

ಶ್ರೀನಗರ: ಜಮ್ಮು ಕಾಶ್ಮೀರದ ವಿವಿಧ ಭಾಗಗಳಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ದಾಳಿ ನಡೆಸಿ, ನಾಲ್ವರು ಯೋಧರು ಮತ್ತು ಮೂವರು ನಾಗರಿಕರನ್ನು ಹತ್ಯೆ ಮಾಡಿರುವ ಪಾಕಿಸ್ತಾನಿ ಸೇನೆಗೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ. ಗಡಿ ನಿಯಂತ್ರಣ ರೇಖೆ ಬಳಿಯಲ್ಲಿರುವ ಪಾಕಿಸ್ತಾನಿ ಬಂಕರ್ಗಳು ಮತ್ತು ಅಲ್ಲಿನ ಲಾಂಚ್ ಪ್ಯಾಡ್ಗಳನ್ನು ಸೇನೆ ಹೊಡೆದುರುಳಿಸಿದೆ.
ಜಮ್ಮು ಕಾಶ್ಮೀರದ ಬಾರಾಮುಲ್ಲಾ, ಕುಪ್ವಾರ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ಉರಿ, ನೌಗಾಂವ್, ತಂಗ್ಧರ್, ಕೆರನ್ ಮತ್ತು ಗುರೆಜ್ನಾದ್ಯಂತ ಹರಡಿರುವ ಪಾಕಿಸ್ತಾನಿ ಬಂಕರ್ಗಳನ್ನು ಸೇನೆ ಕ್ಷಿಪಣಿಗಳ ಮೂಲಕ ಹೊಡೆದುರುಳಿಸಿದೆ. ಜತೆಯಲ್ಲಿ ಕೆಲವು ಲಾಂಚ್ ಪ್ಯಾಡ್ಗಳನ್ನು ಕ್ಷಿಪಣಿಗಳ ಮೂಲಕ ಧ್ವಂಸಗೊಳಿಸಲಾಗಿದೆ. ಇದರ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಈ ದಾಳಿಯಲ್ಲಿ ಕನಿಷ್ಠ 7-8 ಪಾಕ್ ಸೈನಿಕರು ಮೃತರಾಗಿದ್ದಾರೆ. 10ಕ್ಕೂ ಅಧಿಕ ಯೋಧರು ಗಾಯಾಳುಗಳಾಗಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮೊದಲು ಪಾಕಿಸ್ತಾನ ಅನೇಕ ಸ್ಥಳಗಳಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ತನ್ನ ಅಟ್ಟಹಾಸ ಮೆರೆದಿತ್ತು. ಬಾರಾಮುಲ್ಲಾ ಜಿಲ್ಲೆಯ ನಾಂಬಲ ಸೆಕ್ಟರ್ನಲ್ಲಿ ಇಬ್ಬರು ಯೋಧರನ್ನು ಹತ್ಯೆ ಮಾಡಿತ್ತು. ಬಿಎಸ್ಎಫ್ನ ಜವಾನ್ ಒಬ್ಬರನ್ನು ಹತ್ಯೆ ಮಾಡಲಾಗಿತ್ತು. ಒಟ್ಟು ನಾಲ್ವರು ಯೋಧರು ಮತ್ತು ಮೂವರು ನಾಗರಿಕರು ಪಾಕ್ ಸೇನೆಯಿಂದಾಗಿ ಹುತಾತ್ಮರಾಗಿದ್ದರು. (ಏಜೆನ್ಸೀಸ್)