರಂದು ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ರಾಜ್ಯದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಕಪ್ಪು ಹಣ ಸಂಗ್ರಹದಲ್ಲಿ ನಿರತರಾಗಿದ್ದಾರೆ. ಅವರ ಮೇಲೆ ಸಿಬಿಐ ತನಿಖೆಗೆ ಹೈ ಕೋರ್ಟ್ ಆದೇಶಿಸಿದೆ. ಇದರಿಂದಾಗಿ ರಾಜ್ಯದ ಜನರು ಪಕ್ಷದ ಮೇಲಿದ್ದ ನಂಬಿಕೆ ಕಳೆದುಕೊಳ್ಳುವಂತಾಗಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದರು.
ಇದು ರಾಜ್ಯದ ಆಂತರಿಕ ವಿಚಾರವಾಗಿದ್ದು, ಈ ಕುರಿತಾಗಿ ರಾಮ್ ಜೋಶಿ ಅವರು ಮೊದಲು ರಾಜ್ಯದ ನಾಯಕರ ಜತೆ ಚರ್ಚಿಸಬೇಕಿತ್ತು. ಅದರ ಬದಲಾಗಿ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪಕ್ಷದ ಶಿಸ್ತನ್ನು ಕಾಪಾಡಿಕೊಳ್ಳದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ವಜಾಗೊಳಿಸಿದ್ದೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬನ್ಸಿಧರ್ ಭಗತ್ ತಿಳಿಸಿದ್ದಾರೆ.
ಪಕ್ಷ ನನ್ನನ್ನು ವಜಾ ಮಾಡಿರುವುದು ತಪ್ಪು. ನಾನು ರಾಜ್ಯದಲ್ಲಿ ಪಕ್ಷವನ್ನು ಕಟ್ಟಲು ಸಾಕಷ್ಟು ಕಷ್ಟ ಪಟ್ಟಿದ್ದೇನೆ. ಆರ್ಎಸ್ಎಸ್ ಸಂಘಟನೆಯೊಂದಿಗೇ ಬದುಕು ರೂಪಿಸಿಕೊಂಡಿದ್ದೇನೆ. ಆದರೆ ಪಕ್ಷ ಈ ರೀತಿ ಮಾಡುವುದು ನ್ಯಾಯವಲ್ಲ. ನಾನು ಈ ವಿಚಾರದಲ್ಲಿ ಮತ್ತೆ ಪ್ರಧಾನಿಯವರ ಬಳಿ ತೆರಳುತ್ತೇನೆ ಎಂದು ಲಖಿ ರಾಮ್ ಜೋಶಿ ಅವರು ಹೇಳಿದ್ದಾರೆ. (ಏಜೆನ್ಸೀಸ್)