

ನವದೆಹಲಿ: ಟ್ವಿಟರ್ ವಲಯದಲ್ಲಿ ಭಾರಿ ಬೆಳವಣಿಗೆಗಳು ನಡೆಯುತ್ತಿದ್ದು, ಇದೀಗ ಟ್ವಿಟರ್ ಡೀಲ್ ಕೂಡ ಸ್ಥಗಿತಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಮತ್ತೊಂದು ಸಂಚಲನ ಮೂಡಿದೆ.
ಉದ್ಯಮಿ, ಟೆಸ್ಲಾ ಕಂಪನಿಯ ಸಿಇಒ 44 ಬಿಲಿಯನ್ ಡಾಲರ್ ಕೊಟ್ಟು ಟ್ವಿಟರ್ ಕಂಪನಿಯನ್ನು ಖರೀದಿಸುವ ವಿಚಾರ ಕಳೆದ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದು, ಇದೀಗ ಅವರು ಆ ನಿರ್ಧಾರದಿಂದ ಹಿಂದೆ ಸರಿಯವು ಲಕ್ಷಣಗಳು ಕಾಣಿಸಿವೆ. ಅಷ್ಟಕ್ಕೂ ಖುದ್ದು ಎಲಾನ್ ಮಸ್ಕ್ ಮಾಡಿರುವ ಟ್ವೀಟ್ ಈಗ ಎಲ್ಲ ಉಲ್ಟಾ ಆಗುವ ಸಾಧ್ಯತೆಗಳನ್ನು ಸೃಷ್ಟಿಸಿದೆ.
ಟ್ವಿಟರ್ ಡೀಲ್ ತಾತ್ಕಾಲಿಕವಾಗಿ ಪೆಂಡಿಂಗ್ನಲ್ಲಿ ಇರಲಿದೆ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಟ್ವಿಟರ್ ಬಳಕೆದಾರರ ಪೈಕಿ ಫೇಕ್ ಅಕೌಂಟ್ಗಳ ಸಂಖ್ಯೆ ಶೇ. 5ಕ್ಕಿಂತ ಕಡಿಮೆ ಇರಬೇಕಾಗಿದ್ದು, ಆ ಕುರಿತ ಲೆಕ್ಕಾಚಾರ ಬಾಕಿ ಇರುವುದರಿಂದ ಖರೀದಿ ಪ್ರಕ್ರಿಯೆಯನ್ನು ಸ್ಥಗಿತದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಎಲಾನ್ ಹೀಗೆ ಹೇಳಿದ ಬಳಿಕ ಟ್ವಿಟರ್ ಷೇರುಗಳಲ್ಲಿ ಶೇ. 20 ಕುಸಿತ ಕಂಡಿದೆ ಎನ್ನಲಾಗಿದೆ. ಅದಾಗ್ಯೂ ಎಲಾನ್ ಮಸ್ಕ್ ತಮಾಷೆಗೆ ಹೀಗೆ ಹೇಳಿರಬಹುದಾ ಅಥವಾ ನಿಜವಾಗಿಯೂ ಖರೀದಿ ಕುರಿತು ಎರಡನೇ ಯೋಚನೆ ಮಾಡುತ್ತಿದ್ದಾರಾ ಎಂಬುದು ಇನ್ನೂ ಖಚಿತವಾಗಿಲ್ಲ. ಅಂದಹಾಗೆ ಎಲನ್ ಮಸ್ಕ್ ಡೀಲ್ಗೆ ಟ್ವಿಟರ್ ಕಂಪನಿ ಒಪ್ಪಿದ್ದರೂ ಅದಿನ್ನೂ ಷೇರುದಾರರ ಮಾನ್ಯತೆ ಪಡೆಯವುದು ಬಾಕಿ ಇದೆ. ಒಟ್ಟಿನಲ್ಲಿ ಸದ್ಯ ಟ್ವಿಟರ್ ಡೀಲ್ನಲ್ಲಿ ಅಸ್ಪಷ್ಟತೆ ಉಂಟಾಗಿದೆ.