ಜೈಲಿನ ಬಾತ್​ರೂಂನಲ್ಲಿ ಕ್ಯಾಮೆರಾ ಹಾಕಿದ್ದರು- ಪಾಕ್​ನ ಕರಾಳ ಮುಖ ಬಿಚ್ಚಿಟ್ಟ ನವಾಜ್​ ಷರೀಫ್​ ಪುತ್ರಿ

sharrif
Published on

ಇಸ್ಲಾಮಾಬಾದ್: ಚೌಧರಿ ಶುಗರ್ ಮಿಲ್ಸ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಾರಿ ಬಂಧನಕ್ಕೆ ಒಳಗಾಗಿದ್ದ ಪಾಕಿಸ್ತಾನದ ಉಚ್ಛಾಟಿತ ಪ್ರಧಾನಿ ನವಾಜ್​ ಷರೀಫ್​ ಅವರ ಪುತ್ರಿ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಉಪಾಧ್ಯಕ್ಷ ಮರಿಯಮ್ ನವಾಜ್ ಷರೀಫ್ ಜೈಲಿನಲ್ಲಿ ತಾವು ಅನುಭವಿಸಿರುವ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ.

ನಾನು ಅನುಭವಿಸಿರುವ ಈ ಹಿಂಸೆಯನ್ನು ನೋಡಿದರೆ ಪಾಕಿಸ್ತಾನದಲ್ಲಿ ಯಾವ ಮಹಿಳೆಯೂ ಸುರಕ್ಷವಾಗಿಲ್ಲ ಎಂದಿದ್ದಾರೆ.

ಜೈಲಿನಲ್ಲಿ ತಮಗೆ ನಡೆಸಿಕೊಂಡಿರುವ ರೀತಿಯನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡ ಮರಿಯಮ್​, ನನ್ನ ಜೈಲಿನ ಸೆಲ್​ನಲ್ಲಿ ಮಾತ್ರವಲ್ಲದೇ, ಶೌಚಗೃಹದಲ್ಲಿಯೂ ಕ್ಯಾಮೆರಾ ಫಿಕ್ಸ್​ ಮಾಡಲಾಗಿತ್ತು. ಇದರಿಂದ ನನಗಾದ ಮುಜುಗರನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

"ನಾನು ಎರಡು ಬಾರಿ ಜೈಲಿಗೆ ಹೋಗಿದ್ದೇನೆ ಮತ್ತು ನಾನು, ಒಬ್ಬ ಮಹಿಳೆಯನ್ನು ಜೈಲಿನಲ್ಲಿ ಸರ್ಕಾರ ನಡೆಸಿಕೊಳ್ಳುವ ರೀತಿಯನ್ನೇನಾದರೂ ನಾನು ಬಾಯಿ ಬಿಟ್ಟರೆ, ಒಬ್ಬರೂ ಸಾರ್ವಜನಿಕವಾಗಿ ಮುಖ ತೋರಿಸಲಾಗದು, ಈ ಸತ್ಯ ಬಹಿರಂಗವಾದರೆ ತಮ್ಮ ಮುಖವನ್ನು ತೋರಿಸಲು ಅವರಿಗೆ ಧೈರ್ಯ ಸಾಕಾಗುವುದಿಲ್ಲ" ಎಂದಿದ್ದಾರೆ.

ಪೊಲೀಸರು ನಮ್ಮ ಮನೆಗೆ ನುಗ್ಗಿ ನನ್ನ ತಂದೆ ನವಾಜ್​ ಷರೀಫ್​ ಎದುರಿಗೇ ನನ್ನನ್ನು ಎಳೆದುಕೊಂಡು ಹೋದರು. ಅಸಭ್ಯವಾಗಿ ವರ್ತಿಸಿ ನನ್ನನ್ನು ಬಂಧಿಸಿದರು. ಇದನ್ನೆಲ್ಲಾ ನೋಡಿದರೆ ಖಂಡಿತವಾಗಿಯೂ ಮಹಿಳೆಯರಿಗೆ ಪಾಕಿಸ್ತಾನ ಸುರಕ್ಷಿತವಾಗಿಲ್ಲ ಎಂದೇ ಹೇಳಬೇಕು ಎಂದು ಅವರು ಹೇಳಿದರು.

ಸದ್ಯ ಪಿಟಿಐ ಸರ್ಕಾರವನ್ನು ಅಧಿಕಾರದಿಂದ ತೆಗೆದು ಹಾಕಲು ಸಂವಿಧಾನದ ವ್ಯಾಪ್ತಿಯಲ್ಲಿ ಮಿಲಿಟರಿ ಸ್ಥಾಪನೆಯೊಂದಿಗೆ ಮಾತುಕತೆ ನಡೆಸಲು ತಮ್ಮ ಪಕ್ಷ ಮುಕ್ತವಾಗಿದೆ ಎಂದೂ ಮರಿಯನ್ ಘೋಷಣೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net