ನಲಪಾಡ್​ ಹಳೇ ಕೇಸ್​ ಕೆದಕಿ ಕೆಣಕಿದ ನಟಿ ರಮ್ಯಾ; ಜಾಮೀನಿನ ಮೇಲಿರುವ ಅಧ್ಯಕ್ಷ ಎಂದು ವ್ಯಂಗ್ಯ..

Ramya Nalapad
Published on

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಹಮ್ಮದ್ ನಲಪಾಡ್ ಮತ್ತು ಮಾಜಿ ಸಂಸದೆ, ನಟಿ ರಮ್ಯಾ ನಡುವಿನ ವಾಕ್ಸಮರ ಇದೀಗ ಮತ್ತೊಂದು ಹಂತಕ್ಕೆ ತಲುಪಿದ್ದು, ನಲಪಾಡ್​ ಹಳೇ ಕೇಸನ್ನು ಕೆದಕಿ ನಟಿ ರಮ್ಯಾ ಕೆಣಕಿದ್ದಾರೆ.

ಇಂದು ಉಡುಪಿಯಲ್ಲಿ ರಮ್ಯಾ ವಿಚಾರವಾಗಿ ಮಾತನಾಡಿದ್ದ ನಲಪಾಡ್, ರಮ್ಯಾ ಅಟೆನ್ಷನ್​ ಸೀಕರ್ ಎಂದು ಹೇಳಿದ್ದಲ್ಲದೆ, ಆಕೆ ಇಷ್ಟು ವರ್ಷ ಎಲ್ಲಿದ್ದರು? ಎಲ್ಲೂ ಇಲ್ಲದ ರಮ್ಯಾ ಸಡನ್ನಾಗಿ ಯಾಕೆ ಬಂದರು? ತಮ್ಮ ಅಸ್ತಿತ್ವ ತೋರಿಸಲು ಬಂದಿದ್ದಾರಾ ಅಥವಾ ನಾನೂ ಒಬ್ಬಳು ಇದೀನಿ ಅಂತ ತೋರಿಸಿಕೊಳ್ಳುತ್ತಿದ್ದಾರಾ ಎಂದು ಪ್ರಶ್ನಿಸಿದ್ದರು.

ಯಾವುದಾದರೂ ಒಂದು ಕುರ್ಚಿ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರಾ ಎನಿಸುತ್ತಿದೆ. ಅವರು ಬಂದದ್ದು ಯಾಕೆ, ಹೀಗೆಲ್ಲ ಮಾಡುತ್ತಿರುವುದು ಯಾವುದಕ್ಕೆ ಅಂತ ನಾವು ಅರ್ಥಮಾಡಿಕೊಳ್ಳಬೇಕು ಎಂದಿದ್ದರು. ಅದಕ್ಕೆ ಈಗ ರಮ್ಯಾ ಟ್ವೀಟ್​ ಮೂಲಕ ಉತ್ತರ ಕೊಟ್ಟಿದ್ದಾರೆ.

ನಲಪಾಡ್​ ಈ ಹಿಂದೆ ಐಷಾರಾಮಿ ಹೋಟೆಲೊಂದರಲ್ಲಿ ಉದ್ಯಮಿಯೊಬ್ಬರ ಪುತ್ರನಿಗೆ ಹಿಗ್ಗಾಮುಗ್ಗಾ ಹೊಡೆದು ಅವಾಂತರ ಸೃಷ್ಟಿಸಿ ಸಂಕಷ್ಟ ಮೈಮೇಲೆಳೆದುಕೊಂಡಿದ್ದ ಪ್ರಕರಣವನ್ನು ಕೆದಕಿ, ಅದಕ್ಕೆ ಸಂಬಂಧಿಸಿದ ಪತ್ರಿಕಾ ವರದಿಯ ತುಣುಕುಗಳನ್ನು ಹಂಚಿಕೊಂಡಿರುವ ರಮ್ಯಾ, ಈ ಮೂಲಕ ನಲಪಾಡ್​ ಅವರನ್ನು ಕೆಣಕಿದ್ದಾರೆ.

ತನ್ನ ಮುಂದೆ ಆತ ಏನೂ ಅಲ್ಲ ಎಂಬಂತೆ ನಲಪಾಡ್​ನನ್ನು ಹುಡುಗ ಎಂದು ಕರೆದಿರುವ ರಮ್ಯಾ, ಅವರ ಸ್ಥಾನಮಾನವನ್ನೂ ವ್ಯಂಗ್ಯವಾಡಿದ್ದಾರೆ. 'ಈ ಹುಡುಗ ನಲಪಾಡ್​ ರಾಜ್ಯ ಯುವ ಕಾಂಗ್ರೆಸ್​ನ 'ಜಾಮೀನಿನ ಮೇಲಿರುವ' ಅಧ್ಯಕ್ಷ, ಈತ ನನ್ನ ಸಮಗ್ರತೆಯನ್ನೇ ಪ್ರಶ್ನಿಸುತ್ತಿದ್ದಾನೆ, ವಾಹ್​...' ಎಂದೂ ತಮಾಷೆ ಮಾಡಿದ್ದಾರೆ ರಮ್ಯಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net