

ಬೆಂಗಳೂರು: ವಿಧಾನಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಿಂದ ಯು.ಟಿ. ಖಾದರ್ ಅವರನ್ನು ಆಯ್ಕೆ ಮಾಡಲಾಗಿದ್ದು, ಇಂದಿನ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಲಿದೆ ಎಂಬ ಮಾಹಿತಿ ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.
ಆರ್.ವಿ. ದೇಶಪಾಂಡೆ ಹಾಗೂ ಎಚ್. ಕೆ. ಪಾಟೀಲ್ ಅವರು ಸ್ಪೀಕರ್ ಆಗಿ ಒಪ್ಪಲು ತಯಾರಿಲ್ಲ. ಇಬ್ಬರು ನಾಯಕರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಯು.ಟಿ. ಖಾದರ್ ಅವರನ್ನು ಆಯ್ಕೆ ಮಾಡಲು ಕಾಂಗ್ರೆಸ್ ಮುಂದಾಗಿದೆ. ಇಂದಿನ ಸಭೆಯ ಬಳಿಕ ನಿರ್ಧಾರ ಪ್ರಕಟವಾಗಲಿದೆ.
ಸ್ಪೀಕರ್ ಸ್ಥಾನ ಅಲಂಕರಿಸಲು ಹಿರಿಯ ನಾಯಕರು ನಿರಾಕರಿಸಿದ ಹಿನ್ನೆಲೆಯಲ್ಲಿ ರಾತ್ರಿಯೇ ಎಐಸಿಸಿ ನಾಯಕರು ಬೆಂಗಳೂರಿಗೆ ಬಂದಿಳಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಆಗಮಿಸಿದ್ದಾರೆ. ತಡರಾತ್ರಿ ಯು.ಟಿ ಖಾದರ್ ಅವರನ್ನು ಖಾಸಗಿ ಹೋಟೆಲ್ಗೆ ಕರೆಸಿಕೊಂಡು ಸ್ಪೀಕರ್ ಸ್ಥಾನದ ಬಗ್ಗೆ ಚರ್ಚೆ ನಡೆಸಿ, ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.
ಆರ್.ವಿ. ದೇಶಪಾಂಡೆ ಹಾಗೂ ಎಚ್.ಕೆ ಪಾಟೀಲ್ ಅವರು ಸ್ಪೀಕರ್ ಸ್ಥಾನ ನಿರಾಕರಣೆ ಮಾಡಿದ ಬಳಿಕ ಎಐಸಿಸಿ ನಾಯಕರು ಟಿ.ಬಿ. ಜಯಚಂದ್ರ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರು. ಆದರೆ, ಎಷ್ಟೇ ಪ್ರಯತ್ನಿಸಿದರೂ ಜಯಚಂದ್ರ ಅವರು ಮಾತ್ರ ಸಂಪರ್ಕಕ್ಕೆ ಸಿಗಲೇ ಇಲ್ಲ. ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಕೊನೆಗೆ ಯು.ಟಿ ಖಾದರ್ ಅವರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿದ್ದು, ಎರಡು ವರ್ಷಗಳ ನಂತರ ಸಚಿವ ಸ್ಥಾನ ನೀಡುವುದಾಗಿ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಭರವಸೆ ನೀಡಿದ್ದಾರೆ. ಎಐಸಿಸಿ ನಾಯಕರ ಭರವಸೆಯಿಂದಾಗಿ ಒಲ್ಲದ ಮನಸ್ಸಿನಿಂದಲೇ ಸ್ಪೀಕರ್ ಸ್ಥಾನಕ್ಕೆ ಖಾದರ್ ಒಪ್ಪಿಗೆ ಸೂಚಿಸಿದ್ದಾರೆ. ಯು.ಟಿ. ಖಾದರ್ ಅವರು ಮಂಗಳೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. (ದಿಗ್ವಿಜಯ ನ್ಯೂಸ್)