

ತಿರುವನಂತಪುರ: ಕೇರಳದ ಮಾಜಿ ಸಚಿವ ಹಾಗೂ ರಾಜ್ಯ ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೋಡಿಯೇರಿ ಬಾಲಕೃಷ್ಣನ್ ಕೊನೆಗೂ ರಾಜೀನಾಮೆ ನೀಡಿದ್ದಾರೆ.
ಕೇರಳದ ಅತ್ಯಂತ ಪ್ರಭಾವಶಾಲಿ ಕಮ್ಯೂನಿಸ್ಟ್ ಮುಖಂಡರಲ್ಲೊಬ್ಬರೆನಿಸಿರುವ ಕೋಡಿಯೇರಿ ಬಾಲಕೃಷ್ಣನ್ ಅವರ ಮಗ ಬಿನೀಶ್ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಡ್ರಗ್ಸ್ ಕೇಸ್ನಲ್ಲಿ ಮಗ ಅರೆಸ್ಟ್ ಆಗಿದ್ದರು. ಬಿನೀಶ್ ಅವರನ್ನು ಅಕ್ಟೋಬರ್ 19ರಂದು ಬಂಧಿಸಲಾಗಿದೆ.
ಡ್ರಗ್ ಪೆಡ್ಲರ್ ಮೊಹಮ್ಮದ್ ಅನೂಪ್ ಅವರ ನಿವಾಸದಲ್ಲಿ ಬಿನೀಶ್ ಅವರ ಡೆಬಿಟ್ ಕಾರ್ಡ್ ಸಿಕ್ಕ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.
ಇದಾದ ಮೇಲೆ ಕೋಡಿಯೇರಿ ಅವರಿಗೆ ಸರ್ಕಾರ ರಜೆ ನೀಡಿ ಕಳುಹಿಸಿತ್ತು. ಆರೋಗ್ಯ ಹದಗೆಟ್ಟಿರುವ ಕಾರಣಕ್ಕೆ ರಜೆ ನೀಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿತ್ತು. ಇದರ ವಿರುದ್ಧ ಆನೇಕ ಆರೋಪಗಳು ಕೇಳಿಬಂದಿದ್ದು, ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು.
ಬಿನೀಶ್ ಡ್ರಗ್ಸ್ ಕೇಸ್ನಲ್ಲಿ ಸಿಲುಕಿಕೊಂಡಿದ್ದರೆ, ಕೋಡಿಯೇರಿ ಬಾಲಕೃಷ್ಣನ್ ಅವರ ಇನ್ನೋರ್ವ ಪುತ್ರ ಬಿನೋಯ್ ಬಾಲಕೃಷ್ಣನ್ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾರೆ. ಮುಂಬೈನ ಮಾಜಿ ಬಾರ್ ಡ್ಯಾನ್ಸರ್ ಮಹಿಳೆಯೊಬ್ಬಳು ಅತ್ಯಾಚಾರದ ದೂರು ದಾಖಲಿಸಿದ್ದಳು.
ಮದುವೆಯಾಗುತ್ತೇನೆಂದು ಭರವಸೆ ನೀಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಗರ್ಭವತಿ ಮಾಡಿ ವಂಚಿಸಿದನೆಂದು ಆಕೆ ಆರೋಪ ಮಾಡಿದ್ದಾಳೆ. ಆದರೆ, ಮುಂಬೈ ಕೋರ್ಟ್ವೊಂದರ ಆದೇಶದಂತೆ ಆಕೆಯ ಮಗುವಿನ ಅಪ್ಪನ ಪತ್ತೆಗೆ ಡಿಎನ್ಎ ಪರೀಕ್ಷೆ ನಡೆಸಲಾಗಿತ್ತು. ಆದರೆ ವಿಚಿತ್ರ ಎಂದರೆ ಪರೀಕ್ಷೆ ನಡೆದು ಎರಡು ವರ್ಷವಾದರೂ ಇನ್ನೂ ವರದಿ ಬಂದಿಲ್ಲ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಯ ನಂತರ ಅವರನ್ನು ರಜೆಯ ಮೇಲೆ ಕಳುಹಿಸಲಾಗಿತ್ತು. ಸರ್ಕಾರ ಅವರನ್ನು ಪೋಷಿಸುತ್ತಿದೆ ಎಂಬ ಟೀಕೆಗಳು ಕೇಳಿಬಂದಿದ್ದವು.
ಇದೀಗ ತಮ್ಮ ಹುದ್ದೆಗೆ ಕೋಡಿಯೇರಿ ರಾಜೀನಾಮೆ ನೀಡಿದ್ದು. ಇದಕ್ಕೆ ಅನಾರೋಗ್ಯದ ಕಾರಣ ನೀಡಿದ್ದಾರೆ. ಲಾಕ್ಡೌನ್ಗೆ ಮುನ್ನ ಅವರು ಅಮೆರಿಕದಲ್ಲಿ ಮೂರು ವಾರ ಕಾಲ ಚಿಕಿತ್ಸೆ ಪಡೆದುಕೊಂಡಿದ್ದರು. ಬಾಲಕೃಷ್ಣನ್ ಅವರು ಕೆಲ ಸಮಯದ ಹಿಂದೆ ಕ್ಯಾನ್ಸರ್ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಆರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಕೋಡಿಯೇರಿ ಬಾಲಕೃಷ್ಣನ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಎಲ್ಡಿಎಫ್ ಸಂಚಾಲಕ ಹಾಗೂ ಮಾಜಿ ಸಂಸದ ಎ ವಿಜಯರಾಘವನ್ ಅವರಿಗೆ ಹೆಚ್ಚುವರಿ ಜವಾಬ್ದಾರಿಯಾಗಿ ವಹಿಸಲಾಗಿದೆ.
ಅಂದಹಾಗೆ ಬಾಲಕೃಷ್ಣನ್ ಅವರು 2015ರಿಂದಲೂ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನಿರ್ವಹಿಸುತ್ತಾ ಬಂದಿದ್ದಾರೆ. 2001ರಿಂದ ಅವರು ಪಕ್ಷದ ಉನ್ನತ ಹುದ್ದೆಗಳನ್ನ ನಿರ್ವಹಿಸಿದ್ದಾರೆ. 2006ರಿಂದ 2011ರವರೆಗೆ ಅವರು ಅಚ್ಯುತಾನಂದನ್ ಅವರ ಸಂಪುಟದಲ್ಲಿ ಗೃಹ ಖಾತೆ ಮತ್ತು ಪ್ರವಾಸೋದ್ಯಮ ಖಾತೆಯ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.