ಅನ್​ಲಾಕ್ 5.0 - ಶಾಲಾ ಕಾಲೇಜು ಶುರುವಾಗಬಹುದಾ? ಸಿನಿಮಾ ನೋಡೋಕೆ ಮಲ್ಟಿಪ್ಲೆಕ್ಸ್​​ಗೆ ಹೋಗಬಹುದಾ?

Unlock
Published on

ನವದೆಹಲಿ: ಕರೊನಾ ಸೋಂಕು ಹರಡದಂತೆ ತಡೆಯಲು ಲಾಕ್​ಡೌನ್​ ವಿಧಿಸಿದ ಬಳಿಕ ಹಂತ ಹಂತವಾಗಿ ಅನ್​ಲಾಕ್ ಮಾಡಲಾಗುತ್ತಿದ್ದು 5ನೇ ಹಂತದ ಅನ್​ಲಾಕ್​ ಅಕ್ಟೋಬರ್ 1ರಿಂದ ಶುರುವಾಗಲಿದೆ. ನಾಲ್ಕನೇ ಹಂತದ ಅನ್​ಲಾಕ್ ಈ ತಿಂಗಳು ಚಾಲ್ತಿಯಲ್ಲಿದೆ. ಮುಂದಿನ ತಿಂಗಳ ಆರಂಭದಿಂದ ಐದನೆ ಹಂತದ ಅನ್​ಲಾಕ್ ಶುರುವಾಗಲಿದ್ದು, ವಿವಿಧ ರೀತಿಯ ಆರ್ಥಿಕ ಚಟುವಟಿಕೆಗಳ ಮೇಲಿನ ನಿರ್ಬಂಧ ಸಡಿಲಗೊಳಿಸುವ ನಿರೀಕ್ಷೆ ಇದೆ.

ಆರ್ಥಿಕ ಚಟುವಟಿಕೆಗಳ ಪೈಕಿ ಮಾಲ್​, ಸಲೂನ್​, ರೆಸ್ಟೋರೆಂಟ್​, ಜಿಮ್​ಗಳ ಮೇಲಿನ ನಿರ್ಬಂಧ ಈಗಾಗಲೇ ಸಡಿಲಿಸಲಾಗಿದೆ. ಆದರೂ, ಕೋವಿಡ್ 19 ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದೆ. ಇದೇ ನಿರ್ಬಂಧದೊಂದಿಗೆ ಇನ್ನಷ್ಟು ವಾಣಿಜ್ಯ, ಆರ್ಥಿಕ ಚಟುವಟಿಕೆಗಳನ್ನು ಮಾಡುವುದಕ್ಕೆ ಕೇಂದ್ರ ಅನುಮತಿ ನೀಡಲಿದೆ. ಇದರಲ್ಲಿ ಸಿನಿಮಾ ಹಾಲ್​ಗಳು, ಥಿಯೆಟರ್​ಗಳು ಮಲ್ಟಿಪ್ಲೆಕ್ಸ್​ಗಳ ಚಟುವಟಿಕೆಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಇದಕ್ಕೂ ಮೊದಲು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಮನವಿ ಮೇರೆಗೆ ಕೇಂದ್ರ ಸರ್ಕಾರ ಸೆ.21ರಿಂದ ಬಯಲು ರಂಗ ಮಂದಿರಗಳಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶ ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಹಾಲ್​ಗಳು, ಥಿಯೆಟರ್​ಗಳು ಅಕ್ಟೋಬರ್ 1ರಿಂದ ಷೋ ತೋರಿಸಲು ಸಜ್ಜಾಗುತ್ತಿವೆ. ಪ್ರವಾಸೋದ್ಯಮ ಕ್ಷೇತ್ರದ ಚಟುವಟಿಕೆಗೂ ಅವಕಾಶ ನೀಡುವ ಸಾಧ್ಯತೆ ಇದೆ. ಶಾಲಾ ಕಾಲೇಜುಗಳ ಪುನಾರಂಭವಾಗಬಹುದೆಂಬ ನಿರೀಕ್ಷೆ ಇದೆ. ಆದರೆ ಕೋವಿಡ್ 19 ನಿಯಮ ಪಾಲಿಸಬೇಕಾದ್ದು ಕಡ್ಡಾಯ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net