ಕೈ ಕತ್ತರಿಸಿ ಟ್ಯಾಬ್ಲೆಟ್, ಹಣ ಕಸಿದುಹೋದ ದುಷ್ಕರ್ಮಿಗಳು

knife
Published on

ಅಮೃತಸರ : ಹಳ್ಳಿಯಿಂದ ವಾಪಸಾಗುತ್ತಿದ್ದ ವ್ಯಕ್ತಿಯ ಕೈ ಕತ್ತರಿಸಿರುವ ಈರ್ವರು ದುಷ್ಕರ್ಮಿಗಳು, ಅವನ ಬಳಿಯಿದ್ದ ಟ್ಯಾಬ್ಲೆಟ್​ ಮತ್ತು ಹಣವನ್ನು ಕಸಿದುಕೊಂಡು ಹೋಗಿರುವ ಘಟನೆ ಪಂಜಾಬ್​ನ ಅಮೃತಸರದಿಂದ ವರದಿಯಾಗಿದೆ.

ಅಮೃತಸರದ ಆಕಾಶ್ ಅವೆನ್ಯೂ ನಿವಾಸಿ ಪ್ಲಾಥ್ ವಿಶ್ವಾಸ್​ (35 ವರ್ಷ) ಎಂಬುವರು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮೇ 17 ರಂದು ಮಧ್ಯಾಹ್ನ ನೌಶೆಹ್ರಾ ನಂಗ್ಲಿ ಗ್ರಾಮದಿಂದ ಸಾಲದ ಹಣವನ್ನು ಪಡೆದು ಹಿಂತಿರುಗುತ್ತಿದ್ದರು. ಆಗ ಬೈಕ್​ ಮೇಲೆ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕೈಯನ್ನು ತುಂಡರಿಸಿ, ಟ್ಯಾಬ್ಲೆಟ್ ಮತ್ತು 1,500 ರೂ. ಹಣ ಇಡಲಾಗಿದ್ದ ಬ್ಯಾಗನ್ನು ಎತ್ತಿಕೊಂಡು ಪರಾರಿಯಾದರು ಎನ್ನಲಾಗಿದೆ.

ಈ ಕೃತ್ಯ ನಡೆದ ನಂತರ ರಸ್ತೆ ಮೇಲೆ ಕುಸಿದುಕೂತಿರುವ ಸಂತ್ರಸ್ತನ ಒಂದು ಕೈ ನೆಲದ ಮೇಲೆ ಬಿದ್ದಿರುವ ವಿಡಿಯೋ ಜಾಲತಾಣದಲ್ಲಿ ಹರಿದಾಡಿದೆ. ಸಂತ್ರಸ್ತನನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದು, ಕಡಿದುಹೋಗಿದ್ದ ಕೈಯನ್ನು ವೈದ್ಯರು ಮತ್ತೆ ಸೇರಿಸಿದ್ದಾರೆ. ಆತನ ಪರಿಸ್ಥಿತಿ ಉತ್ತಮಗೊಳ್ಳುತ್ತಿದೆ ಎಂದು ಕಾಂಬೊ ಠಾಣಾಧಿಕಾರಿ ಯದ್ವೀಂದರ್​ ಸಿಂಗ್ ಹೇಳಿದ್ದಾರೆ.

ಕೊಲೆ ಯತ್ನ ಮತ್ತು ಬಲ ಪ್ರಯೋಗಿಸಿ ಕಳವು ಮಾಡಿರುವ ಆರೋಪಗಳನ್ನು ದಾಖಲಿಸಿರುವ ಪೊಲೀಸರು, ಆರೋಪಿಗಳನ್ನು ಪತ್ತೆ ಹಚ್ಚಲು ಸಿಸಿಟಿವಿ ಫೂಟೇಜ್​ಗಳನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net