ಮತ್ತಷ್ಟು ನಿರಾಳತೆಯ ನಿರೀಕ್ಷೆ: ಅನ್​ಲಾಕ್ 4.0 ಬಗ್ಗೆ ಇಂದು ನಿರ್ಧಾರ, ಚಿತ್ರೋದ್ಯಮ ಕ್ಷೇತ್ರಕ್ಕೆ ವಿನಾಯಿತಿ?

State Unlock
ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಕಂಡುಬಂದ ಜನದಟ್ಟಣೆ.
Published on

ಬೆಂಗಳೂರು: ಕರೊನಾ ಸೋಂಕಿನ ಹೊಸ ಪ್ರಕರಣಗಳು, ಪಾಸಿಟಿವಿಟಿ ದರ, ಮರಣ ಪ್ರಮಾಣ ಗಣನೀಯ ಇಳಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಲ್ಕನೇ ಹಂತದ ನಿರ್ಬಂಧ ತೆರವು ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ನಡುವೆ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ನರ್ಸಿಂಗ್ ಕಾಲೇಜುಗಳು ಹಾಗೂ ಆರೋಗ್ಯ ಸಂಬಂಧಿ ಶಿಕ್ಷಣ ಸಂಸ್ಥೆಗಳ ಪುನರಾರಂಭಕ್ಕೆ ಷರತ್ತುಬದ್ಧ ಅನುಮತಿ ನೀಡಿ, ಶುಕ್ರವಾರ ಆದೇಶ ಹೊರಡಿಸಿದೆ.

ಸಂಭಾವ್ಯ ಮೂರನೇ ಅಲೆ ಎದುರಿಸಲು ಅಗತ್ಯ ಸಿದ್ಧತೆಗಳಾಗುತ್ತಿವೆ. ಎರಡನೇ ಅಲೆಯ ಪ್ರಭಾವ ಕುಗ್ಗಿರುವ ಕಾರಣ ಉದ್ಯಮ- ವಹಿವಾಟಿಗೆ ಉತ್ತೇಜಿಸಿ, ಜನಜೀವನ ಸಂಪೂರ್ಣ ಸಹಜ ಸ್ಥಿತಿಗೆ ತರುವ ಕಡೆಗೆ ಒಲವು ಹೊಂದಿದೆ. ದೀರ್ಘಾವಧಿಗೆ ನಿರ್ಬಂಧ ಮುಂದುವರಿಸುವುದು ಆರ್ಥಿಕತೆಗೆ ಪೆಟ್ಟು ನೀಡಲಿದೆ. ಜನರ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಲಿದೆ ಎನ್ನುವುದು ಸರ್ಕಾರದ ಚಿಂತೆ ಹೆಚ್ಚಿಸಿದೆ. ಸೋಂಕು ಇಳಿಕೆಯಲ್ಲಿ ನಿರಂತರತೆ ಕಾಯ್ದುಕೊಂಡು, ಮೂರನೇ ಅಲೆ ಎದುರಿಸಲು ಸಜ್ಜಾಗುವ ಜತೆಗೆ ಆರ್ಥಿಕತೆ ವೃದ್ಧಿಗೂ ಬಲ ತುಂಬಬೇಕಾದ ಜವಾಬ್ದಾರಿ ನಿಭಾಯಿಸಬೇಕಾಗಿದೆ. ಈ ಕಾರಣಕ್ಕೆ ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯವನ್ನು ಮತ್ತೊಮ್ಮೆ ಪಡೆದು, ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜತೆಗೆ ರ್ಚಚಿಸಿ ಮುಂದಡಿಯಿಡಲು ಸಿಎಂ ಬಿಎಸ್​ವೈ ಯೋಚಿಸಿದ್ದಾರೆ. ಅನ್​ಲಾಕ್ 3.0 ಅವಧಿ ಜು.19ಕ್ಕೆ ಪೂರ್ಣಗೊಳಲಿದೆ. ಹೀಗಾಗಿ ಸರ್ಕಾರ ಪ್ರಕಟಿಸಲಿರುವ ಅನ್​ಲಾಕ್ 4.0 ಕಡೆಗೆ ವಿವಿಧ ವಲಯಗಳು ಕಾತರದಿಂದ ಎದುರು ನೋಡುತ್ತಿವೆ.

ಸಿಎಂ ಮರಳಿದ ಬಳಿಕ ಚರ್ಚೆ

ಸಿಎಂ ಯಡಿಯೂರಪ್ಪ ಅವರು ದೆಹಲಿಯಿಂದ ವಾಪಸ್ಸಾದ ತಕ್ಷಣವೇ ನಾಲ್ಕನೇ ಹಂತದ ನಿರ್ಬಂಧ ತೆರವು ಕುರಿತು ರ್ಚಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಸೋಂಕು ಪ್ರಕರಣಗಳು ಕಡಿಮೆಯಾಗಿ ಪರಿಸ್ಥಿತಿ ಸುಧಾರಿಸುತ್ತಿರುವ ಕಾರಣ ಅನ್​ಲಾಕ್ 4.0 ಬಗ್ಗೆ ಅಭಿಪ್ರಾಯ ಹಾಗೂ ಒತ್ತಾಯಗಳು ಹೆಚ್ಚತೊಡಗಿವೆ. ಆದರೆ ನಿರ್ದಿಷ್ಟವಾಗಿ ಹೀಗೆಯೇ ಮಾಡಬೇಕು ಎಂಬ ತೀರ್ವನವಾಗಿಲ್ಲ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಅನ್​ಲಾಕ್ 4.0 ನಿರೀಕ್ಷೆಗಳೇನು?

  • ರಾತ್ರಿ ಕರ್ಫ್ಯೂ ವಾಪಸ್ ಪಡೆದು ಉದ್ಯಮ- ವಹಿವಾಟು, ವ್ಯಾಪಾರಕ್ಕೆ ಮುಕ್ತ ಅವಕಾಶ
  • ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್, ಲಾಡ್ಜ್​ಗಳಿಗೆ ವಿಧಿಸಿದ ಕಟ್ಟುಪಾಡು ಸಡಿಲ
  • ಈಜುಕೊಳ, ಚಿತ್ರಮಂದಿರ ತೆರೆಯಲು, ಒಳ-ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ
  • ಐಟಿ-ಬಿಟಿ ವಲಯದ ಸಿಬ್ಬಂದಿ ಪೂರ್ಣ ಪ್ರಮಾಣದಲ್ಲಿ ಕಚೇರಿಗೆ ಹಾಜರಾಗಲು ಸಮ್ಮತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net