ಮತ್ಸ್ಯಪ್ರಿಯರಿಗೆ ಸಕತ್​ ಖುಷಿ ಸುದ್ದಿ: ತಾಜಾತಾಜಾ ಮೀನು ಇನ್ಮುಂದೆ ಆನ್​ಲೈನ್​ನಲ್ಲಿ!

fish
Published on

ಬೆಂಗಳೂರು: ಇದು ಡಿಜಿಟಲ್​ ಯುಗ. ಕುಳಿತಲ್ಲಿಯೇ ಒಂದೇ ಕ್ಲಿಕ್​ನಲ್ಲಿ ಬಹುತೇಕ ಎಲ್ಲಾ ವಸ್ತುಗಳೂ ಮನೆಬಾಗಿಲಿಗೆ ಬಂದುಬೀಳುವ ದಿನಗಳಿವು. ಇದಕ್ಕೀಗ ಮೀನುಗಳ ಸೇರ್ಪಡೆಯಾಗಿದೆ!

ಹೌದು. ಮೀನು ಕೂಡ ಡಿಜಿಟಲ್​ ಆಗುತ್ತಿದೆ. ಆನ್‍ಲೈನ್ ಮೂಲಕ ಮನೆ ಬಾಗಿಲಿಗೆ ಮೀನು ಒದಗಿಸುವ ಪ್ರಕ್ರಿಯೆಗೆ ಚಾಲನೆ ದೊರೆಯುತ್ತಿದ್ದು, ಶೀಘ್ರದಲ್ಲಿಯೇ ಇದು ಕಾರ್ಯರೂಪಕ್ಕೆ ಬರಲಿದೆ. ಈ ಕುರಿತು ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟಾ ಶ್ರೀನಿವಾಸಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೀನನ್ನು ಆನ್‍ಲೈನ್ ಮೂಲಕ ಮನೆಗೆ ಸರಬರಾಜು ಮಾಡುವ ಯೋಜನೆ ಇಲಾಖೆಯಲ್ಲಿತ್ತು. ಅದನ್ನು ಶೀಘ್ರದಲ್ಲಿಯೇ ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ 137.20 ಕೋಟಿ ರೂ. ಯೋಜನಾ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ.

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮುಂದಿನ ಐದು ವರ್ಷಗಳಿಗೆ ರಾಜ್ಯದಲ್ಲಿ ಸುಮಾರು 4,115 ಕೋಟಿ ರೂ. ಕ್ರಿಯಾ ಯೋಜನೆ ಸಲ್ಲಿಸಲಾಗಿದೆ ಎಂದರು.

ಆನ್​ಲೈನ್​ ಮೂಲಕ ಹೇಗೆ ಮೀನು ಪಡೆಯಬಹುದು ಎಂಬ ಬಗ್ಗೆ ಮಾಹಿತಿ ನೀಡಿದ ಅವರು, ಇದಕ್ಕಾಗಿ ಆ್ಯಪ್​ ಸಿದ್ದಪಡಿಸಲಾಗುತ್ತಿದೆ. ನ.21ರಂದು ಮತ್ಸ್ಯ ಸಂಪದ ಯೋಜನೆ ಹಾಗೂ ಕಾರ್ಯಗಾರಕ್ಕೆ ಚಾಲನೆ ನೀಡಲಾಗುತ್ತದೆ. ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳುವ ಮೂಲಕ ಬೇಕಾದ ಮೀನುಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಗ್ರಾಹಕರಿಗೆ ಇದೆ ಎಂದರು.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ಸ್ಯ ಸಂಪದ ಯೋಜನೆಗೆ ಚಾಲನೆ ನೀಡಲಿದ್ದಾರೆ. ಒಳನಾಡು ಮೀನುಗಾರಿಕೆಯಲ್ಲಿ ರಾಜ್ಯ ದೇಶದಲ್ಲೇ 9ನೇ ಸ್ಥಾನದಲ್ಲಿದೆ. ಸಮುದ್ರ ಕಿನಾರೆ ಮೀನುಗಾರಿಕೆಯಲ್ಲಿ 4ನೇ ಸ್ಥಾನದಲ್ಲಿ ಇದರಲ್ಲಿ ಪ್ರಥಮ ಸ್ಥಾನ ಪಡೆಯುವುದು ನಮ್ಮ ಗುರಿಯಾಗಿದೆ ಎಂದು ಕೋಟಾ ಹೇಳಿದರು.

ನ.21ರಂದು ನಡೆಯುವ ಕಾರ್ಯಾಗಾರದಲ್ಲಿ ಮೀನಿನ ಖಾದ್ಯಗಳನ್ನು ಪರಿಚಯಿಸಲಾಗುವುದು. ಮಂಗಳೂರು ಮೀನುಗಾರಿಕೆ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಮಾಡಲಾಗುವುದು. ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಉಡುಪಿ, ಮೈಸೂರು ಮುಂತಾದ ಕಡೆ ಮೀನುಗಾರಿಕೆ ಕಾಲೇಜು ಸ್ಥಾಪನೆ ಮಾಡಿ ಇತರೆ 10 ಕಡೆ ಡಿಪ್ಲೊಮಾ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದರು.

ಇದರ ಜತೆಗೆ, ಹೆಸರುಘಟ್ಟದಲ್ಲಿರುವ ಮೀನುಗಾರಿಕೆ ಸಾಕಾಣಿಕೆ ಕೇಂದ್ರದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಮೀನು ಕ್ವಾರೈಂಟ್‍ನ್ ಕೇಂದ್ರ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಆತ್ಮನಿರ್ಭರ ಯೋಜನೆಯಡಿ ಸುಮಾರು 10 ಸಾವಿರ ಯುವಕರಿಗೆ ಮೀನುಗಾರಿಕೆ ಇಲಾಖೆಯಿಂದ ರಾಜ್ಯದ ವಿವಿಧೆಡೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net