

ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಜೂಜಾಡುವ ಸ್ಥಳ ತೋರಿಸಲಿಲ್ಲ ಹಾಗೂ ಕುಡಿಯಲು ಮದ್ಯ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿದ್ದ ಇಬ್ಬರು ಹಂತಕರನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರಾಜಾನುಕುಂಟೆಯ ಹೆಸರಘಟ್ಟ ನಿವಾಸಿ ಲೋಕೇಶ್ (39) ಮತ್ತು ಸಿಂಗನಾಯಕನಹಳ್ಳಿ ನಿವಾಸಿ ನಿಖಿಲ್ (25) ಬಂಧಿತರು. ಶ್ರೇಯಸ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ. ಆರೋಪಿಗಳು ಏ.21ರಂದು ರಾಜಾನುಕುಂಟೆಯ ಪ್ರಕಾಶ್ ಅಲಿಯಾಸ್ ಲೂಸು(34)ನನ್ನು ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಾನುಕುಂಟೆ ಠಾಣೆಯ ರೌಡಿ ಪಟ್ಟಿಯಲ್ಲಿದ್ದ ಪ್ರಕಾಶ್, ಕೊಲೆ ಯತ್ನ ಮತ್ತು ಜೂಜಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಲೋಕೇಶ್ ವಿರುದ್ಧ ಜೂಜಾಟದಲ್ಲಿ ತೊಡಗಿದ್ದ ಪ್ರಕರಣಗಳಿವೆ. ಈ ಹಿಂದೆ ಜೂಜಿನಲ್ಲಿ ಗೆದ್ದ ಹಣದ ವಿಚಾರಕ್ಕೆ ಸ್ನೇಹಿತರು ಜಗಳವಾಡಿದ್ದಾರೆ. ನಂತರ ಒಟ್ಟಾಗಿ ಪಾರ್ಟಿ ಮಾಡಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಸ್ಥಗಿತವಾಗಿತ್ತು. ಅಲ್ಲದೆ, ಪೊಲೀಸ್ ಬಂದೋಬಸ್ತ್ನಿಂದಾಗಿ ಜೂಜಾಡಲು ಸ್ಥಳವಿಲ್ಲದೆ ತೊಂದರೆಯಾಗಿತ್ತು. ಪ್ರಕಾಶ್ನನ್ನು ಸಂರ್ಪಸಿದ್ದ ಲೋಕೇಶ್ ಜೂಜಾಡುವ ಸ್ಥಳದ ಬಗ್ಗೆ ತಿಳಿಸುವಂತೆ ಕೇಳಿದ್ದ. ಅಲ್ಲದೆ, ಮದ್ಯದ ವ್ಯವಸ್ಥೆ ಮಾಡುವಂತೆ ಪೀಡಿಸುತ್ತಿದ್ದ. ಇದೇ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದರು. ಇಸ್ಪೀಟ್ ಆಡುವ ಸ್ಥಳದ ಬಗ್ಗೆ ಗೊತ್ತಿದ್ದರೂ ಹೇಳುತ್ತಿಲ್ಲ ಎಂದು ಪ್ರಕಾಶ್ನ ಮೇಲೆ ಸಿಟ್ಟು ಇಟ್ಟುಕೊಂಡಿದ್ದ. ಇದೇ ಆಕ್ರೋಶದಲ್ಲಿ ಲೋಕೇಶ್, ಇಬ್ಬರು ಸ್ನೇಹಿತರ ಜತೆಗೂಡಿ ಪ್ರಕಾಶ್ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.
ಏ.21ರ ಮಧ್ಯಾಹ್ನ ಪ್ರಕಾಶ್ಗೆ ಕರೆ ಮಾಡಿದ್ದ ಲೋಕೇಶ್, ‘ಮದ್ಯದ ವ್ಯವಸ್ಥೆಯಾಗಿದೆ, ಪಾರ್ಟಿ ಮಾಡೋಣ ಬಾ’ ಎಂದು ಕರೆಸಿಕೊಂಡಿದ್ದ. ಬೈಕ್ನಲ್ಲಿ ಅಲ್ಲಿಗೆ ತೆರಳಿದ್ದ ಪ್ರಕಾಶ್ಗೆ ಹಂತಕರು ಚೂರಿಯಿಂದ 3 ಬಾರಿ ಇರಿದಿದ್ದರು. ರಕ್ತಸ್ರಾವ ಆಗುತ್ತಿದ್ದಂತೆ ಬೈಕ್ನಲ್ಲಿ ಆತನನ್ನು ಮುಸ್ಕೂರ್ಹಳ್ಳಿ ಬಳಿ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.