

Mohanlal: ಭಾರತೀಯ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆಗಾಗಿ ಕೇಂದ್ರ ಸರ್ಕಾರ ನೀಡಲಿರುವ 2023ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಹೆಸರನ್ನು ಶನಿವಾರ (ಸೆ. 20) ಘೋಷಣೆ ಮಾಡಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಪ್ರಸಾರ ಮತ್ತು ಮಾಹಿತಿ ಸಚಿವಾಲಯ, ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ಭಾರತ ಸರ್ಕಾರವು ನಟ ಶ್ರೀ ಮೋಹನ್ ಲಾಲ್ ಅವರಿಗೆ 2023ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಘೋಷಿಸಲು ಸಂತೋಷವಾಗುತ್ತಿದೆ.
ಮೋಹನ್ ಲಾಲ್ ಅವರ ಅದ್ಭುತ ಸಿನಿಮಾ ಪ್ರಯಾಣವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಭಾರತೀಯ ಚಿತ್ರರಂಗಕ್ಕೆ ಅವರ ಅಪ್ರತಿಮ ಕೊಡುಗೆಗಾಗಿ ದಂತಕಥೆಯ ನಟ, ನಿರ್ದೇಶಕ ಮತ್ತು ನಿರ್ಮಾಪಕರನ್ನು ಗೌರವಿಸಲಾಗುತ್ತಿದೆ. ಅವರ ಅಪ್ರತಿಮ ಪ್ರತಿಭೆ, ಬಹುಮುಖತೆ ಮತ್ತು ನಿರಂತರ ಕಠಿಣ ಪರಿಶ್ರಮವು ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಸುವರ್ಣ ಮಾನದಂಡವನ್ನು ಸ್ಥಾಪಿಸಿದೆ.
2025 ಸೆಪ್ಟೆಂಬರ್ 23ರಂದು ನಡೆಯುವ 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೋಹನ್ ಲಾಲ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಹೇಳಿದೆ.
ಎಕ್ಸ್ನಲ್ಲಿ ನಟ ಮೋಹನ್ ಲಾಲ್ಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ಮೋದಿ, ಮೋಹನ್‌ಲಾಲ್ ಶ್ರೇಷ್ಠತೆ ಮತ್ತು ಬಹುಮುಖತೆಯನ್ನು ಪ್ರತಿನಿಧಿಸುತ್ತಾರೆ. ದಶಕಗಳ ಕಾಲದ ಶ್ರೀಮಂತ ಕಾರ್ಯಗಳೊಂದಿಗೆ, ಅವರು ಮಲಯಾಳಂ ಸಿನಿಮಾ, ರಂಗಭೂಮಿಯ ಪ್ರಮುಖ ಜ್ಯೋತಿಯಾಗಿ ನಿಂತಿದ್ದಾರೆ. ಕೇರಳದ ಸಂಸ್ಕೃತಿಯ ಬಗ್ಗೆ ತೀವ್ರ ಒಲವು ಹೊಂದಿದ್ದಾರೆ. ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಮಾಧ್ಯಮಗಳಲ್ಲಿ ಅವರ ಸಿನಿಮೀಯ ಮತ್ತು ರಂಗಭೂಮಿ ಪ್ರತಿಭೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ ಎಂದಿದ್ದಾರೆ.
ಸೂಪರ್ ಸ್ಟಾರ್ ಮೋಹನ್ ಲಾಲ್
ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಿನಿಮಾ ರಂಗದಲ್ಲಿರುವ ಮೋಹನ್ ಲಾಲ್, ಮಲಯಾಳಂ, ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಭಾಷೆಗಳು ಸೇರಿ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತನ್ಮಾತ್ರ, ದೃಶ್ಯಂ, ವಾನಪ್ರಸ್ಥಂ, ಮುಂತಿರಿವಲ್ಲಿಕಲ್ ತಳಿರ್ಕ್ಕುಂಬೋಲ್ ಮತ್ತು ಪುಲಿಮುರುಗನ್ ಅವರ ಜನಪ್ರಿಯ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳು.
ಅತ್ಯುತ್ತಮ ನಟನೆಗಾಗಿ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಒಂಬತ್ತು ಕೇರಳ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಜೊತೆಗೆ ಮೋಹನ್ ಲಾಲ್ ಅವರಿಗೆ 2001 ರಲ್ಲಿ ಪದ್ಮಶ್ರೀ ಮತ್ತು 2019 ರಲ್ಲಿ ಕಲೆಗೆ ನೀಡಿದ ಕೊಡುಗೆಗಾಗಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. (ಏಜೆನ್ಸೀಸ್)