

Tiger Urine:ಬಿಳಿ ವೈನ್ ಜತೆ ಹುಲಿ ಮೂತ್ರ ಬೆರಸಿ ಕುಡಿಯವುದರಿಂದ ರುಮಾಟಾಯ್ಡ್ ಸಂಧಿವಾತಕ್ಕೆ ಉತ್ತಮ ಪರಿಣಾಮಕಾರಿ ಔಷಧ ಎಂದು ಇಲ್ಲಿನ ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿರುವ ಬಿಫೆಂಗ್ಸ್ಕಿಯಾ ವನ್ಯಜೀವಿ ಮೃಗಾಲಯದ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಈ ವರದಿ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚೀನಾದ್ಯಂತ ವೈರಲ್ ಆಗಿದ್ದು, ಈ ಹಿನ್ನೆಲೆ ಸಿಚುವಾನ್ ಪ್ರಾಂತ್ಯದಲ್ಲಿ ಹುಲಿಯ ಮೂತ್ರಕ್ಕೆ ಭಾರಿ ಬೇಡಿಕೆ ಬಂದಿದೆ. ಒಂದು ಬಾಟಲ್ ಮೂತ್ರಕ್ಕೆ (250ಗ್ರಾಂ) 50 ಯುವಾನ್ ನಿಗದಿ ಮಾಡಲಾಗಿದೆ. ಅಂದರೆ ಭಾರತೀಯ ರೂ.ಗಳಲ್ಲಿ 600 ರೂ,. ಅಲ್ಲದೆ, ಈ ಕುರಿತು ಸ್ಥಳೀಯರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಲ್ಲಿನ ವರದಿಗಳು ಉಲ್ಲೇಖಿಸಿವೆ.
ಇನ್ನು ಬಾಟಲ್ ಮೇಲೆ ಹಾಕಿರುವ ಮಾಹಿತಿ ಪ್ರಕಾರ, ಈ ಮೂತ್ರ ಬಳಸುವುದರಿಂದ ಸಂಧಿವಾತ ಮತ್ತು ಉಳುಕು ಸ್ನಾಯುಗೆ ಉತ್ತಮ ಔಷದ ಎಂದು ಬರೆಯಲಾಗಿದೆ. ಶುಂಠಿ ಚೂರುಗಳನ್ನು ಬಳಸಿ ಬಿಳಿವೈನೊಂದಿಗೆ ಈ ಹುಲಿ ಮೂತ್ರ ಬೆರಸಿ ಕುಡಿಯುವುದರಿಂದ(ಸಂಧಿವಾತ) ರೋಗ ಶೀಘ್ರ ಗುಣಮುಖವಾಗುತ್ತದೆ. ಅಲರ್ಜಿಯ ಸಂದರ್ಭದಲ್ಲಿ ಇದನ್ನು ಬಳಸಬೇಡಿ ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಹುಲಿಗಳು ಮೂತ್ರವನ್ನು ಮೃಗಾಲಯದಲ್ಲಿಯೇ ಸಂಗ್ರಹಿಸಲಾಗುತ್ತದೆ. ಅಲ್ಲಿಂದಲೇ ಬಾಟಲ್ ತಯಾರು ಮಾಡಿ ಮಾರಾಟ ಮಾಡಲಾಗುತ್ತದೆ ಎಂದು ಮೃಗಾಲಯದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಮೂತ್ರ ಸಂಗ್ರಹಿಸುವ ಹುಲಿಗಳು ಸೋಂಕು ರಹಿತ ಇದ್ದವೆಯೇ ಎಂದು ಧೃಢಪಡಿಸಿಲ್ಲ.
ಸಾಕ್ಷ್ಯಾಧಾರಗಳು ಇಲ್ಲ ಊಹೆಯ ಮೇಲೆ ಇಂತಹ ಪ್ರಯೋಗಳು ಏಕಾಏಕಿ ಮಾಡಬಾರದು. ಅಲ್ಲದೇ ಹುಲಿಯ ಮೂತ್ರ ಬಗ್ಗೆ ಯಾವುದೇ ವರದಿಗಳ ಉಲ್ಲೇಖವಿಲ್ಲ. ಹೀಗಾಗಿ, ಇದು ಅಪಾಯಕಾರಿ ಎಂದು ಚೀನಾದ ಕೆಲ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)