ದೆಹಲಿಯಲ್ಲಿ ಮೋದಿ-ಬಿಎಸ್​ವೈ ಮಹತ್ವದ ಮಾತುಕತೆ: ಚರ್ಚಿಸಿದ್ದೇನು ಎಂಬುದಕ್ಕೆ ಯಡಿಯೂರಪ್ಪ ಹೇಳಿದ್ದಿಷ್ಟು..

Untitled 2
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಇಂದು ದೆಹಲಿಯಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಮಾತ್ರವಲ್ಲ, ನಾಳೆ ಅವರು ಅಮಿತ್​ ಷಾ, ರಾಜನಾಥ್ ಸಿಂಗ್​ ಅವರಲ್ಲದೆ ಕೇಂದ್ರದ ಇತರ ಕೆಲವು ಸಚಿವರನ್ನೂ ಭೇಟಿಯಾಗಲಿರುವುದಾಗಿ ಹೇಳಿಕೊಂಡಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ರಾಷ್ಟ್ರಮಟ್ಟದಲ್ಲಿ ಕುತೂಹಲ ಕೆರಳಿಸಿದೆ.

ಪ್ರಧಾನಿಯವರನ್ನು ಭೇಟಿಯಾಗಿ ಹೊರಬಂದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಏನು ಚರ್ಚೆ ಮಾಡಿದ್ದೇನೆ ಎಂಬುದಾಗಿ ನಾಳೆ ಹೇಳುವುದಾಗಿ ಎನ್ನುವ ಮೂಲಕ ಮಾತುಕತೆಯ ಕುರಿತು ಮತ್ತಷ್ಟು ಕೌತುಕ ಉಂಟಾಗುವಂತೆ ಮಾಡಿದ್ದಾರೆ. ಕರ್ನಾಟಕದ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದಷ್ಟೇ ಹೇಳಿದ ಅವರು, ಇವತ್ತು ಕೆಲವು ಕೇಂದ್ರ ಸಚಿವರು ಕರ್ನಾಟಕ ಭವನಕ್ಕೆ ಬರುತ್ತಾರೆ, ಅವರೊಂದಿಗೂ ಮಾತುಕತೆ ನಡೆಸುತ್ತೇನೆ. ಆರು ತಿಂಗಳ ಬಳಿಕ ದೆಹಲಿಗೆ ಬಂದಿದ್ದೇನೆ, ಹೊಸ ಸಚಿವರನ್ನು ಊಟಕ್ಕಾಗಿ ಕರ್ನಾಟಕ ಭವನಕ್ಕೆ ಕರೆದಿದ್ದೇನೆ ಎಂದರು.

ಇನ್ನು ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ನನಗೇನೂ ಗೊತ್ತಿಲ್ಲ, ನೀವೇ ಹೇಳಬೇಕು ಎಂದು ನಕ್ಕು ಸುಮ್ಮನಾದರು. ಮೇಕೆದಾಟು ವಿಚಾರವಾಗಿ ಮಾತನಾಡಲಿರುವುದಾಗಿ ಪಿಎಂ ಭೇಟಿಗೂ ಮೊದಲೇ ಹೇಳಿದ್ದ ಬಿಎಸ್​ವೈ, ನಾಳೆ ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಬಹುದು ಎಂಬ ನಿರೀಕ್ಷೆಯೂ ಉಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net