29ಕ್ಕೆ ಮೇಲ್ಮನೆ ಚುನಾವಣೆ; ಕೇಂದ್ರ ಚುನಾವಣಾ ಆಯೋಗ ಘೋಷಣೆ

Vidhan Soudha 9 June 20
Published on

ಬೆಂಗಳೂರು: ರಾಜ್ಯಸಭೆ ಚುನಾವಣೆ ಬೆನ್ನಲ್ಲಿಯೇ ವಿಧಾನ ಪರಿಷತ್ ಚುನಾವಣೆಗೂ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಜೂ.30ಕ್ಕೆ ತೆರವಾಗಲಿರುವ ವಿಧಾನ ಪರಿಷತ್​ನ ಏಳು ಸ್ಥಾನಗಳಿಗೆ ಜೂ.29ರಂದು ಚುನಾವಣೆ ನಡೆಯಲಿದೆ. ಬಿಜೆಪಿ 4, ಕಾಂಗ್ರೆಸ್ 2 ಹಾಗೂ ಜೆಡಿಎಸ್ ಒಂದು ಸ್ಥಾನ ಗೆಲ್ಲುವುದು ನಿಚ್ಚಳವಾಗಿದೆ.

ವಿಧಾನಸಭೆಯಲ್ಲಿ ಪ್ರಸ್ತುತ ಒಬ್ಬ ನಾಮನಿರ್ದೇಶನ ಸದಸ್ಯರೂ ಸೇರಿ ಒಟ್ಟು 223 ಶಾಸಕರಿದ್ದಾರೆ. ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿ ಗೆಲ್ಲಲು 28 ಮತಗಳು ಬೇಕಾಗುತ್ತವೆ. ಬಿಜೆಪಿ ಸ್ಪೀಕರ್ ಸೇರಿ 117 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್ 68 ಮತ್ತು ಜೆಡಿಎಸ್ 34 ಶಾಸಕರಿದ್ದಾರೆ. ಇಬ್ಬರು ಪಕ್ಷೇತರ ಮತ್ತು ಬಿಎಸ್ಪಿಯ ಒಬ್ಬರು ಇದ್ದಾರೆ. ಈ ಮತಗಳ ಆಧಾರದಲ್ಲಿ ಬಿಜೆಪಿ 4 ಸ್ಥಾನವನ್ನು ಗೆಲ್ಲುವುದರಲ್ಲಿ ಸಂಶಯವಿಲ್ಲ. ಅದೇ ರೀತಿ ತನಗಿರುವ ಶಾಸಕ ಬಲದ ಮೇಲೆ ಕಾಂಗ್ರೆಸ್ ಎರಡು ಸ್ಥಾನ ಹಾಗೂ ಜೆಡಿಎಸ್ ಒಂದು ಸ್ಥಾನ ಗೆಲ್ಲಬಹುದು.

ನಿವೃತ್ತರಾಗುತ್ತಿರುವವರಲ್ಲಿ ಕಾಂಗ್ರೆಸ್​ನ ಐದು ಹಾಗೂ ಬಿಜೆಪಿ ಮತ್ತು ಜೆಡಿಎಸ್​ನ ತಲಾ ಒಬ್ಬರು ಇದ್ದಾರೆ. ಚುನಾವಣೆ ಪ್ರಕ್ರಿಯೆ ಬಗ್ಗೆ ವಿವರಣೆ ನೀಡಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ಜೂನ್ 11ರಂದು ಅಧಿಸೂಚನೆ ಹೊರಡಲಿದ್ದು, 18ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಮತದಾನದ ಅಗತ್ಯವಿದ್ದರೆ 29ರಂದು ದಿನಾಂಕ ನಿಶ್ಚಯವಾಗಿದೆ ಎಂದು ವಿವರಿಸಿದರು. ಕರೊನಾ ಹಿನ್ನೆಲೆ ರಾಜ್ಯಸಭಾ ಚುನಾವಣೆಯಲ್ಲಿ ಅನುಸರಿಸಿದ ಕಾರ್ಯವಿಧಾನವನ್ನೇ ಪರಿಷತ್ ಚುನಾವಣೆಯಲ್ಲೂ ಪಾಲಿಸಲಾಗುತ್ತದೆ ಎಂದು ಹೇಳಿದ ಅವರು, 223 ಸದಸ್ಯ ಬಲದ ವಿಧಾನಸಭೆಯಲ್ಲಿ ಪ್ರತಿ ಅಭ್ಯರ್ಥಿ ಗೆಲ್ಲಲು ಸಾಮಾನ್ಯವಾಗಿ 28 ಮತಗಳ ಅಗತ್ಯವಿದೆ. ನಿರ್ದಿಷ್ಟವಾಗಿ ಗೆಲುವಿಗೆ ಎಷ್ಟು ಮತ ಅಗತ್ಯ ಎಂಬುದು ಸಿಂಧುತ್ವವಾದ ಮತದ ಮೇಲೆ ನಿರ್ಧಾರವಾಗಲಿದೆ ಎಂದರು. ಇದನ್ನೂ ಓದಿ: ರಾಜ್ಯಸಭೆ ಟಿಕೆಟ್: ಬಿಜೆಪಿಯಲ್ಲಿ ಪಕ್ಷ ನಿಷ್ಠೆಗೇ ಮಣೆ, ಭಿನ್ನಮತ ಕಡೆಗಣನೆ ನಿವೃತ್ತಿಯಾಗುವ ಸದಸ್ಯರು: ನಜೀರ್ ಅಹಮದ್, ಜಯಮ್ಮ, ಎಂ.ಸಿ. ವೇಣುಗೋಪಾಲ್, ಎನ್.ಎಸ್.ಬೋಸರಾಜು, ಎಚ್.ಎಂ.ರೇವಣ್ಣ, ಟಿ.ಎ.ಶರವಣ, ಡಿ.ಯು.ಮಲ್ಲಿಕಾರ್ಜುನ.

ಕಾಂಗ್ರೆಸ್​ಗೆ ನಷ್ಟ

ಪರಿಷತ್​ನಲ್ಲಿ ಕಾಂಗ್ರೆಸ್​ಗೆ ದೊಡ್ಡ ನಷ್ಟವಾಗುತ್ತಿದೆ. ವಿಧಾನಸಭೆಯಿಂದ ಐದು, ನಾಮ ನಿರ್ದೇಶನ ಐದು, ಶಿಕ್ಷಕರ ಕ್ಷೇತ್ರದಿಂದ ಒಬ್ಬರು ನಿವೃತ್ತರಾಗುತ್ತಿದ್ದಾರೆ. ವಿಧಾನಸಭೆ ಹಾಗೂ ನಾಮ ನಿರ್ದೇಶನ ಸೇರಿ 10 ರಲ್ಲಿ ಕಾಂಗ್ರೆಸ್ ಗೆಲ್ಲುವುದು ಕೇವಲ 2 ಸ್ಥಾನಗಳನ್ನು ಮಾತ್ರ. ಬಿಜೆಪಿಗೆ ಲಾಭವಾಗುತ್ತಿದೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್​ ಸರ್ಜಾ ಸಿಟ್ಟು…

ಆತಂಕದಲ್ಲೂ ಪೈಪೋಟಿ

ಮಾಜಿ ಸಚಿವರಾದ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್, ಆರ್.ಶಂಕರ್ ಅವರು ವಿಧಾನ ಪರಿಷತ್ ಸದಸ್ಯರಾಗಲು ಸತತ ಪ್ರಯತ್ನ ನಡೆಸಿದ್ದಾರೆ. ರಾಜ್ಯಸಭೆ ಟಿಕೆಟ್ ನೀಡಿಕೆಯಲ್ಲಿ ಬಿಜೆಪಿ ಹೈಕಮಾಂಡ್ ಅನುಸರಿಸಿದ ಮಾರ್ಗವನ್ನು ನೋಡಿ ಟಿಕೆಟ್ ಆಕಾಂಕ್ಷಿತರಿಗೆಲ್ಲರಿಗೂ ಆತಂಕವೂ ಮನೆ ಮಾಡಿದೆ. ಈ ಮೂವರು ಒಂದೇ ಸಮುದಾಯಕ್ಕೆ ಸೇರಿದವರು ಎನ್ನುವ ಅಪಸ್ವರ ಪಕ್ಷದೊಳಗೆ ಕೇಳಿ ಬಂದಿದ್ದು, ಇದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಗೆ ನಿಭಾಯಿಸುವರೋ ಕಾದು ನೋಡಬೇಕು. ಅಲ್ಲದೆ ನಿರ್ಮಲ ಕುಮಾರ್ ಸುರಾನಾ ಹೆಸರು ರಾಜ್ಯಸಭೆ ಚುನಾವಣೆಗೆ ಕೇಳಿ ಬಂದಿತ್ತು. ಈಗ ಅವರು ಮೇಲ್ಮನೆಯತ್ತ ಚಿತ್ತ ಹರಿಸಿದ್ದಾರೆ. ಮೈತ್ರಿ ಸರ್ಕಾರ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿ.ಪಿ. ಯೋಗೇಶ್ವರ್, ಗೋ.ಮಧುಸೂದನ್, ತಾರಾ ಅನೂರಾಧ, ಮಾಳವಿಕಾ ಅವಿನಾಶ್ ಇವರ ಜತೆಗೆ ಪಕ್ಷಕ್ಕಾಗಿ ದುಡಿದಿರುವ ನಿಷ್ಠಾವಂತ ಕಾರ್ಯಕರ್ತರು ಮತ್ತು ಮುಖಂಡರು, ಆರ್​ಎಸ್​ಎಸ್ ನೆಲೆಯಿಂದ ಬಂದ ಪ್ರಮುಖರು ಮೇಲ್ಮನೆಗೆ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net