

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಿನ್ನೆ 'ಸಿಂಗಾಪೂರ್ನಲ್ಲಿ ಮಕ್ಕಳ ಮೇಲೆ ಪರಿಣಾಮ ಉಂಟುಮಾಡುವ ಹೊಸ ಕರೊನಾ ವೈರಸ್ ರೂಪಾಂತರಿ ಹುಟ್ಟಿದೆ. ಅದಕ್ಕಾಗಿ ಭಾರತ-ಸಿಂಗೂಪೂರ್ಗಳ ನಡುವೆ ವಿಮಾನ ಸಂಚಾರ ರದ್ದು ಮಾಡಬೇಕು' ಎಂದು ಹೇಳಿದ ಟ್ವೀಟ್ನ ಬಗ್ಗೆ ಸಿಂಗಾಪೂರ್ ಭಾರೀ ಅಸಮಾಧಾನ ವ್ಯಕ್ತಪಡಿಸಿದೆ. ಇಂದು ಸಿಂಗಾಪೂರ್ನಲ್ಲಿರುವ ಭಾರತದ ಹೈಕಮಿಷನರ್ಅನ್ನು ಕರೆಸಿ ಈ ಬಗ್ಗೆ ತೀವ್ರ ಆಕ್ಷೇಪ ಸೂಚಿಸಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಾಗ್ಚಿ, ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತದ ಹೈಕಮಿಷನರ್, ಕೇಜ್ರಿವಾಲ್ ಅವರಿಗೆ ಕರೊನಾ ರೂಪಾಂತರಿಗಳ ಬಗ್ಗೆ ಅಥವಾ ನಾಗರಿಕ ವಿಮಾನ ಸಂಚಾರದ ಬಗ್ಗೆ ಮಾತನಾಡಲು ಅರ್ಹತೆ ಇಲ್ಲ ಎಂದು ಸ್ಪಷ್ಟೀಕರಣ ನೀಡಿರುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಕೂಡ "ದೆಹಲಿ ಸಿಎಂ ಕೇಜ್ರಿವಾಲ್ ಅವರು ಭಾರತದ ಪರವಾಗಿ ಮಾತನಾಡುತ್ತಿಲ್ಲ" ಎಂದು ಟ್ವೀಟ್ ಮಾಡಿ ಉಭಯ ರಾಷ್ಟ್ರಗಳ ನಡುವಣ ಸಂಬಂಧಗಳಿಗೆ ಧಕ್ಕೆಯಾಗದಂತೆ ನೋಡಿಕೊಂಡಿದ್ದಾರೆ.
ಸಚಿವ ಜೈಶಂಕರ್ ಅವರು, "ಸಿಂಗಾಪೂರ್ ಮತ್ತು ಭಾರತ ಕರೊನಾ ವಿರುದ್ಧದ ಹೋರಾಟದಲ್ಲಿ ಜೋಡಿದಾರರು. ಭಾರತಕ್ಕೆ ಲಾಜಿಸ್ಟಿಕ್ಸ್ ಹಬ್ ಆಗಿ ಮತ್ತು ಆಕ್ಸಿಜನ್ ಪೂರೈಕೆದಾರನಾಗಿ ಸಿಂಗಾಪೂರ್ ವಹಿಸಿರುವ ಪಾತ್ರವನ್ನು ನಾವು ಪ್ರಶಂಸಿಸುತ್ತೇವೆ. ಮಿಲಿಟರಿ ಏರ್ಕ್ರಾಫ್ಟ್ಅನ್ನು ನಮ್ಮ ಸಹಾಯಕ್ಕಾಗಿ ಬಳಸುತ್ತಿರುವ ಸಿಂಗಾಪೂರ್ನ ಹೆಜ್ಜೆಯು ನಮ್ಮ ವಿಶಿಷ್ಟವಾದ ಸಂಬಂಧದ ಬಗ್ಗೆ ಹೇಳುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.
ಜೊತೆಗೆ, "ಆದಾಗ್ಯೂ ಈ ಬಗ್ಗೆ ಸರಿಯಾಗಿ ತಿಳಿದಿರಬೇಕಾದವರಿಂದ ಬರುವ ಬೇಜವಾಬ್ದಾರಿಯುತ ಹೇಳಿಕೆಗಳು ನಮ್ಮ ದೀರ್ಘಕಾಲೀನ ಸಂಬಂಧವನ್ನು ಹಾಳು ಮಾಡಬಲ್ಲದು. ಅದಕ್ಕಾಗಿ, ದೆಹಲಿ ಸಿಎಂ ಭಾರತದ ಪರವಾಗಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಲಿಚ್ಛಿಸುತ್ತೇನೆ" ಎಂದೂ ಬರೆದಿದ್ದಾರೆ.
ಇದಕ್ಕೆ ಸಿಂಗಾಪೂರ್ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ಅವರು "ಥ್ಯಾಂಕ್ಸ್" ಹೇಳಿದ್ದು, "ನಮ್ಮ ನಮ್ಮ ದೇಶಗಳಲ್ಲಿರುವ ಸನ್ನಿವೇಶಗಳನ್ನು ಪರಿಹರಿಸಿಕೊಂಡು ಒಬ್ಬರಿಗೊಬ್ಬರು ಸಹಾಯ ಮಾಡುವತ್ತ ಗಮನ ಹರಿಸೋಣ. ಪ್ರತಿಯೊಬ್ಬರೂ ಸುರಕ್ಷಿತವಾಗುವವರೆಗೆ ಯಾರೂ ಸುರಕ್ಷಿತರಲ್ಲ" ಎಂದು ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್)