ಚಿಂಕಾರ ಜಿಂಕೆ ಬೇಟೆಯಾಡುತ್ತಿದ್ದ ಇಬ್ಬರ ಬಂಧನ

arres
Published on

ಪುಣೆ : ಇಂಡಿಯನ್ ಗೆಜೆಲ್(ಗೆಜೆಲ್ಲಾ ಬೆನ್ನೆಟ್ಟಿ) ಎಂದೂ ಕರೆಯಲ್ಪಡುವ ಚಿಂಕಾರವನ್ನು ಕೊಂದ ಆರೋಪದ ಮೇಲೆ ಮಹಾರಾಷ್ಟ್ರ ಅರಣ್ಯ ಇಲಾಖೆಯು ಇಬ್ಬರನ್ನು ಬಂಧಿಸಿದೆ. ಒಂದು ಬಗೆಯ ಜಿಂಕೆಯಾದ ಚಿಂಕಾರವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಸಂರಕ್ಷಿತ ಪ್ರಾಣಿ ಎಂದು ಘೋಷಿಸಲಾಗಿದೆ.

ಪುಣೆ ಜಿಲ್ಲೆಯ ಇಂಡಾಪುರದ ಅರಣ್ಯ ಪ್ರದೇಶದಲ್ಲಿ ಬೇಟೆಯಾಡುತ್ತಾ ಸಿಕ್ಕಿಬಿದ್ದಿರುವ ಆರೋಪಿಗಳನ್ನು ಮಹೇಶ್​ ಜಂಗಳು ಮಾಣೆ(40 ವರ್ಷ) ಮತ್ತು ದತ್ತಾತ್ರಯ ಪೋಪಟ್​ ಪವಾರ್(42 ವರ್ಷ) ಎಂಬುದಾಗಿ ಗುರುತಿಸಲಾಗಿದೆ. ಆರೋಪಿಗಳಿಂದ 9 ಎಂಎಂ ರೈಫಲ್, ಆರು ಲೈವ್ ಕಾರ್ಟ್​ರಿಡ್ಜ್​, ಒಂದು ಖಾಲಿ ಕಾರ್ಟ್​​ರಿಡ್ಜ್​ ಮತ್ತು ಬೈಕ್​ಅನ್ನು ವಶಪಡಿಸಿಕೊಳ್ಳಲಾಗಿದೆ.

ಅರಣ್ಯ ರಕ್ಷಕರ ತಂಡವು ನಿನ್ನೆ ರಾತ್ರಿ ಗಸ್ತಿನಲ್ಲಿದ್ದಾಗ ಟಾರ್ಚ್​ಲೈಟ್​ ಇಟ್ಟುಕೊಂಡು ಕಾಡಿನಲ್ಲಿ ಓಡಾಡುತ್ತಿದ್ದುದನ್ನು ಗಮನಿಸಿದರು. ಹಿಡಿಯಲು ಹೋದಾಗ ಆರೋಪಿಗಳು ಮೋಟರ್​ ಸೈಕಲ್ ಹತ್ತಿಕೊಂಡು ಪರಾರಿಯಾಗಲು ಯತ್ನಿಸಿದರು. ಇಂದು ಬೆಳಿಗ್ಗೆ 10 ಗಂಟೆಗೆ ಸ್ಥಳೀಯರ ಸಹಾಯದೊಂದಿಗೆ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಸತ್ತ ಚಿಂಕಾರ ಇದ್ದ ಗೋಣಿಚೀಲವನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net