

ನವದೆಹಲಿ: ನಮ್ಮ ದೇಶದಲ್ಲಿ ಕಳೆದ ವರ್ಷ ಸೈಬರ್ ಅಪರಾಧಗಳಿಂದಾಗಿ ಆಗಿರುವ ನಷ್ಟದ ಪ್ರಮಾಣ ಬರೋಬ್ಬರಿ 1.25 ಲಕ್ಷ ಕೋಟಿ ರೂಪಾಯಿ!. ದೇಶ ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು 5ಜಿ ನೆಟ್ವರ್ಕ್ ಹಾಗೂ ಇನ್ನಿತರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಅಪರಾಧ ಪ್ರಮಾಣ ಇನ್ನೂ ಹೆಚ್ಚಾಗಲಿದೆ ಎಂದು ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಕೋ ಆರ್ಡಿನೇಟರ್ ಲೆಫ್ಟಿನೆಂಟ ಜನರಲ್ ಡಾ. ರಾಜೇಶ್ ಪಂತ್ ಮಂಗಳವಾರ ಎಚ್ಚರಿಸಿದ್ದಾರೆ.
ಆಸ್ಪತ್ರೆಗಳೇ ಈಗ ಟಾರ್ಗೆಟ್ ಅವರಿಗೆ ಯಾವುದೇ ಕರುಣೆ ಇಲ್ಲ, ನಿರ್ದಾಕ್ಷಿಣ್ಯವಾಗಿ ಕನ್ನ ಹಾಕುವ ಕೆಲಸ ಮಾಡುತ್ತಾರೆ. ಕ್ರಿಮಿನಲ್ಗಳು ಮನೆಯಲ್ಲಿದ್ದುಕೊಂಡೇ ಕನ್ನ ಹಾಕುವ ಕೆಲಸ ಮುಂದುವರಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳವರು ದುಡ್ಡು ಕೊಟ್ಟೇ ಕೊಡುತ್ತಾರೆ ಎಂಬುದನ್ನು ಅಪರಾಧಿಗಳು ಬಲ್ಲರು ಎಂದು ಪಂತ್ ಹೇಳಿದ್ದಾರೆ.
ಕಳೆದ ವರ್ಷ (2019)ದ ಲೆಕ್ಕಾಚಾರ ಪ್ರಕಾರ ಆಗಿರುವ ನಷ್ಟದಲ್ಲಿ ಸೈಬರ್ ವಂಚನೆಗಳ ಕೊಡುಗೆಯೇ ಹೆಚ್ಚು. ರಾನ್ಸಮ್ವೇರ್ ದಾಳಿಗಳು ನಿತ್ಯವೂ ಹೆಚ್ಚಾಗುತ್ತಿದೆ. ಜನರಷ್ಟೇ ಅಲ್ಲ, ಆಸ್ಪತ್ರೆಗಳು, ವಾಣಿಜ್ಯೋದ್ಯಮಗಳೂ ಈ ಕ್ರಿಮಿನಲ್ ಅಪರಾಧಿಗಳ ಟಾರ್ಗೆಟ್ ಆಗುತ್ತಿವೆ. ಆ್ಯಪ್ಗಳ ಮೂಲಕವಷ್ಟೇ ಅಲ್ಲ, ಬೇರೆ ಬೇರೆ ವಿಧಾನಗಳ ಮೂಲಕ ಈ ಅಪರಾಧ ಕೃತ್ಯ ನಡೆಯುತ್ತಿದೆ ಎಂದು ಪಂತ್ ಎಫ್ಐಸಿಸಿಐ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವರಿಸಿದರು.
ನಮ್ಮ ವಿಶ್ಲೇಷಣೆ ಪ್ರಕಾರ ಈ ಕ್ರಿಮಿನಲ್ಗಳು ಮೊಬೈಲ್ ಫೋನ್ಗಳನ್ನು ಆ್ಯಪ್ಗಳಷ್ಟೇ ಅಲ್ಲ, ಹದಿನೈದು ಬೇರೆ ಬೇರೆ ದಾಳಿ ವಿಧಾನಗಳ ಮೂಲಕ ಖಾತೆಗೆ ಕನ್ನ ಹಾಕುವ ಕೆಲಸ ಮಾಡುತ್ತಾರೆ. ಇದರಲ್ಲಿ, ಆಪರೇಟಿಂಗ್ ಸಿಸ್ಟಮ್, ಮೊಬೈಲ್ ಫೋನ್ನ ಪ್ರೊಸೆಸರ್, ಮೆಮೋರಿ ಚಿಪ್, ಕಮ್ಯೂನಿಕೇಶನ್ಸ್ ಇಂಟರ್ಫೇಸ್, ಬ್ಲೂಟೂತ್, ವೈಫೈಗಳೂ ಒಳಗೊಂಡಿವೆ ಎಂದು ಪಂತ್ ಹೇಳಿದರು. (ಏಜೆನ್ಸೀಸ್)