

ಚೆನ್ನೈ: ಕಾರು ಡಿಕ್ಕಿ ಹೊಡೆದು ಸಶಸ್ತ್ರ ಮೀಸಲು ಪೊಲೀಸರಿಬ್ಬರು ದುರಂತ ಸಾವಿಗೀಡಾಗಿರುವ ಘಟನೆ ಚೆನ್ನೈನ ಮೊಗಪ್ಪೈರ್ ಬಳಿ ಬುಧವಾರ ನಡೆದಿದೆ. ಬೆಳ್ಳಂಬೆಳಗ್ಗೆಯೇ ಘಟನೆ ನಡೆದಿದ್ದು ಕೆಲಹೊತ್ತಿನ ಬಳಿಕ ನಿರ್ಲಕ್ಷ್ಯ ವಹಿಸಿದ ಚಾಲಕನನ್ನು ಬಂಧಿಸಲಾಗಿದೆ.
ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯದ ಪ್ರಕಾರ ಅಪಘಾತದ ಬುಧವಾರ ಬೆಳಗ್ಗೆ 4.15ಕ್ಕೆ ನಡೆದಿದೆ. ಪೇದೆಗಳಾದ ಬಿ. ರವೀಂದ್ರನ್ (32) ಮತ್ತು ವಿ ಕಾರ್ತಿಕ್ (34) ಅಂಬತ್ತೂರ್ ರಿಯಲ್ ಎಸ್ಟೇಟ್ ರಸ್ತೆಯಲ್ಲಿ ಬೈಕ್ನಲ್ಲಿ ಬರುತ್ತಿದ್ದರು. ಡಿಎವಿ ಹುಡುಗಿಯ ಶಾಲೆ ಬಳಿ ಬರುತ್ತಿದ್ದಂತೆ ಬೈಕ್ ಓಡಿಸುತ್ತಿದ್ದ ರವೀಂದ್ರನ್ ಬಲ ತಿರುವು ತೆಗೆದುಕೊಂಡ ಬೆನ್ನಲ್ಲೇ ವೇಗವಾಗಿ ಬಂದ ಎಸ್ಯುವಿ ಬೈಕ್ ಅನ್ನು ಗುದ್ದಿಕೊಂಡಿ ಹೋಗಿ ನಿಂತಿತು. ಡಿಕ್ಕಿಯ ರಭಸಕ್ಕೆ ಪೇದೆಗಳಿಬ್ಬರು ಬೈಕ್ನಿಂದ ಹಾರುವುದನ್ನು ಸಿಸಿಟಿವಿ ದೃಶ್ಯದಲ್ಲಿ ಕಾಣಬಹುದಾಗಿದೆ.
ರವೀಂದ್ರನ್ ಗಂಭೀರ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟರೆ, ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಕಾರ್ತಿಕ್ ಬೆಳಗ್ಗೆ 11 ಗಂಟೆಗೆ ಕೊನೆಯುಸಿರೆಳೆದರು. ಇಬ್ಬರು ಸಹ ಕೊಯಂಬೇಡುವಿನಲ್ಲಿರುವ ಚೆನ್ನೈ ಮೊಫುಸ್ಸಿಲ್ ಬಸ್ ಟರ್ಮಿನಲ್ (ಸಿಎಂಬಿಟಿ)ಗೆ ಕರ್ತವ್ಯಕ್ಕೆಂದು ಹಾಜರಾಗುತ್ತಿದ್ದರು. ಇವರು ವಿವಿಧ ಜಿಲ್ಲೆಗಳಿಂದ ಬರುವ ಬಸ್ಸುಗಳನ್ನು ಸುವ್ಯವಸ್ಥಿತಗೊಳಿಸಲು ಸಹಾಯ ಮಾಡುತ್ತಿದ್ದರು.
ಇದೇ ವೇಳೆ ಬಂಧಿತ ಆರೋಪಿಯನ್ನು ಕಾಲೇಜು ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಮದ್ಯಪಾನ ಮಾಡಿದ್ದ ಯಾವುದೇ ಸೂಚನೆ ತಿಳಿದುಬಂದಿಲ್ಲ. ರೋಹಿತ್ ಸೂರ್ಯ (21), ವರುಣ್ ಸೆಕರ್ (20) ಮತ್ತು ಅಮರ್ನಾತ್ ಎಂಬ ವಿದ್ಯಾರ್ಥಿಗಳು ಕಾರಿನಲ್ಲಿದ್ದರು. ಹುಟ್ಟುಹಬ್ಬ ಆಚರಣೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ. ಅಮರ್ನಾಥ್ ಎಂಬ ಯುವಕ ಕಾರು ಚಲಾಯಿಸುತ್ತಿದ್ದ. ತುಂಬಾ ವೇಗವಾಗಿ ಬರುತ್ತಿದ್ದರಿಂದ ನಿಯಂತ್ರಣ ಮಾಡಲಾಗದೇ ಬಲ ತಿರುವು ಪಡೆದುಕೊಳ್ಳುತ್ತಿದ್ದ ಪೇದೆಗಳಿಗೆ ಡಿಕ್ಕಿ ಹೊಡೆಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರಾದ ರವೀಂದ್ರನ್ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ. ಕಾರ್ತಿಕ್ ಪತ್ನಿ ಮತ್ತು ಹಿರಿಯ ಪಾಲಕರನ್ನು ಬಿಟ್ಟು ಹೋಗಿದ್ದಾರೆ. ಸಂತ್ರಸ್ತರ ರಕ್ತಸಂಬಂಧಿಗಳಿಗೆ ಯಾವುದೇ ಪರಿಹಾರ ನೀಡಲು ಬಯಸಿದರೆ ನೈತಿಕ ಹೊಣೆಗಾರಿಕೆ ತೆಗೆದುಕೊಳ್ಳುವುದು ಆರೋಪಿಗಳ ಕುಟುಂಬಗಳಿಗೆ ಬಿಟ್ಟದ್ದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. (ಏಜೆನ್ಸೀಸ್)
(ವಿಡಿಯೋ ಕೃಪೆ: ನ್ಯೂಸ್ ಮಿನಟ್)