ಮತ್ತಿಬ್ಬರಲ್ಲಿ ಒಮಿಕ್ರಾನ್ ದೃಢ: ದೇಶದಲ್ಲಿ ನಾಲ್ಕಕ್ಕೇರಿದ ಹೊಸ ರೂಪಾಂತರಿ ಕೇಸ್; ಐದು ರಾಜ್ಯಗಳಿಗೆ ಎಚ್ಚರಿಕೆ

Nation
ನವಿ ಮುಂಬೈನಲ್ಲಿ ಲಸಿಕೆ ಪಡೆಯುತ್ತಿರುವ ಸಾರ್ವಜನಿಕರು.
Published on

ನವದೆಹಲಿ: ಜಗತ್ತಿನಲ್ಲಿ ಆತಂಕಕ್ಕೆ ಕಾರಣವಾಗಿರುವ ಕರೊನಾ ವೈರಸ್​ನ ಹೊಸ ಪ್ರಭೇದ ಒಮಿಕ್ರಾನ್​ನ ತಲಾ ಒಂದು ಪ್ರಕರಣ ಗುಜರಾತ್​ನ ಜಾಮ್ಗರ ಮತ್ತು ಮಹಾರಾಷ್ಟ್ರದ ಮುಂಬೈಯಲ್ಲಿ ಪತ್ತೆಯಾಗಿದ್ದು ದೇಶದಲ್ಲಿ ದೃಢಪಟ್ಟ ಒಮಿಕ್ರಾನ್ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೋಂಕಿಗೆ ಬೇಲಿ ಹಾಕಲು ಕಠಿಣ ಕ್ರಮಗಳಿಗೆ ಮುಂದಾಗುತ್ತಿವೆ.

ಒಮಿಕ್ರಾನ್ ಮೊದಲು ಪತ್ತೆಯಾದ ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಮರಳಿದ್ದ ಒಬ್ಬ ವ್ಯಕ್ತಿಯಲ್ಲಿ ಈ ರೂಪಾಂತರಿ ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಜರಾತ್​ನ ಜಾಮ್ಗರಕ್ಕೆ ಜಿಂಬಾಬ್ವೆಯಿಂದ ಮರಳಿದ್ದ ವ್ಯಕ್ತಿಯಲ್ಲಿ ಒಮಿಕ್ರಾನ್ ತಳಿಯ ಸೋಂಕಿರುವುದು ದೃಢಪಟ್ಟಿದೆ ಎಂದು ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಪತ್ತೆಯಾದ ಎರಡು ಕೇಸ್ ಸೇರಿ ಇದು ದೇಶದ ಮೂರನೇ ಒಮಿಕ್ರಾನ್ ಪ್ರಕರಣವಾಗಿದೆ. ಜಾಮ್ಗರದ ನಿವಾಸಿಯಾದ 72 ವರ್ಷದ ಪುರುಷನಲ್ಲಿ ಗುರುವಾರ ಕರೊನಾ ಸೋಂಕಿರುವುದು ದೃಢಪಟ್ಟ ನಂತರ ಆತನ ಗಂಟಲು ದ್ರವದ ಸ್ಯಾಂಪಲ್​ಅನ್ನು ಜಿನೋಮ್ ಸೀಕ್ವೆನ್ಸಿಂಗ್​ಗಾಗಿ ಕಳಿಸಲಾಗಿತ್ತು. ಆತನಲ್ಲಿ ಒಮಿಕ್ರಾನ್ ಸೋಂಕಿರುವುದು ಪರೀಕ್ಷೆಯಲ್ಲಿ ಖಚಿತಪಟ್ಟಿದೆ ಎಂದು ಗುಜರಾತ್ ಆರೋಗ್ಯ ಇಲಾಖೆ ಆಯುಕ್ತ ಜೈ ಪ್ರಕಾಶ್ ಶಿವಹರೆ ತಿಳಿಸಿದ್ದಾರೆ.

ಕಂಟೇನ್ಮೆಂಟ್ ವಲಯ: ಒಮಿಕ್ರಾನ್ ಸೋಂಕಿತ ವ್ಯಕ್ತಿ ವಾಸವಿರುವ ಪ್ರದೇಶದಲ್ಲಿ ಮೈಕ್ರೋ- ಕಂಟೇನ್ಮೆಂಟ್ ವಲಯವನ್ನು ರಚಿಸಲಾಗಿದೆ. ಅಧಿಕಾರಿಗಳು ಅಲ್ಲಿರುವ ಜನರನ್ನು ಪತ್ತೆ ಹಚ್ಚಿ ಪರೀಕ್ಷೆ ನಡೆಸುತ್ತಿದ್ದಾರೆ. ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿಟ್ಟು ನಿಗಾ ಇರಿಸಲಾಗಿದೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೋಜ್ ಅಗರ್​ವಾಲ್ ತಿಳಿಸಿದ್ದಾರೆ. ಒಮಿಕ್ರಾನ್ ಅಪಾಯದ ಕಾರಣ ದೇಶಕ್ಕೆ ಬರುತ್ತಿರುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ ಹಾಗೂ ಅವರ ಪರೀಕ್ಷೆ ಮಾಡಲಾಗುತ್ತಿದೆ.

ಮುಂಬೈಯಲ್ಲಿ ಹೊಸ ನಿಯಮಗಳು: ದೇಶದ ಆರ್ಥಿಕ ರಾಜಧಾನಿ ಮುಂಬೈ ಮಹಾನಗರಿಯಲ್ಲಿ ಸೋಂಕು ತಡೆಗೆ ಕಠಿಣ ನಿಯಮಗಳನ್ನು ಜಾರಿಗೊಳಿಸ ಲಾಗುತ್ತಿದೆ. ಮುಂಬೈಯ ‘ವಾರ್ಡ್ ವಾರ್ ರೂಂ’ ತಂಡ ಹೋಂ ಕ್ವಾರಂಟೈನ್​ನಲ್ಲಿರುವವರಿಗೆ ದಿನಕ್ಕೆ ಕನಿಷ್ಠ ಐದು ಸಲ ಫೋನ್ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿಕ್ಙೊಳ್ಳಲಿದೆ. ನಿಯಮಗಳನ್ನು ಪಾಲಿಸುತ್ತಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

ಡೆಲ್ಟಾಗಿಂತ ದುಪ್ಪಟ್ಟು ವೇಗ: ಒಮಿಕ್ರಾನ್ ಡೆಲ್ಟಾಗಿಂತ ಎರಡು ಪಟ್ಟು ವೇಗದಲ್ಲಿ ಹರಡುತ್ತಿದೆ. ವೈರಾಣುವಿನ ಸೋಂಕುಕಾರಕತೆ ಮತ್ತು ದೇಹದ ರೋಗ ನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯದ ಸಂಯೋಜನೆಯಿಂದಾಗಿ ಹರಡುವ ಪ್ರಮಾಣ ಹೆಚ್ಚಿದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಕಾರ್ಲ್ ಪಿಯರ್​ಸನ್ ಹೇಳಿದ್ದಾರೆ. ಪಿಯರ್​ಸನ್ ಲಂಡನ್ ಸ್ಕೂಲ್ ಆಫ್ ಹೈಜೀನ್ ಆಂಡ್ ಟ್ರಾಪಿಕಲ್ ಮೆಡಿಸಿನ್​ನ ಗಣಿತೀಯ ಮಾಡೆಲರ್ ಆಗಿದ್ದಾರೆ. ಡೆಲ್ಟಾ ತಳಿ ಕರೊನಾ ವೈರಸ್​ನ ಇದುವರೆಗಿನ ರೂಪಾಂತರಿಗಳಲ್ಲೇ ಹೆಚ್ಚು ಅಪಾಯಕಾರಿಯಾಗಿತ್ತು. ಒಮಿಕ್ರಾನ್ ಕೂಡ 2 ಪಟ್ಟು ಜಾಸ್ತಿ ವೇಗದಲ್ಲಿ ಹರಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವಿದೇಶಿ ಪ್ರಯಾಣಿಕರು ನಾಪತ್ತೆ!: ಒಮಿಕ್ರಾನ್ ಆತಂಕ ನಡುವೆ, ವಿದೇಶಗಳಿಂದ ಆಗಮಿಸುವ ಪ್ರಯಾಣಿಕರು, ಅದರಲ್ಲೂ ವಿಶೇಷವಾಗಿ ‘ಅಪಾಯಕಾರಿ’ (ರಿಸ್ಕ್) ದೇಶಗಳಿಂದ ಬರುವವರು ಕಡ್ಡಾಯ ಪರೀಕ್ಷೆಯಿಂದ ತಪ್ಪಿಸಿಕೊಂಡು ತಲೆಮರೆಸಿ ಕೊಳ್ಳುತ್ತಿರುವ ವಿದ್ಯಮಾನ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಕ್ವಾರಂಟೈನ್ ಶಿಷ್ಟಾಚಾರ ಕೂಡ ಪಾಲಿಸದೆ ಸೋಂಕು ಇನ್ನಷ್ಟು ಹರಡಲು ಕಾರಣರಾಗುತ್ತಿದ್ದಾರೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶ ಮೀರಠ್​ಗೆ ಆಗಮಿಸಿದ್ದ ಸುಮಾರು 300 ಪ್ರಯಾಣಿಕರಲ್ಲಿ 13 ಜನರು ಸುಳ್ಳು ವಿಳಾಸ ನೀಡಿ ನಾಪತ್ತೆಯಾಗಿದ್ದಾರೆ. ಆ ಪೈಕಿ ಏಳು ಮಂದಿ ಒಮಿಕ್ರಾನ್ ಮೊದಲ ಬಾರಿಗೆ ಪತ್ತೆಯಾದ ದಕ್ಷಿಣ ಆಫ್ರಿಕಾದಿಂದ ಬಂದವರಾಗಿದ್ದಾರೆ. ಅವರನ್ನು ಪತ್ತೆ ಮಾಡಿ ಕೋವಿಡ್ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದಿಂದ ಬಂದ ಒಬ್ಬ ಮಹಿಳೆ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಚಂಡೀಗಢದ ಅಧಿಕಾರಿಗಳು ಆಕೆ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ಕರ್ನಾಟಕ ಸಹಿತ 5 ರಾಜ್ಯಗಳಿಗೆ ಅಲರ್ಟ್

ಒಮಿಕ್ರಾನ್ ಭೀತಿಯ ನಡುವೆಯೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಕರ್ನಾಟಕ, ಒಡಿಶಾ, ಕೇರಳ, ತಮಿಳುನಾಡು, ಮಿಜೋರಾಂ ಮತ್ತು ಜಮ್ಮು-ಕಾಶ್ಮೀರ ಸರ್ಕಾರಗಳಿಗೆ ಶನಿವಾರ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್, ಕೋವಿಡ್​ನ ದೈನಿಕ ಕೇಸ್ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಇದು ಕಳವಳಕಾರಿ ಎಂದಿದ್ದಾರೆ. ವಿಶೇಷವಾಗಿ ರಿಸ್ಕ್ ದೇಶಗಳಿಂದ ಆಗಮಿಸುವವರು ಮತ್ತು ಹಾಟ್​ಸ್ಪಾಟ್​ಗಳ ಮೇಲೆ ನಿಗಾ, ಎಲ್ಲ ಕೋವಿಡ್ ರೋಗಿಗಳ ಸ್ಯಾಂಪಲ್​ಗಳನ್ನು ಜಿನೋಮ್ ಸೀಕ್ವೆನ್ಸಿಂಗ್​ಗೆ ಕಳಿಸುವುದನ್ನು ಖಾತರಿಪಡಿಸುವಂತೆ ಪತ್ರದಲ್ಲಿ ಸೂಚಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನವೆಂಬರ್ 26ರಿಂದ ಡಿ. 2ರ ನಡುವೆ ಹಿಂದಿನ ವಾರಕ್ಕೆ ಹೋಲಿಸಿದರೆ ದೈನಿಕ ಕೇಸ್​ಗಳಲ್ಲಿ ಶೇಕಡ 727ರಷ್ಟು ಆಘಾತಕಾರಿ ಪ್ರಮಾಣದ ಏರಿಕೆಯಾಗಿದೆ.

ಮರುಸೋಂಕಿನ ಸಾಧ್ಯತೆ: ಒಮಿಕ್ರಾನ್ ಪ್ರಭೇದದಿಂದ ಡೆಲ್ಟಾ ಅಥವಾ ಬೀಟಾ ರೂಪಾಂತರಿ ಗಿಂತ ಮೂರು ಪಟ್ಟು ಅಧಿಕ ಮರುಸೋಂಕಿನ (ರೀಇನ್​ಫೆಕ್ಷನ್) ಸಾಧ್ಯತೆಯಿದೆ ಎಂದು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಹೇಳಿದ್ದಾರೆ. ಈ ಕುರಿತ ಅಧ್ಯಯನ ವರದಿ ಗುರುವಾರ ಪ್ರಕಟವಾಗಿದೆ.

3ರಲ್ಲಿ ಒಬ್ಬರು ಮಾಸ್ಕ್ ಬಳಸುವುದಿಲ್ಲ: ಭಾರತದಲ್ಲಿ ಮೂರರಲ್ಲಿ ಒಬ್ಬರು ಮನೆಗಳಿಂದ ಹೊರಗೆ ಹೋಗುವಾಗ ಮಾಸ್ಕ್ ತೆಗೆದುಕೊಂಡು ಹೋಗುವುದಿಲ್ಲ ಹಾಗೂ ಬಳಸುವುದಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ. ಒಮಿಕ್ರಾನ್​ನಿಂದ ಕಳವಳಕಾರಿ ಸನ್ನಿವೇಶ ಸೃಷ್ಟಿಯಾಗಿದ್ದರೂ ಮಾಸ್ಕ್ ಬಳಕೆಯ ಪ್ರಮಾಣ ಇನ್ನೂ ತುಂಬಾ ಕಡಿಮೆಯಿದ್ದು ಕಳವಳಕಾರಿಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಲೋಕಲ್​ಸರ್ಕಲ್ಸ್ ಈ ಸಮೀಕ್ಷೆ ನಡೆಸಿದೆ.

ಆರು ತಿಂಗಳಲ್ಲಿ ಒಮಿಕ್ರಾನ್ ವಿಶ್ವವ್ಯಾಪಿ: ಮುಂದಿನ 3ರಿಂದ 6 ತಿಂಗಳಲ್ಲಿ ಒಮಿಕ್ರಾನ್ ಪ್ರಭೇದ ಇಡೀ ಜಗತ್ತನ್ನು ಆವರಿಸಲಿದೆ ಎಂದು ಸಿಂಗಾಪುರದ ಸೋಂಕು ರೋಗಗಳ ವೈದ್ಯ ಲಿಯಾಂಗ್ ಹೋ ನ್ಯಾಮ್ ಹೇಳಿದ್ದಾರೆ. ಹೊಸ ರೂಪಾಂತರಿ ವಿರುದ್ಧ ಶೀಘ್ರವೇ ಲಸಿಕೆಯನ್ನು ಅಭಿವೃದ್ಧಿಪಡಿಸಬಹುದಾದರೂ ಅದರ ಪರಿಣಾಮ ತಿಳಿಯಲು ಮೂರರಿಂದ ಆರು ತಿಂಗಳು ಕಾಯಬೇಕಾಗುತ್ತದೆ ಎಂದವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net