

ಬೆಂಗಳೂರು: ಬೇಸಿಗೆ ಕಾಲ ಬಂತು ಅಂದರೆ ಸಾಕು ಎಲ್ಲರೂ ತಲೆಮೇಲೆ ಕೈಯಿಟ್ಟುಕೊಳ್ಳುತ್ತಾರೆ ಕಾರಣ ಸುಡುವ ಬಿಸಿಲಿನ ಬೇಗೆಗೆ ತತ್ತರಿಸಬೇಕಲ್ಲಾ, ಏನಪ್ಪಾ ಮಾಡೋದು, ಎಷ್ಟಪ್ಪಾ ಫ್ಯಾನ್ ಗಾಳಿಯಲ್ಲೇ ಇರೋದು ಎಂದೆಲ್ಲಾ ಚಿಂತೆ ಮಾಡ್ತಾರೆ. ಆದರೆ, ಒಂದು ವಿಷಯಕ್ಕೆ ಮಾತ್ರ ಬೇಸಿಗೆಗಾಲವನ್ನು ಕೊಂಡಾಡುತ್ತಾರೆ ಹಾಗೂ ಎಲ್ಲರ ಬಾಯಲ್ಲಿ ನೀರೂರಲು ಪ್ರಾರಂಭವಾಗುತ್ತದೆ. ಇದರ ಹಿಂದಿರುವ ಕಾರಣ ರಸಭರಿತ ಮಾವಿನ ಹಣ್ಣು.
ಹೌದು, ಮಾವಿನ ಹಣ್ಣು ಅಂದರೆ ಯಾರಿಗೆ ಇಷ್ಟವಿಲ್ಲಾ ಹೇಳಿ? ಹಣ್ಣುಗಳ ರಾಜ ಮಾವನ್ನು ಸವಿಯಲು ಜನರು ಆಸೆಯಿಂದ ಕಾಯ್ತಿರುತ್ತಾರೆ. ಬಗೆಬಗೆಯ ಮಾವುಗಳಲ್ಲಿ ಹೆಚ್ಚು ಪ್ರಖ್ಯಾತಿ ಹೊಂದಿರುವುದು ರಸಪೂರಿ ಮಾವಿನ ಹಣ್ಣು. ಈ ಹಣ್ಣನ್ನು ರಸ್ತೆಬದಿ ಅಥವಾ ಹಣ್ಣಿನ ಅಂಗಡಿಗಳಲ್ಲಿ ಕಂಡರೆ ಸಾಕು ನಮ್ಮ ಜನ ಕೆಜಿಗಟ್ಟಲೇ ಹಣ್ಣನ್ನು ಖರೀದಿ ಮಾಡಿ, ಮನೆಯ ಫ್ರಿಡ್ಜ್ನಲ್ಲಿ ಇರಿಸಿ ಸೇವಿಸುತ್ತಾರೆ.
ಆದರೆ, ಇದು ಸಿಟಿಗಳಲ್ಲಿ ಮಾತ್ರ. ಹಳ್ಳಿಗಳಲ್ಲಿ ಅಥವಾ ತೋಟಗಳಲ್ಲಿ ಮಾವಿನ ಮರಗಳನ್ನು ಕಂಡವರು, ಅದರ ಗೊಂಚಲಿನಲ್ಲಿ ಬಿಟ್ಟಿರುವ ಹಣ್ಣನ್ನು ಕೀಳಲು ಹರಸಾಹಸ ಪಡುವುದನ್ನು ನಾವೆಲ್ಲಾ ನೋಡಿದ್ದೇವೆ. ಮರವೇರಿ ಹಣ್ಣು ಕೀಳುವ ಪ್ರಕ್ರಿಯೆ ಒಂದಾದರೆ, ಕಲ್ಲು ಬೀಸುವುದು, ಕೋಲಿನಲ್ಲಿ ಕೆಡುವುದು ಮತ್ತೊಂದು ಪ್ರಕ್ರಿಯೆಯಾಗಿದೆ. ಆದರೆ, ಇದ್ಯಾವುದನ್ನು ಮಾಡದೆ, ಸುಂದರ, ಸರಳ, ಸುಲಭ ಉಪಾಯ ಬಳಸಿಕೊಂಡು ನಿಂತಲ್ಲೇ ಮಾವನ್ನು ಕಿತ್ತುವ ಈ ವಿಡಿಯೋ ಇದೀಗ ನೋಡುಗರ ಗಮನಸೆಳೆದಿದೆ.
ಕುಡಿದ ಪ್ಲಾಸ್ಟಿಕ್ ಬಾಟಲಿಯನ್ನು ಎಸೆಯದೆ, ಅದನ್ನು ಈ ರೀತಿ ಕೂಡ ಮರುಬಳಕೆ ಮಾಡಿಕೊಳ್ಳಬಹುದು ಎಂದು ತೋರಿಸಿಕೊಟ್ಟ ವ್ಯಕ್ತಿಗೆ, ಸದ್ಯ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ ಒಂದು ಖಾಲಿ ಬಾಟಲಿಯ ಕೆಳಗಿನ ತುದಿಯನ್ನು ಕತ್ತರಿಸಿ, ಅದರಿಂದ ಹೇಗೆ ಹಣ್ಣನ್ನು ಸುಲಭವಾಗಿ ಕೀಳಬಹುದು ಎಂಬುದನ್ನು ನೀವು ದೃಶ್ಯದಲ್ಲಿ ನೋಡಿ ತಿಳಿಯಬಹುದಾಗಿದೆ.