

ಆಡಳಿತಾರೂಢ ರಿಪಬ್ಲಿಕನ್ ಮತ್ತು ಪ್ರತಿಪಕ್ಷ ಡೆಮಾಕ್ರಟಿಕ್ ಈ ಎರಡೂ ಪಕ್ಷಗಳು ಭಾರತೀಯ ಸಮುದಾಯದವರ ಮತ ಸೆಳೆಯಲು ಮತ್ತು ಭಾರತದೊಂದಿಗಿನ ಬಾಂಧವ್ಯವನ್ನು ಗಟ್ಟಿ ದನಿಯಲ್ಲಿ ಹೇಳಲು ಪ್ರಸ್ತಾಪಿಸುತ್ತಿವೆ. ಅಮೆರಿಕದಲ್ಲಿ 14 ಲಕ್ಷಕ್ಕಿಂತಲೂ ಅಧಿಕ ಭಾರತೀಯ ಸಮುದಾಯದರ ಮತಗಳಿರುವುದು ಈ ಓಲೈಕೆಗೆ ಕಾರಣ. 2019ರ ಸೆಪ್ಟೆಂಬರ್ನಲ್ಲಿ ಹ್ಯೂಸ್ಟನ್ನಲ್ಲಿ 50 ಸಾವಿರ ಅನಿವಾಸಿ ಭಾರತೀಯರು ಪಾಲ್ಗೊಂಡಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ವೇದಿಕೆ ಹಂಚಿಕೊಂಡ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು, ಮೋದಿ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ಅಲ್ಲದೆ, ಮೋದಿಯವರಿಂದ ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಎಂದು ಹೇಳಿಸುವಲ್ಲಿ ಯಶಸ್ವಿಯಾಗಿ, ಭಾರತೀಯ ಸಮುದಾಯಕ್ಕೆ ತಾನೇ ಆಪ್ತ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡಿದರು. ಅಲ್ಲದೆ, ‘ಭಾರತಕ್ಕೆ ಬನ್ನಿ’ ಎಂಬ ಮೋದಿಯವರ ಆಹ್ವಾನ ಒಪ್ಪಿಕೊಂಡು ಈ ವರ್ಷದ ಫೆಬ್ರವರಿಯಲ್ಲಿ ಎರಡು ದಿನಗಳ ಭಾರತ ಭೇಟಿಗೆ ಆಗಮಿಸಿದ ಟ್ರಂಪ್ ಮಹತ್ವದ ರಕ್ಷಣಾ ಒಪ್ಪಂದಗಳಿಗೆ ಅಂಕಿತ ಹಾಕುವ ಜತೆಗೆ ಅಹಮದಾಬಾದ್ನಲ್ಲಿ ನಡೆದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 1.25 ಲಕ್ಷ ಜನರು ಭಾಗವಹಿಸಿದ್ದ ಈ ರ್ಯಾಲಿಯನ್ನು ಅವರು ಅಮೆರಿಕಕ್ಕೆ ಮರಳಿದ ಮೇಲೂ ಹಲವು ಬಾರಿ ನೆನಪಿಸಿಕೊಂಡರು.
ಇತ್ತೀಚೆಗೆ ಕರೊನಾ ಸೋಂಕಿನಿಂದ ಗುಣಮುಖರಾಗಿ ಮತ್ತೆ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಟ್ರಂಪ್, ಮುಂದೆಯೂ ಭಾರತದೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ. ಅದೇನಿದ್ದರೂ, ಎಚ್1ಬಿ ವೀಸಾ ಸೇರಿದಂತೆ ಹಲವು ವಿಷಯಗಳಲ್ಲಿ ಭಾರತೀಯ ಮೂಲದವರ ಹಿತಕ್ಕೆ ಧಕ್ಕೆ ತರುವಂಥ ನಿರ್ಣಯ ಕೈಗೊಂಡ ಟ್ರಂಪ್, ಅದನ್ನು ಸಮರ್ಥಿಸಿಯೂ ಕೊಂಡಿದ್ದಾರೆ. ಹೀಗಿರುವಾಗ ಈ ಬಾರಿಯೂ ಭಾರತೀಯ ಮೂಲದವರ ಮತಗಳು ಟ್ರಂಪ್ ಕಡೆಗೆ ವಾಲುವವೇ ಎಂಬುದು ಕುತೂಹಲಕರ. ಈ ನಡುವೆ ಸಮೀಕ್ಷೆಯೊಂದು ಭಾರತೀಯ ಮೂಲದವರು ಜೋ ಬಿಡೆನ್ ಪರ ಹೆಚ್ಚು ಒಲವು ಹೊಂದಿದ್ದಾರೆ ಎಂದು ತಿಳಿಸಿದ್ದು, ರಿಪಬ್ಲಿಕನ್ ಪಕ್ಷದ ನಿದ್ದೆಗೆಡಿಸಿದೆ.
ಮೋದಿ ಮಾತು ಉಭಯ ದೇಶಗಳ ಮಧ್ಯೆ ವಿಶ್ವಾಸ ಬಹಳ ಮುಖ್ಯ. ಏಕೆಂದರೆ ವಿಶ್ವಾಸವಿರುವಲ್ಲಿ ಸ್ನೇಹಕ್ಕೆ ಕುಂದಿಲ್ಲ. ಇಂಥ ಮೈತ್ರಿ ಭಾರತ-ಅಮೆರಿಕ ಮಧ್ಯೆ ಬೆಳೆದಿದೆ. ನಾನು ಅಮೆರಿಕಕ್ಕೆ ಹೋದಾಗ ‘ಶ್ವೇತಭವನಕ್ಕೆ ಭಾರತೀಯರು ನೈಜ ಗೆಳೆಯರು’ ಎಂದು ಟ್ರಂಪ್ ಹೇಳಿದ್ದರು. ಇಂಥ ವಿಶ್ವಾಸವನ್ನು ನಾವು ಸಂಪಾದಿಸಿರುವುದಕ್ಕೆ ಮತ್ತು ಭಾರತದ ಪ್ರಗತಿಯಲ್ಲಿ ಅಮೆರಿಕ ಜತೆಗಿರುವುದಕ್ಕೆ ಸಂತಸ ಮತ್ತು ಹೆಮ್ಮೆ ಎನಿಸಿತು.
ಬಿಡೆನ್ ಕಡಿಮೆಯೇನಲ್ಲ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಕೂಡ ಭಾರತ ಮತ್ತು ಭಾರತೀಯರ ಸಾಧನೆ ಬಗ್ಗೆ ಪ್ರಚಾರ ಸಭೆಗಳಲ್ಲಿ ಮಾತಾಡುವ ಜತೆಗೆ ಮುಂದಿನ ದಿನಗಳಲ್ಲಿ ಅದು ‘ವ್ಯೂಹಾತ್ಮಕ ಪಾಲುದಾರ ರಾಷ್ಟ್ರ’ವಾಗಿ ಇರಲಿದೆ ಎಂದಿದ್ದಾರೆ. ಬಿಡೆನ್ ಮಾತು ಎಷ್ಟು ನಿಜವೋ ಗೊತ್ತಿಲ್ಲ; ಆದರೆ ಅವರು ಪ್ರತಿನಿಧಿಸುವ ಡೆಮಾಕ್ರಟಿಕ್ ಪಕ್ಷ ಮಾತ್ರ ಈ ಹಿಂದೆ ಭಾರತಕ್ಕೆ ಪ್ರತಿಕೂಲ ಆಗುವಂಥ ನಿರ್ಣಯಗಳನ್ನು ತಳೆದಿತ್ತು. ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ವಿದೇಶಾಂಗ ಸಚಿವೆಯಾಗಿದ್ದಾಗ ಆಗಿನ ಸರ್ಕಾರ 2002ರ ಗುಜರಾತ್ ಗಲಭೆಗೆ ಸಂಬಂಧಿಸಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ನಿಷೇಧ ಹೇರಿತ್ತು. ಸ್ವತಃ ಹಿಲರಿಯೇ ಈ ಕ್ರಮದ ಹಿಂದಿನ ಮಿದುಳಾಗಿದ್ದರು.
ಉಭಯ ರಾಷ್ಟ್ರಗಳ ಘನಿಷ್ಠ ಸಂಬಂಧ
ವಿಶ್ವದಲ್ಲಿ ಅತಿ ಹೆಚ್ಚು ಸಾಮಗ್ರಿಗಳನ್ನು ರಫ್ತು ಮಾಡಿಕೊಳ್ಳುವ ರಾಷ್ಟ್ರ ಭಾರತ ಮತ್ತು ಅಮೆರಿಕ. ಜಂಟಿ ಸಮರಾಭ್ಯಾಸಗಳನ್ನು ಹೆಚ್ಚಾಗಿ ನಡೆಸುವುದು ಭಾರತ-ಅಮೆರಿಕ, ಈ ಎರಡೂ ದೇಶಗಳ ಮಧ್ಯೆಯೇ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಸಹಕಾರ ಇದೆ. ಭಾರತದ ಡಿಜಿಟಲ್ ಆರ್ಥಿಕತೆಯಲ್ಲಿ ಹೂಡಿಕೆಗೆ ಅಮೆರಿಕಕ್ಕೆ ಅಧಿಕ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಅಮೆರಿಕವು ಭಾರತದ ಸ್ವಾಭಾವಿಕ ಪಾಲುದಾರ ರಾಷ್ಟ್ರವಾಗಿದೆ. ಭಯೋತ್ಪಾದನೆ ದಮನದಲ್ಲಿ ಭಾರತ ಮತ್ತು ಅಮೆರಿಕ ಒಂದಾಗಿ ಹೋರಾಡುತ್ತಿವೆ.
ಟ್ರಂಪ್ ಟಾಕ್ ನಾನು ಅಮೆರಿಕದ ಅಧ್ಯಕ್ಷನಾದ ಮೇಲೆ ಭಾರತಕ್ಕೆ ರಫ್ತಿನ ಪ್ರಮಾಣ ಶೇಕಡ 60ರವರೆಗೆ ಏರಿಕೆ ಆಗಿದೆ. ಇಂಧನ ಶಕ್ತಿ ವಿಷಯದಲ್ಲಿ ಇದು ಶೇ. 500 ತಲುಪಿದೆ. ಶಾಸನಾತ್ಮಕ ನಿಬಂಧನೆಗಳು ವ್ಯಾಪಾರದಲ್ಲಿ ಇರಬೇಕು. ಆದರೆ, ಅನಗತ್ಯವೆಂದು ಕಂಡುಬರುವ ಷರತ್ತುಗಳನ್ನು ಕೈಬಿಡಲಾಗುವುದು.
ಮುನ್ನುಡಿ ಬರೆದ ಸೌಂದ್ ಅಮೆರಿಕನ್ ಕಾಂಗ್ರೆಸ್ಗೆ ಆಯ್ಕೆಯಾದ ಮೊದಲ ಭಾರತೀಯ ಅಮೆರಿಕನ್ ದಲೀಪ್ ಸಿಂಗ್ ಸೌಂದ್. ಪಂಜಾಬ್ ಮೂಲದ ಅವರು 1920ರಲ್ಲಿ ಅಮೆರಿಕ ತಲುಪಿ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದರು. ಲೆಕ್ಕಶಾಸ್ತ್ರಜ್ಞರಾಗಿದ್ದ ಅವರು, ಅಮೆರಿಕನ್ ಮಹಿಳೆಯನ್ನು ವಿವಾಹವಾಗಿ 1949ರಲ್ಲಿ ಅಲ್ಲಿನ ಪೌರತ್ವ ಪಡೆದರು. 1950ರಲ್ಲಿ ಕೌಂಟಿ ಜಡ್ಜ್ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದರು. ಆದರೆ, ಪೌರತ್ವ ಪಡೆದು ಬಹಳ ವರ್ಷ ಆಗಿರದ ಹಿನ್ನೆಲೆಯಲ್ಲಿ ಅವರ ಗೆಲುವು ಅನೂರ್ಜಿತವಾಯಿತು. 1953ರಲ್ಲಿ ಪುನಃ ಅದೇ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದರು. 1955ರಲ್ಲಿ ಮೊದಲ ಬಾರಿ ಡೆಮಾಕ್ರಟಿಕ್ ಪಕ್ಷದಿಂದ ಕಾಂಗ್ರೆಸ್ಗೆ ಸ್ಪರ್ಧಿಸಿ ಗೆಲುವು ಕಂಡರು.
ಕಮಲಾ ಮೋಡಿ
ಚೆನ್ನೈ ಮೂಲದ ಡಾ.ಶ್ಯಾಮಲಾ ಗೋಪಾಲನ್ ಹ್ಯಾರಿಸ್ ಅವರ ಪುತ್ರಿ ಕಮಲಾ ಹ್ಯಾರಿಸ್. ತಂದೆ ಜಮೈಕಾ ಮೂಲದವರು. ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅವರು, ಭಾರತದಲ್ಲಿ ಕಳೆದ ಬಾಲ್ಯದ ದಿನಗಳನ್ನು, ಭಾರತದ ಶಕ್ತಿಯನ್ನು ಪ್ರಚಾರ ಸಭೆಯಲ್ಲಿ ಮೆಲುಕು ಹಾಕುತ್ತ ಮತಬುಟ್ಟಿಗೆ ಕೈ ಹಾಕಿದ್ದಾರೆ. ಟ್ರಂಪ್ ವಿರುದ್ಧ ಆಕ್ರಮಕ ಪ್ರಚಾರ ನಡೆಸುತ್ತಿದ್ದಾರೆ. ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿ, ಬಳಿಕ ಸೆನೆಟ್ ಸದಸ್ಯರಾಗಿ ಕೆಲಸ ಮಾಡಿರುವ ಕಮಲಾರಿಗೆ ಆಡಳಿತಾತ್ಮಕ ಅನುಭವವೂ ಇದೆ. ಭಾರತೀಯ ಮೂಲದವರನ್ನು ಟ್ರಂಪ್ ಒಲೈಸುವ ತಂತ್ರ ಹೆಣೆಯುತ್ತಿರುವಾಗಲೇ ಡೆಮಾಕ್ರಟಿಕ್ ಕಮಲಾರನ್ನು ಕಣಕ್ಕಿಳಿಸುವ ಘೋಷಣೆ ಮಾಡಿತು.
ಭಾರತೀಯ ಮೂಲದವರ 26 ಲಕ್ಷಕ್ಕೂ ಅಧಿಕ ಮತಗಳು
ಮುಕ್ಕಾಲು ಪಾಲು ಭಾರತೀಯ ಅಮೆರಿಕನ್ನರು ಜೋ ಬಿಡೆನ್ರಿಗೆ ಮತ ನೀಡಲು ನಿಶ್ಚಯಿಸಿದ್ದಾರೆ ಎಂದು ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ತಿಳಿಸಿದೆ. ವಲಸಿಗರ ಪೈಕಿ ಭಾರತೀಯ ಅಮೆರಿಕನ್ನರು ಎರಡನೇ ಅತಿ ದೊಡ್ಡ ಸಂಖ್ಯೆಯಲ್ಲಿದ್ದು, ಸರಿಸಮಾರು 41.60 ಲಕ್ಷ ಜನರು ಇದ್ದಾರೆ. ಈ ಪೈಕಿ 26.20 ಲಕ್ಷ ಜನರು ಅಮೆರಿಕದ ಪೌರತ್ವ ಹೊಂದಿದ್ದಾರೆ. ಒಟ್ಟು ನೋಂದಾಯಿತ ಮತದಾರರ ಪೈಕಿ ಭಾರತೀಯ ಅಮೆರಿಕನ್ನರ ಸಂಖ್ಯೆ ಶೇಕಡ 1ಕ್ಕಿಂತ ಕಡಿಮೆ.
* ಶೇಕಡ 72 ಭಾರತ ಮೂಲದ ಅಮೆರಿಕನ್ನರ ಬೆಂಬಲ ಬಿಡೆನ್ಗೆ
* ಟ್ರಂಪ್ರನ್ನು ಬೆಂಬಲಿಸಲಿರುವ ಭಾರತೀಯ ಮೂಲದವರು ಶೇಕಡ 22