

ಮುಂಬೈ: ಕೆಲವೇ ದಿನಗಳ ಹಿಂದೆ ಉದ್ಯಮಿ ಮುಕೇಶ್ ಅಂಬಾನಿ ಭಾರತ ಬಿಟ್ಟು ಲಂಡನ್ಗೆ ಹೋಗುತ್ತಾರೆ ಎಂದು ಸುದ್ದಿ ಹಬ್ಬಿತ್ತು. ಬಳಿಕ ಅವರು ಭಾರತದಲ್ಲೇ ಇರಲಿದ್ದು, ಬೇರೆಲ್ಲಿಗೂ ಹೋಗಿ ನೆಲೆಸುವುದಿಲ್ಲ ಎಂಬ ಸ್ಪಷ್ಟನೆಯೂ ಹೊರಬಿದ್ದಿತ್ತು.
ಇದೀಗ ಮತ್ತೆ ಅಂಬಾನಿ ಮನೆ ಕುರಿತ ಮಾತು ಕೇಳಿ ಬರುತ್ತಿದೆ. ಈ ಸಲ ಒಂದು ಆತಂಕ ಕೂಡ ಸೃಷ್ಟಿಯಾಗಿದ್ದು, ಅಂಬಾನಿ ಮನೆ ಸುತ್ತ ಭಾರಿ ಪೊಲೀಸ್ ಬಂದೋಬಸ್ತ್ ಸಹ ವಹಿಸಲಾಗಿದೆ. ಅದಕ್ಕೆ ಕಾರಣ ಆ ಒಂದು ಕರೆ ಹಾಗೂ ಅವರಿಬ್ಬರು!
'ಮುಂಬೈನಲ್ಲಿರುವ ಅಂಬಾನಿಯ ಮನೆ ಅಂಟಿಲಿಯಾದ ವಿಳಾಸ ಕೇಳಿಕೊಂಡು ಇಬ್ಬರು ಬಂದಿದ್ದರು. ಅವರ ಕೈಯಲ್ಲಿ ದೊಡ್ಡ ಚೀಲವಿತ್ತು' ಎಂದು ಆಟೋ ಚಾಲಕನೊಬ್ಬ ಮುಂಬೈ ಪೊಲೀಸರಿಗೆ ಕರೆ ಮಾಡಿ ವಿಷಯ ತಲುಪಿಸಿದ್ದಾನೆ. ಅಷ್ಟಕ್ಕೂ ಹಾಗೆ ವಿಳಾಸ ಕೇಳಿಕೊಂಡು ಬಂದವರು ಯಾರು, ಅವರ ಕೈಯಲ್ಲಿದ್ದ ದೊಡ್ಡ ಚೀಲಗಳಲ್ಲಿ ಏನಿವೆ ಎಂದು ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. ಮಾತ್ರವಲ್ಲ, ಯಾವುದಕ್ಕೂ ಇರಲಿ ಎಂದು ಮನೆ ಸುತ್ತ ಭದ್ರತೆ ಒದಗಿಸಿದ್ದು, ಆ ಇಬ್ಬರು ಆಗಂತುಕರಿಗಾಗಿ ಸಿಸಿಟಿವಿ ಕ್ಲಿಪ್ಪಿಂಗ್ಗಳ ಪರಿಶೀಲನೆ ಆರಂಭಿಸಿದ್ದಾರೆ.