ಉಡುಪಿ ಕಾಲೇಜ್​ ಹಾಸ್ಟೆಲ್​ ಟಾಯ್ಲೆಟ್​ನಲ್ಲಿ ವಿಡಿಯೋ ಪ್ರಕರಣ; ಇಂದು ಮಹತ್ವದ ಬೆಳವಣಿಗೆ, ಇಲ್ಲಿದೆ ವಿವರ..

Nethra Jyothi Paramedical College
Published on

ಉಡುಪಿ: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಸದ್ದು ಮಾಡುತ್ತಿರುವ ಉಡುಪಿಯ ಕಾಲೇಜೊಂದರ ಹಾಸ್ಟೆಲ್ ಟಾಯ್ಲೆಟ್​ನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಮಾಡಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ಬೆಳವಣಿಗೆಯೊಂದು ನಡೆದಿದೆ.

ಉಡುಪಿ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜು ಹಾಸ್ಟೆಲ್​ನ ಟಾಯ್ಲೆಟ್​​ನಲ್ಲಿ ಮೊಬೈಲ್​ಫೋನ್ ಇಟ್ಟು ವಿಡಿಯೋ ಮಾಡಲಾಗಿದೆ ಎನ್ನಲಾದ ಪ್ರಕರಣ ಬೆಳಕಿಗೆ ಬಂದಾಗಿನಿಂದ ಭಾರಿ ಸಂಚಲನ ಸೃಷ್ಟಿಸಿದೆ. ಜುಲೈ 18ರಂದು ನಡೆದಿದ್ದ ಈ ಘಟನೆ ಸಂಬಂಧ ಜುಲೈ 26ರಂದು ಸುಮೋಟೋ ಕೇಸ್ ದಾಖಲಿಸಿಕೊಳ್ಳಲಾಗಿತ್ತು.

ಮೂವರು ಮುಸ್ಲಿಂ ವಿದ್ಯಾರ್ಥಿನಿಯರಿಂದ ಹಿಂದು ವಿದ್ಯಾರ್ಥಿನಿಯ ಚಿತ್ರೀಕರಣ ನಡೆದಿದ್ದರಿಂದ ಎಬಿವಿಪಿ, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳವರು ಪ್ರತಿಭಟನೆ ನಡೆಸಿದ್ದರು. ಪ್ರಕರಣದ ತನಿಖೆಯನ್ನು ಎಸ್​ಐಟಿಗೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸಿತ್ತು.

ಉಡುಪಿ ಜಿಲ್ಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಈ ಪ್ರಕರಣವನ್ನು ಸರ್ಕಾರ ಇಂದು ಸಿಐಡಿಗೆ ಹಸ್ತಾಂತರ ಮಾಡಿದೆ. 'ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ನಡೆಸಲಾಗಿದೆ ಎಂಬ ಆರೋಪವಿದ್ದು, ಇದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶಿಸಲಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net