ಲಸಿಕೆ ಹಾಕಿಸಿಕೊಂಡ ಫೋಟೋ ಶೇರ್‌ ಮಾಡಿ ಪೇಚಿಗೆ ಸಿಲುಕಿದ ಟೀಂ ಇಂಡಿಯಾ ಬೌಲರ್‌- ತನಿಖೆಗೆ ಆದೇಶ!

kuldeep
Published on

ಕಾನ್ಪುರ (ಉತ್ತರ ಪ್ರದೇಶ): ಕರೊನಾ ಲಸಿಕೆ ಹಾಕಿಸಿಕೊಂಡು ಹೆಮ್ಮೆಯಿಂದ ಅದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ ಟೀಮ್ ಇಂಡಿಯಾದ ಬೌಲರ್ ಕುಲದೀಪ್ ಯಾದವ್ ಇದೀಗ ಪೇಚಿಗೆ ಸಿಲುಕಿದ್ದಾರೆ!

ನಾನು ಕರೊನಾದ ಮೊದಲ ಡೋಸ್ ಪಡೆದಿದ್ದೇನೆ. ನೀವೂ ಲಸಿಕೆ ಪಡೆಯಿರಿ ಎಂದು ಕುಲದೀಪ್‌ ಮನವಿ ಮಾಡಿದ್ದಾರೆ. ಲಸಿಕೆ ಲಭ್ಯವಾದ ತಕ್ಷಣ ಲಸಿಕೆ ಹಾಕಿಕೊಳ್ಳಿ. ಕರೊನಾ ಹೆಚ್ಚಾಗಿರುವ ಕಾರಣ ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಅವರು ಟ್ವೀಟ‌ನಲ್ಲಿ ಬರೆದಿದ್ದಾರೆ.

ಬರೆದಿರುವುದೆಲ್ಲವೂ ಸರಿಯಾಗಿಯೇ ಇದೆ. ಆದರೆ ಎಡವಟ್ಟು ಆಗಿರುವುದು ಅವರ ಫೊಟೋದಲ್ಲಿ. ಲಸಿಕೆ ಪಡೆದುದರ ಬಗ್ಗೆಯಾಗಲೀ ಅಥವಾ ಅವರು ಫೋಟೋ ಶೇರ್‌ ಮಾಡಿರುವುದು ಸಮಸ್ಯೆಯಲ್ಲ. ಬದಲಿಗೆ ಅವರು ಲಸಿಕೆ ಎಲ್ಲಿ ಪಡೆದರು ಎಂಬುದು ಈ ಫೋಟೋದಿಂದ ಸ್ಪಷ್ಟವಾಗುತ್ತಿರುವುದೇ ಅವರನ್ನು ಇದೀಗ ಪೇಚಿಗೆ ಸಿಲುಕಿಸಿದೆ. ಏಕೆಂದರೆ ಕುಲದೀಪ್ ಆಸ್ಪತ್ರೆಗೆ ಹೋಗಿಲ್ಲ. ಹುಲ್ಲು ಹಾಸಿನ ಮೇಲೆ ಕುಳಿತು ಅವರು ಲಸಿಕೆ ಪಡೆದಿದ್ದಾರೆ. ಇದು ಫೋಟೋದಲ್ಲಿ ಕಾಣಿಸುತ್ತದೆ.

ಕರೊನಾ ಪ್ರೊಟೋಕಾಲ್‌ ಪಾಲಿಸುವ ಬದಲು ವಿಐಪಿಗೆ ವಿಶೇಷ ಟ್ರೀಟ್‌ಮೆಂಟ್‌ ನೀಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾನ್ಪುರ ಮ್ಯಾಜಿಸ್ಟ್ರೇಟ್‌ ಅಲೋಕ್‌ ತಿವಾರಿ ತನಿಖೆಗೆ ಆದೇಶಿಸಿದ್ದಾರೆ. ಈ ರೀತಿ ಮನೆಯಲ್ಲಿಯೇ ಲಸಿಕೆ ಹಾಕಿಸಿಕೊಳ್ಳುವುದು ನಿಯಮ ಬಾಹಿರ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net