

ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಹೊಸ ಎಚ್ಒನ್ಬಿ (H1B ) ವೀಸಾಗಳ ಮೇಲೆ ಯಾರು ಊಹಿಸಲಾರದಷ್ಟು ಅಂದರೆ ಒಂದು ಲಕ್ಷ ಡಾಲರ್, ಅಂದರೆ ಸುಮಾರು 85 ಲಕ್ಷ ರೂ. ಫೀಸ್ ಘೋಷಿಸಿದ್ದಾರೆ. ಇದು ಪ್ರತಿ ಕಂಪನಿಯ ಮೇಲಲ್ಲ. ಇದು ಪ್ರತಿ ಅಭ್ಯರ್ಥಿಯ ಮೇಲಾಗಿದೆ. ಹೀಗಾಗಿ ಈ ಘೋಷಣೆ ಎಲ್ಲೆಡೆಯೂ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.
ಪ್ರತಿವರ್ಷ ಅಮೆರಿಕವು 65,000 ಹೊಸ H1B ವೀಸಾಗಳನ್ನು ಕೊಡುತ್ತದೆ. ಇದರಲ್ಲಿ ಬಹಳಷ್ಟು ಅಂದ್ರೆ ಶೇ.70ಕ್ಕೂ ಹೆಚ್ಚು ಪಾಲು ಭಾರತ ದೇಶಕ್ಕೆ ಹೋಗುತ್ತದೆ. ಈ ಹೊಸ ನಿಯಮದಿಂದ ಭಾರತೀಯರ "ಅಮೆರಿಕನ್ ಡ್ರೀಮ್" ನುಚ್ಚು ನೂರಾಗಲಿದೆ. ಬಹಳಷ್ಟು ಭಾರತೀಯರು ಅಮೆರಿಕಕ್ಕೆ H1B ವೀಸಾ ಮೂಲಕ ಬಂದು ನಂತರ ಗ್ರೀನ್ ಕಾರ್ಡ ಅಪ್ಲೈ ಮಾಡಿ, ಕೊನೆಗೆ ಯುಎಸ್ಎ ಪೌರತ್ವ ( ಅಂದರೆ ಸಿಟಿಜನ್ ಶಿಪ್) ಪಡೆಯುತ್ತಾರೆ.
ಟ್ರಂಪ್ ಅವರು ಮೋದಿಯವರ 75ನೇ ಹುಟ್ಟುಹಬ್ಬಕ್ಕೆ ವಿಶ್ ಮಾಡಿ, "ಮೋದಿ ನನ್ನ ಉತ್ತಮ ಗೆಳೆಯ" ಎಂದು ಹೇಳಿ, ನಂತರ ಎರಡೇ ದಿನಗಳಲ್ಲಿ ಬೆನ್ನಿಗೆ ಚೂರಿ ಇರಿದಿದ್ದಾರೆ. ಟ್ರಂಪ್ರನ್ನು ಅರ್ಥ ಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. H1B ವೀಸಾದ ಮುಖ್ಯ ಉದ್ದೇಶ ಅಮೆರಿಕದಲ್ಲಿಲ್ಲದ ಅತ್ಯಂತ ಹೆಚ್ಚಿನ ಕೌಶಲ್ಯದ ( highly skilled labor) ಪ್ರತಿಭಾವಂತರನ್ನು ಹೊರದೇಶಗಳಿಂದ ತರುವುದು. ಆದರೆ, ಬಹಳಷ್ಟು ಕಂಪನಿಗಳು ಉದಾಹರಣೆಗೆ ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ಮುಂತಾದ ಕಂಪನಿಗಳು ಇದನ್ನು ವಿದೇಶಗಳಿಂದ, ಕಳಪೆ ಗುಣಮಟ್ಟದ ಸಾಮಾನ್ಯ ಪ್ರತಿಭೆಯ ( avarage skilled) ವ್ಯಕ್ತಿಗಳನ್ನು ತಂದು, ಅವರಿಗೆ ತುಂಬಾ ಕಡಿಮೆ ಸಂಬಳ ಕೊಟ್ಟು ಅಮೆರಿಕದ ಜನಗಳಿಗೆ ಕೆಲಸ ಸಿಗದಂತೆ ದುರ್ಬಳಕೆ ಮಾಡುತ್ತಿದ್ದಾರೆ.
ಈ ದುರ್ಬಳಕೆಯನ್ನು ತಪ್ಪಿಸಲು ಟ್ರಂಪ್ H1B ವೀಸಾ ಫೀಸ್ ನೂರಾರು ಪಟ್ಟು ಹೆಚ್ಚಿಸಿದ್ದಾರೆ. ಮುಂದಿನ ವರ್ಷಗಳಲ್ಲಿ ಈ ನಿರ್ಧಾರ ಭಾರತೀಯರ ಮೇಲೆ, ಭಾರತೀಯ ಸಾಫ್ಟ್ವೇರ್ ಕಂಪನಿಗಳ ಮೇಲೆ ತುಂಬಾ ಪರಿಣಾಮ ಬೀರಲಿದೆ. ಜೊತೆಗೆ ಅಮೇರಿಕಾದ ಎಕಾನಮಿ ಮೇಲೆ ಸಹಿತ ಇದು ದುಷ್ಪರಿಣಾಮ ಬೀಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಾವು ತುಂಬಾ ಅನಿಶ್ಚಿತೆಯನ್ನು ಎದುರಿಸಬೇಕಿದೆ.