ರಾಜ್ಯಸಭೆ ಚುನಾವಣೆಗೆ ಅಚ್ಚರಿಯ ಆಯ್ಕೆ ಪ್ರಕಟಿಸಿದ ಬಿಜೆಪಿ: ಎಲ್ಲರಿಗೂ ಶಾಕ್​!

BJP Candidates for Rajyasabha 2020 Karnataka
Published on

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಗೌಪ್ಯತೆ ಕಾಯ್ದುಕೊಂಡಿದ್ದ ಬಿಜೆಪಿ ವರಿಷ್ಠರು ಸೋಮವಾರ ಮಧ್ಯಾಹ್ನ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ರೇಸ್​ನಲ್ಲಿ ಇಲ್ಲದೇ ಇದ್ದ ಎರಡು ಹೆಸರುಗಳನ್ನು ಅಭ್ಯರ್ಥಿಗಳ ಪಟ್ಟಿಯಲ್ಲಿ ನೋಡಿ ಎಲ್ಲರೂ ಶಾಕ್​ಗೆ ಒಳಗಾಗಿದ್ದಾರೆ.

ಅಶೋಕ್ ಗಸ್ತಿ ಪರಿಚಯ ರಾಯಚೂರಿನ ಗಸ್ತಿಯವರು ಸವಿತಾ ಸಮಾಜದವರಾಗಿದ್ದು ವೃತ್ತಿಯಲ್ಲಿ ವಕೀಲರು. 55 ವರ್ಷ ಪ್ರಾಯದ ಇವರು ಬಿಎ ಎಲ್​ಎಲ್​ಬಿ ವಿದ್ಯಾರ್ಹತೆ ಹೊಂದಿದ್ದು, ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ವ್ಯವಹರಿಸಬಲ್ಲರು.

ಬಿಜೆಪಿ ವರಿಷ್ಠರು ರಾಜ್ಯಸಭೆ ಚುನಾವಣೆಯಲ್ಲೂ ರಿಸ್ಕ್ ತೆಗೆದುಕೊಳ್ಳುತ್ತಾರಾ ಎಂಬ ಸಂದೇಹದ ಲೆಕ್ಕಾಚಾರ ಇತ್ತು. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾ.ನಾಗರಾಜ್​/ ನಿರ್ಮಲ್​ ಕುಮಾರ್ ಸುರಾನಾ ಹೆಸರು ಇತ್ತಾದರೂ, ಆಕಾಂಕ್ಷಿಗಳ ಪಟ್ಟಿಯಲ್ಲಿ ಹಾಲಿ ಸದಸ್ಯ ಪ್ರಭಾಕರ ಕೋರೆ, ಪ್ರಬಲ ಆಕಾಂಕ್ಷಿಯಾಗಿದ್ದ ರಮೇಶ್ ಕತ್ತಿ ಮುಂತಾದವರೂ ರೇಸ್​ನಲ್ಲಿದ್ದರು. ಲೋಕಸಭೆಯಲ್ಲಿ ಟಿಕೆಟ್ ಕೈ ತಪ್ಪಿ ಹೋಗಿದ್ದ ತೇಜಸ್ವಿನಿ ಅನಂತಕುಮಾರ್, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಇನ್ಫೋಸಿಸ್​ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಹೆಸರುಗಳು ಅಲ್ಲೋ ಇಲ್ಲೋ ಎಂಬಂತೆ ಕೇಳಿಸಿತ್ತು.

ಈ ಎಲ್ಲ ಲೆಕ್ಕಾಚಾರಗಳನ್ನು ತಲೆಕಳಗೆ ಮಾಡಿದ ಬಿಜೆಪಿ ವರಿಷ್ಠರು, ರಾಜ್ಯ ಬಿಜೆಪಿ ಕೋರ್​ ಕಮಿಟಿ ಶಿಫಾರಸನ್ನೂ ಬದಿಗಿರಿಸಿ ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಅಷ್ಟೇ ಅಲ್ಲ, ರಾಯಚೂರಿನ ಅಶೋಕ್​ ಗಸ್ತಿ ಮತ್ತು ಬೆಳಗಾವಿಯ ಈರಣ್ಣ ಕಡಾಡಿ ಅವರ ಹೆಸರನ್ನು ಅಂತಿಮಗೊಳಿಸಿ ಪ್ರಕಟಿಸಿ ಶಾಕ್ ನೀಡಿದ್ದಾರೆ. ಈ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಪಕ್ಷ ನಿಷ್ಠೆ ಮತ್ತು ಸೇವಾ ಹಿರಿತನಕ್ಕೆ ವರಿಷ್ಠರು ಮನ್ನಣೆ ನೀಡಿದ್ದಾಗಿ ಮೂಲಗಳು ತಿಳಿಸಿವೆ. ಅಶೋಕ್ ಗಸ್ತಿ ಅವರು ಸವಿತಾ ಸಮುದಾಯಕ್ಕೆ ಸೇರಿದವರು. ಈರಣ್ಣ ಕಡಾಡಿ ಲಿಂಗಾಯಿತ ಸಮುದಾಯದವರು.

ಈರಣ್ಣ ಕಡಾಡಿ ಪರಿಚಯ: ಕಡಾಡಿಯವರು ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಗ್ರಾಮದಲ್ಲಿ 01-06-1966ರಂದು ಜನಿಸಿದರು. 1989 ರಿಂದ ಪಕ್ಷದಲ್ಲಿ ಸಕ್ರಿಯರಾಗಿರುವ ಕಡಾಡಿ, ಅರಭಾಂವಿ ಕ್ಷೇತ್ರದ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಿಸಿದರು. ಗೋಕಾಕ್ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿದ್ದವರು. 1994 ರಲ್ಲಿ ಅರಭಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ನ ಮಾಜಿ ಸಚಿವ ವ್ಹಿ.ಎಸ್.ಕೌಜಲಗಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. 2004ರಲ್ಲಿ ಬೆಳಗಾವಿ ಗ್ರಾಮೀಣ ಘಟಕದ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು. 2010ರಲ್ಲಿ ಬೆಳಗಾವಿ ಜಿ.ಪಂ.ಅಧ್ಯಕ್ಷರಾಗಿದ್ದರು ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೊದಲಿನಿಂದಲೂ ಆರ್‌ಎಸ್‌ಎಸ್, ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಇವರು ಸದ್ಯ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಭಾಗದ ಬಿಜೆಪಿ ವಿಭಾಗೀಯ ಪ್ರಭಾರಿ ಹೊಣೆ ಹೊತ್ತುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net