

ಅಂಕಾರ (ಟರ್ಕಿ): ಸೋದರಸಂಬಂಧಿಯೊಂದಿಗೆ ನಿಶ್ಚಯಿಸಿದ್ದ ಮದುವೆಗೆ ಒಪ್ಪದೆ ಪ್ರಿಯಕರನೊಂದಿಗೆ ಓಡಿ ಹೋದ ಯುವತಿಯನ್ನು ಆಕೆಯ ಕುಟುಂಬ ಬರ್ಬರವಾಗಿ ಹತ್ಯೆ ಮಾಡಿ, ಪ್ರಿಯಕರನನ್ನು ರೇಪ್ ಮಾಡಿ ಕೊಂದಿರುವ ಭಯಾನಕ ಘಟನೆ ಟರ್ಕಿಯಲ್ಲಿ ನಡೆದಿದೆ. ಪ್ರೀತಿಗೆ ಒಪ್ಪಿರುವುದಾಗಿ ನಂಬಿಸಿ ಹೊಸವರ್ಷದ ಆಚರಣೆಗೆ ಆಹ್ವಾನಿಸಿ ಕೃತ್ಯವೆಸಗಲಾಗಿದೆ.
ಭೀಕರ ಕೃತ್ಯ ಕೇಂದ್ರ ಟರ್ಕಿಯ ಕಿರ್ಸೆಹಿರ್ ನಗರದ ಕಮಾನ್ ಜಿಲ್ಲೆಯ ಬಯರಾಮೊಜ್ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ವಿಲ್ಡಾನ ಇನ್ಸ್ (24) ಎಂಬಾಕೆಯನ್ನು ಸೋದರಸಂಬಂಧಿಯೊಂದಿಗೆ ಬಲವಂತವಾಗಿ ಮದುವೆ ಮಾಡಲು ಇಡೀ ಕುಟುಂಬ ತುಂಬ ಒತ್ತಡ ಹೇರಿ ಭಾರೀ ತಯಾರಿ ನಡೆಸಿದ್ದರು.
ಆದರೆ, ವಿಲ್ಡಾನ ಮನೆಯಿಂದ ಲವ್ವರ್ ಜತೆ ಓಡಿ ಹೋಗಿದ್ದಳು. ಕುಟುಂಬ ತೀವ್ರವಾಗಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಹೀಗಿರುವಾಗ ಹೊಸ ವರ್ಷದ ದಿನದಂದ ಗ್ರಾಮದಲ್ಲಿ ಪಾರ್ಟಿ ಆಯೋಜಿಸುವಾಗ ವಿಲ್ಡಾನ ಮತ್ತು ಆಕೆಯ ಪ್ರಿಯಕರ ಕಮಾನ್ನಲ್ಲಿರುವ ಇರುವುದು ತಿಳಿಯುತ್ತದೆ. ಬಳಿಕ ಇಬ್ಬರ ಪ್ರೀತಿಗೆ ನಮ್ಮ ಒಪ್ಪಿಗೆ ಇದೆ. ಯಾವ ದ್ವೇಷವೂ ಇಲ್ಲ. ಶಾಂತಿಯೇ ನಮಗೆ ಮುಖ್ಯವೆಂದು ನಂಬಿಸಿ ಪಾರ್ಟಿಗೆ ಆಹ್ವಾನಿಸುತ್ತಾರೆ.
ಆಹ್ವಾನವನ್ನು ನಂಬಿ ಮನೆಗೆ ಬಂದ ಮಗಳು ಮತ್ತು ಆಕೆಯ ಪ್ರಿಯಕರನ ಹತ್ಯೆಗೆ ಮೊದಲೇ ಸಂಚು ನಡೆದಿರುತ್ತದೆ. ಅದರಂತೆ ಕುಟುಂಬ ವಿಲ್ಡಾನಳನ್ನು ಸ್ನಾನದ ಕೋಣೆಗೆ ಕರೆದೊಯ್ದು ಪ್ರಾಣಿಯನ್ನು ಕೊಲ್ಲುವಂತೆ ಚಾಕುವಿನಿಂದ ಕತ್ತರಿಸುತ್ತಾರೆ. ಬಳಿಕ ವಿಲ್ಡಾನಳ ಪ್ರಿಯಕರನನ್ನು ಬರ್ಬರವಾಗಿ ಹತ್ಯೆ ಮಾಡುವ ಮುನ್ನ ಆತನ ಬಟ್ಟೆಗಳನ್ನು ಬಿಚ್ಚೆಸೆದು ರೇಪ್ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇಬ್ಬರನ್ನು ಬಾತ್ರೂಮ್ನಲ್ಲೇ ಕೊಲೆ ಮಾಡಿದ್ದರಿಂದ ನೀರಿನೊಂದಿಗೆ ರಕ್ತವೂ ಸಹ ಹರಿದುಹೋಗಿ, ಇಡೀ ಬಾತ್ರೂಮ್ನಲ್ಲಿ ಯಾವುದೇ ರಕ್ತದ ಕಲೆ ಇರದಂತಾಗಿದೆ. ಕೊಲೆ ಮಾಡಿದ ಬಳಿಕ ಇಬ್ಬರ ಮೃತದೇಹವನ್ನು ಗ್ರಾಮದ ಹೊರಗಡೆ ಗುಂಡಿ ತೆಗೆದು ಮಣ್ಣು ಹಾಕಿ ಮುಚ್ಚಿಬಂದಿದ್ದಾರೆ.
ಯಾವಾಗ ವಿಲ್ಡಾನ ಪ್ರಿಯಕರ ಸಿಲಿಕ್ ಕುಟುಂಬಕ್ಕೆ ತಮ್ಮ ಮಗನ ಸುಳಿವು ಸಿಗದೇ ಇದ್ದಾಗ ಅನುಮಾನಗೊಂಡು ಪೊಲೀಸರಿಗೆ ನಾಪತ್ತೆ ಪ್ರಕರಣವನ್ನು ದಾಖಲಿಸುತ್ತಾರೆ. ಅಲ್ಲದೆ, ವಿಲ್ಡಾನ ಕುಟುಂಬದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸುತ್ತಾರೆ. ಹೀಗಾಗಿ ವಿಲ್ಡಾನ ಕುಟುಂಬವನ್ನು ವಶಕ್ಕೆ ಪಡೆಯುವ ಪೊಲೀಸರು ವಿಚಾರಣೆ ನಡೆಸುತ್ತಾರೆ. ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಕೊನೆಗು ತಪ್ಪೊಪ್ಪಿಕೊಳ್ಳುವ ಕುಟುಂಬ ಮೃತದೇಹಗಳನ್ನು ಹೂತಿಟ್ಟಿದ್ದ ಸ್ಥಳವನ್ನು ತೋರಿಸುತ್ತಾರೆ.
ಮೃತದೇಹಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಲ್ಡಾನ ಕುಟುಂಬವನ್ನು ಬಂಧಿಸುತ್ತಾರೆ. ವಿಲ್ಡಾನಳ ತಂದೆ, ಸಹೋದರ ಮತ್ತು ಸೋದರಸಂಬಂಧಿ ಸೇರಿದಂತೆ ಇನ್ನಿಬ್ಬರು ಸಂಬಂಧಿಕರನ್ನು ಬಂಧಿಸುತ್ತಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ. (ಏಜೆನ್ಸೀಸ್)