ರಾಜ್ಯಸಭೆ ಟಿಕೆಟ್: ಬಿಜೆಪಿಯಲ್ಲಿ ಪಕ್ಷ ನಿಷ್ಠೆಗೇ ಮಣೆ, ಭಿನ್ನಮತ ಕಡೆಗಣನೆ

BJP 78 NJune 20
Published on

ರಾಯಚೂರು: ರಾಜ್ಯ ಬಿಜೆಪಿಯಲ್ಲಿ ಸ್ಥಾನಮಾನಕ್ಕಾಗಿ ಯಾರು ಎಷ್ಟೇ ಹೋರಾಡಿದರೂ, ಎಷ್ಟೇ ಭಿನ್ನಮತೀಯ ಚಟುವಟಿಕೆ ಮಾಡಿ ಒತ್ತಡ ಹೇರಿದರೂ ಪಕ್ಷದ ವರಿಷ್ಠರು ಅದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಮಾಜಿ ಸಚಿವ ಉಮೇಶ್ ಕತ್ತಿ ಇತ್ತೀಚೆಗೆ ಕೆಲವು ಶಾಸಕರ ಜತೆಗೂಡಿ ಭೋಜನಕೂಟ ನಡೆಸುವ ಮೂಲಕ ಪಕ್ಷದ ನಾಯಕರ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದರು. ನಂತರ ತಮ್ಮ ಸಭೆಗೆ ಯಾವುದೇ ರಾಜಕೀಯ ಉದ್ದೇಶ ಇಲ್ಲವೆಂದು ಸ್ಪಷ್ಟಪಡಿಸಿದ್ದರು. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮ್ಮ ಸೋದರ ರಮೇಶ್ ಕತ್ತಿ ಅವರಿಗೆ ರಾಜ್ಯಸಭೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದರು.

ಇದರ ಪರಿಣಾಮವಾಗಿಯೇ ಎಂಬಂತೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಆಯ್ಕೆ ಮಾಡಿ ಕಳಿಸಿದ ಮೂವರು ನಾಯಕರ ಪಟ್ಟಿಯಲ್ಲಿ ರಮೇಶ್ ಕತ್ತಿ ಹೆಸರೂ ಇತ್ತು. ಜತೆಗೆ ಹಾಲಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಮತ್ತು ಹೋಟೆಲ್ ಉದ್ಯಮಿ ಪ್ರಕಾಶ್ ಶೆಟ್ಟಿಯವರ ಹೆಸರಿದ್ದವು. ಈ ಪೈಕಿ ಶೆಟ್ಟಿಗೆ ಟಿಕೆಟ್ ಗ್ಯಾರಂಟಿಯಾಗಿದ್ದು, ರಮೇಶ್ ಕತ್ತಿ ಮತ್ತು ಪ್ರಭಾಕರ್ ಕೋರೆ ಇವರಿಬ್ಬರ ಪೈಕಿ ಒಬ್ಬರಿಗೆ ಟಿಕೆಟ್ ಸಿಗಲಿದೆ ಎಂದು ಹೇಳಲಾಗುತ್ತಿತ್ತು.

ಆದರೆ ಸೋಮವಾರ ದೆಹಲಿಯಿಂದ ಪ್ರಕಟವಾದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಈ ಮೂವರ ಹೆಸರೂ ಇಲ್ಲ. ಪಕ್ಷ ನಿಷ್ಠೆ ಇಟ್ಟುಕೊಂಡು ಸಂಘಟನೆಗಾಗಿ ದಶಕಗಳ ಕಾಲ ದುಡಿದವರಿಗೇ ಹೈಕಮಾಂಡ್‌ನವರು ಮಣೆ ಹಾಕಿರುವುದು ಸ್ಪಷ್ಟವಾಗಿದೆ. ಎಬಿವಿಪಿ, ಆರೆಸ್ಸೆಸ್ ಮತ್ತು ಬಿಜೆಪಿಗಾಗಿ ದುಡಿದಿರುವ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅವರಿಗೆ ಟಿಕೆಟ್ ನೀಡುವ ಮೂಲಕ ಹೈಕಮಾಂಡ್ ಅಚ್ಚರಿ ಮೂಡಿಸಿದೆ.

ರಾಯಚೂರಿನ ಅಶೋಕ ಗಸ್ತಿ ಮೂರು ದಶಕಕ್ಕೂ ಹೆಚ್ಚು ಕಾಲ ಸಂಘಟನೆಗಾಗಿ ದುಡಿದವರು. ಎಬಿವಿಪಿ, ಆರ್‌ಎಸ್‌ಎಸ್ ಮೂಲದ ಗಸ್ತಿ, ಪ್ರಸ್ತುತ ಬಳ್ಳಾರಿ ವಿಭಾಗದ ಬಿಜೆಪಿ ಪ್ರಭಾರಿ. 2010ರಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ, 2012ರಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ವೃತ್ತಿಯಿಂದ ನ್ಯಾಯವಾದಿ. 2001ರಲ್ಲಿ ನಗರಸಭೆ ಸದಸ್ಯರಾಗಿದ್ದು, ಸವಿತಾ ಸಮಾಜದ ರಾಜ್ಯ ಉಪಾಧ್ಯಕ್ಷರಾಗಿ, ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ಗೆ ಆತ್ಮೀಯರು. ಆರ್‌ಎಸ್‌ಎಸ್ ಒಡನಾಟದಿಂದಾಗಿ ರಾಜ್ಯಸಭಾ ಟಿಕೆಟ್ ಒಲಿದು ಬಂದಿದೆ ಎಂದು ಹೇಳಲಾಗುತ್ತಿದೆ.

ಈರಣ್ಣ ಕಡಾಡಿ ಮೊದಲಿನಿಂದಲೂ ಆರ್‌ಎಸ್‌ಎಸ್, ಬಿಜೆಪಿ ಜತೆಗೆ ಗುರುತಿಸಿಕೊಂಡವರು. ಮೂಲತಃ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕು ಕಲ್ಲೊಳ್ಳಿ ಗ್ರಾಮದವರು, ಲಿಂಗಾಯತ ಸಮುದಾಯಕ್ಕೆ ಸೇರಿದವರು. 1989ರಿಂದ ಬಿಜೆಪಿಯಲ್ಲಿ ಸಕ್ರಿಯ, ಯುವ ಮೋರ್ಚಾ ಅರಭಾಂವಿ ಕ್ಷೇತ್ರದ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಿಸಿದವರು. ಬಿಜೆಪಿ ಗೋಕಾಕ್ ತಾಲೂಕು ಅಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾರ್ಯದರ್ಶಿಯಾಗಿ ಸೇವೆ. 2004ರಲ್ಲಿ ಬೆಳಗಾವಿ ಗ್ರಾಮೀಣ ಘಟಕದ ಜಿಲ್ಲಾ ಆಧ್ಯಕ್ಷ, 2010ರಲ್ಲಿ ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರು. 1994ರಲ್ಲಿ ಅರಭಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಮಾಜಿ ಸಚಿವ ವಿ.ಎಸ್.ಕೌಜಲಗಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಸದ್ಯಕ್ಕೆ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಒಳಗೊಂಡು ಪಕ್ಷದ ವಿಭಾಗೀಯ ಪ್ರಭಾರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net