ಅತ್ಯಾಚಾರ ವಿರೋಧಿಸಿದ್ದಕ್ಕೆ ಮೂಗನ್ನೇ ಕತ್ತರಿಸಿದರು

nose
Published on

ಡೆಹ್ರಾಡೂನ್​: ತನ್ನ ಮೇಲೆ ಅತ್ಯಾಚಾರವೆಸಗಲು ಬಂದ ಪಾಪಿಗಳನ್ನು ವಿರೋಧಿಸಿದ್ದಕ್ಕೆ ಯುವತಿಯ ಮೂಗನ್ನೇ ಕತ್ತರಿಸಿರುವ ಘಟನೆ ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ಕಲ್ಫ್ಲಿಗೈರ್​ ಗ್ರಾಮದಲ್ಲಿ ನಡೆದಿದೆ. ಆರೋಪಿಗಳು ಯುವತಿಯ ಪೋಷಕರ ಮೇಲೂ ಹಲ್ಲೆ ನಡೆಸಿ, ಕಳ್ಳತನ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಇಬ್ಬರು ಯುವಕರು ಈ ಕೆಲಸ ಮಾಡಿದ್ದಾರೆ. ತಮ್ಮದೇ ಊರಿನ 17 ವರ್ಷದ ಹೆಣ್ಣು ಮಗಳ ಮನೆಗೆ ನುಗ್ಗಿದ ಅವರು ಆಕೆಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಅದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದಾಗ ಆಕೆಯ ಮೂಗನ್ನೇ ಕತ್ತರಿಸಿಬಿಟ್ಟಿದ್ದಾರೆ. ಆಕೆಯ ರಕ್ಷಣೆಗೆ ಓಡಿಬಂದ ತಂದೆ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾರೆ. ಮನೆಯಲ್ಲಿದ್ದ 20 ಸಾವಿರ ಮೌಲ್ಯದ ಚಿನ್ನಾಭರಣ ಮತ್ತು ಹಣವನ್ನು ತೆಗೆದುಕೊಂಡು ಓಡಿಹೋಗಿದ್ದಾರೆ.

ಆರೋಪಿಗಳು ಮನೆಯಿಂದ ಓಡಿ ಹೋದ ತಕ್ಷಣ, ಯುವತಿಯ ತಂದೆ ತಾಯಿ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಲು ಅವರ ಮನೆಗೆ ತೆರಳಿದ್ದಾರೆ. ಆದರೆ ಅವರಿಬ್ಬರು ತಲೆ ಮರೆಸಿಕೊಂಡಿರುವುದಾಗಿ ಹೇಳಲಾಗಿದೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್​ 376 ಮತ್ತು 354ರಲ್ಲಿ ಪ್ರಕರಣ ದಾಖಲಾಗಿದೆ. ಅವರನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net