

ವಾಷಿಂಗ್ಟನ್: ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಜನರು ಅಮೆರಿಕಕ್ಕೆ ಪ್ರವೇಶಿಸದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಷೇಧ ಹೇರುವ ಸಾಧ್ಯತೆ ಇದೆ. ರಾಷ್ಟ್ರೀಯ ಭದ್ರತೆಯ ಕುರಿತು ಸರ್ಕಾರದ ಪರಿಶೀಲನೆ ಬಳಿಕ ಟ್ರಂಪ್ ಈ ಬಗ್ಗೆ ಚಿಂತನೆ ನಡೆಸಿದ್ದು, ಮುಂದಿನ ವಾರದಲ್ಲಿ ಇಂಥದ್ದೊಂದು ನಿಷೇಧ ಜಾರಿ ಆಗಲಿದೆ ಎನ್ನಲಾಗಿದೆ.
ಪಾಕಿಸ್ತಾನ ಭಯೋತ್ಪಾದಕ ದಾಳಿಯಲ್ಲಿ ತೊಡಗಿರು ವುದರಿಂದ ಅಮೆರಿಕ ಈ ಕ್ರಮಕ್ಕೆ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನೂ ಕೆಲವು ರಾಷ್ಟ್ರಗಳು ಕೂಡ ಈ ನಿಷೇಧಕ್ಕೆ ಒಳಪಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇರಾನ್, ಲಿಬಿಯಾ, ಸೊಮಾಲಿಯಾ, ಸಿರಿಯಾ, ಯೆಮೆನ್ ಸೇರಿ ಏಳು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿಗೆ ಅಮೆರಿಕ ಪ್ರವೇಶವನ್ನು ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ನಿಷೇಧಿಸಿದ್ದರು. ಇದನ್ನು 2018ರಲ್ಲಿ ಜೋ ಬೈಡೆನ್ ರದ್ದುಗೊಳಿಸಿದ್ದು, ಸುಪ್ರೀಂಕೋರ್ಟ್ ಕೂಡ ಈ ನಿರ್ಧಾರವನ್ನು ಎತ್ತಿ ಹಿಡಿದಿತ್ತು.
ಅಬ್ಬೇ ಗೇಟ್ ಬಾಂಬ್ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರ ಮೊಹಮ್ಮದ್ ಷರೀಫುಲ್ಲಾನ ಹಸ್ತಾಂತರಕ್ಕೆ ನೆರವಾಗಿದ್ದಕ್ಕೆ ಕ್ಯಾಪಿಟಲ್ ಹಿಲ್ನ ಜಂಟಿ ಅಧಿವೇಶನದಲ್ಲಿ ಪಾಕಿಸ್ತಾನವನ್ನು ಉದ್ದೇಶಿಸಿ ಮಾತ ನಾಡಿದ ಟ್ರಂಪ್, ಪಾಕ್ಗೆ ಧನ್ಯವಾದ ತಿಳಿಸಿದ್ದಾಗ್ಯೂ ನಿಷೇಧ ಕುರಿತು ಇಂಥದ್ದೊಂದು ಸುದ್ದಿ ಹೊರಬಿದ್ದಿದೆ.
ಗಡಿಪಾರಿಗೆ ಮಿಲಿಟರಿ ವಿಮಾನ ಬಳಕೆ ಸ್ಥಗಿತ: ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಟ್ರಂಪ್ ಸರ್ಕಾರ, ಅಕ್ರಮ ವಲಸಿಗರ ಗಡಿಪಾರಿಗೆ ಮಿಲಿಟರಿ ವಿಮಾನಗಳನ್ನು ಬಳಸುವುದನ್ನು ಸ್ಥಗಿತಗೊಳಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅಧಿಕ ವೆಚ್ಚವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ಸೇನೆಯ ಸಿ-17 ಮತ್ತು ಸಿ-30 ಒಳಗೊಂಡ ಒಟ್ಟು ಸುಮಾರು 30 ಸೇನಾ ವಿಮಾನಗಳನ್ನು ಬಳಸಿಕೊಂಡು ಅಮೆರಿಕ ಸರ್ಕಾರ ಅಕ್ರಮ ವಲಸಿಗರನ್ನು ಗಡಿಪಾರುಗೊಳಿಸಿತ್ತು. ಭಾರತ, ಪೆರು, ಗೌಟೆಮಾಲಾ, ಹೊಂಡುರಾಸ್, ಪನಾಮಾ, ಈಕ್ವಡೊರ್ ಮತ್ತು ಗ್ವಾಂಟನಮೊ ಬೇ ಮುಂತಾದ ರಾಷ್ಟ್ರಗಳಿಗೆ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿತ್ತು. ಜನವರಿಯಿಂದ ಗಡಿಪಾರು ಮಾಡಲು ಆರಂಭಿಸಿದ್ದ ಅಮೆರಿಕ ಕೊನೆಯದಾಗಿ ಮಾ.1ರಂದು ಅಕ್ರಮ ವಲಸಿಗರನ್ನು ಮಿಲಿಟರಿ ವಿಮಾನದಲ್ಲಿ ಗಡಿಪಾರು ಮಾಡಿತ್ತು.
ಸ್ವಯಂ ಗಡಿಪಾರು ಆತಂಕ: ಅಮೆರಿಕದಲ್ಲಿನ ಪ್ರಸ್ತುತ ವಲಸೆ ಕಾನೂನು ಗಳಿಂದಾಗಿ ಸಾವಿರಾರು ಭಾರತೀಯರು ಸ್ವಯಂ ಗಡಿಪಾರು ಭೀತಿ ಎದುರಿಸುತ್ತಿದ್ದಾರೆ. ಪ್ರಸಕ್ತ ವಲಸೆ ಕಾನೂನಿನ ಪ್ರಕಾರ 21 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಭಾರತೀಯರು ಎಚ್1-ಬಿ ವೀಸಾ ಹೊಂದಿರುವ ಪಾಲಕರ ಅವಲಂಬಿತರಾಗಿ ವಾಸ ಮುಂದುವರಿಸಲು ಸಾಧ್ಯವಿಲ್ಲ. ಅಪ್ರಾಪ್ತ ವಯಸ್ಕರಾಗಿದ್ದಾಗ ಎಚ್-4 ವೀಸಾ ಮೂಲಕ ವಲಸೆ ಬಂದಿದ್ದ ಇವರು, ಇದೀಗ 21ನೇ ವಯಸ್ಸಿಗೆ ತಲುಪಲಿರುವಾಗ ಆತಂಕ ಎದುರಿಸುವಂತಾಗಿದೆ. ಹೊಂದಾಣಿಕೆಗೆ ಅನುಕೂಲ ನೀತಿಗಳನ್ನು ಹೊಂದಿರುವ ಕೆನಡಾ-ಯುಕೆ ಮುಂತಾದ ರಾಷ್ಟ್ರಗಳಿಗೆ ವಲಸೆ ತೆರಳಲು ಹಲವರು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಯುಎಸ್ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ವ್ಯವಸ್ಥೆ ಭಾರತೀಯ ವಲಸಿಗರ ಮೇಲೆ ಇದೀಗ ಗಂಭೀರ ಪರಿಣಾಮ ಬೀರುತ್ತಿದೆ. ಮಾಹಿತಿಯೊಂದರ ಪ್ರಕಾರ ಸುಮಾರು 1.34 ಲಕ್ಷ ಭಾರತೀಯ ಮಕ್ಕಳು ತಮ್ಮ ಕುಟುಂಬದವರು ಹಸಿರು ಕಾರ್ಡ್ ಪಡೆಯುವ ಮೊದಲು ಅವಲಂಬಿತ ವೀಸಾ ಸ್ಥಿತಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಕೆಲವರು ಶಾಶ್ವತ ವಾಸಕ್ಕಾಗಿ ಹಲವಾರು ವರ್ಷಗಳ ಕಾಲ ಕಾಯಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಹಮಾಸ್ಗೆ ಕೊನೇ ಎಚ್ಚರಿಕೆ: ಹಮಾಸ್ ಉಗ್ರರಿಗೆ ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಗಾಜಾಗೆ ಮತ್ತಷ್ಟು ಹಾನಿ ಮಾಡುವುದಾಗಿ ಎಚ್ಚರಿಕೆ ನೀಡಿರುವ ಟ್ರಂಪ್, ಹಮಾಸ್ ಮುಖಂಡರು ಪಲಾಯನ ಮಾಡುವಂತೆಯೂ ಹೇಳಿದ್ದಾರೆ. ಕದನವಿರಾಮ ಉಲ್ಲಂಘಿಸುತ್ತಿರುವ ಇಸ್ರೇಲ್ಗೆ ಈ ಮೂಲಕ ಬಲವಾದ ಬೆಂಬಲ ತೋರಿರುವ ಅವರು, ಕೆಲಸ ಮುಗಿಸಲು ಇಸ್ರೇಲ್ಗೆ ಅಗತ್ಯವಿರುವ ಎಲ್ಲವನ್ನೂ ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಬಿಡುಗಡೆಯಾದ ಒತ್ತೆಯಾಳುಗಳ ಜತೆ ಮಾತುಕತೆ ನಡೆಸಿದ ಬಳಿಕ, ‘ಎಲ್ಲ ಒತ್ತೆಯಾಳುಗಳನ್ನು ಆಮೇಲೆ ಅಲ್ಲ, ಈಗಲೇ ಬಿಡುಗಡೆ ಮಾಡಿ. ಹತ್ಯೆಗೀಡಾದ ಎಲ್ಲರ ಶವಗಳನ್ನು ತಕ್ಷಣ ಹಿಂದಿರುಗಿಸಿ, ಇಲ್ಲದಿದ್ದರೆ ನಿಮ್ಮ ಕಥೆ ಮುಗೀತು’ ಎಂದು ತಮ್ಮ ‘ಟ್ರುಥ್ ಸೋಷಿಯಲ್’ ಪ್ಲಾ್ಯಟ್ಫಾಮ್ರ್ ಮೂಲಕ ಟ್ರಂಪ್ ಹೇಳಿದ್ದಾರೆ. ‘ಇದು ಅಂತಿಮ ಎಚ್ಚರಿಕೆ, ಗಾಜಾವನ್ನು ತೊರೆಯಲು ನಿಮಗೀಗ ಸಮಯವಿದೆ. ನೀವು ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿರದಿದ್ದರೆ ಗಾಜಾದ ಜನರಿಗೆ ಸುಂದರವಾದ ಭವಿಷ್ಯ ಕಾದಿದೆ, ಇಲ್ಲದಿದ್ದರೆ ನಿಮಗೆ ಸಾವು ಖಚಿತ’ ಎಂದು ಟ್ರಂಪ್ ಹೇಳಿದ್ದಾರೆ. ‘ಅ.7ರ ದಾಳಿ ಬಳಿಕ ಹಿಡಿದಿಟ್ಟುಕೊಂಡಿರುವ ಒತ್ತೆಯಾಳುಗಳನ್ನು ಹಿಂದಿರುಗಿಸದಿದ್ದರೆ ಆಗುವ ಪರಿಣಾಮಗಳನ್ನು ನೀವು ಊಹಿಸಿಕೊಳ್ಳಲಿಕ್ಕೂ ಅಸಾಧ್ಯ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದ ಬೆನ್ನಿಗೇ ಟ್ರಂಪ್ ಎಚ್ಚರಿಕೆಯೂ ಹೊರಬಿದ್ದಿದೆ. ‘ಹಮಾಸ್ ನಿಜವಾಗಿಯೂ ಗಂಭೀರ ಹೊಡೆತದಿಂದ ಬಳಲಿದೆ, ಅದಾಗ್ಯೂ ಅದು ಇನ್ನೂ ಸೋತಿಲ್ಲ. ನಮ್ಮ ಕಾರ್ಯಾಚರಣೆ ಇನ್ನೂ ಪೂರ್ತಿಯಾಗಿಲ್ಲ’ ಎಂದು ಇಸ್ರೇಲ್ನ ಹೊಸ ಸೇನಾ ಮುಖ್ಯಸ್ಥ ಎಯಾಲ್ ಜಮೀರ್ ಕೂಡ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಯೂಕ್ರೇನಿಗರ ಕಾನೂನು ಮಾನ್ಯತೆ ರದ್ದು?: ಅಮೆರಿಕದಲ್ಲಿರುವ 2.4 ಲಕ್ಷ ಯೂಕ್ರೇನಿಗರ ತಾತ್ಕಾಲಿಕ ಕಾನೂನು ಸ್ಥಾನಮಾನವನ್ನು ರದ್ದುಪಡಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜನೆ ಹಾಕಿಕೊಂಡಿದ್ದಾರೆ. ಈ ಬೆಳವಣಿಗೆ ಏಪ್ರಿಲ್ನಲ್ಲೇ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ರಷ್ಯಾದೊಂದಿಗಿನ ಸಂಘರ್ಷ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಪಲಾಯನ ಮಾಡಿರುವ ಯೂಕ್ರೇನಿಗರಿಗೆ ಇದರಿಂದಾಗಿ ತ್ವರಿತ ಗಡಿಪಾರು ಸಾಧ್ಯತೆ ಇರುವುದರಿಂದ ಆತಂಕ ಉಂಟಾಗಿದೆ. ಅಲ್ಲದೆ, ಜೋ ಬೈಡೆನ್ ಆಡಳಿತಾವಧಿಯಲ್ಲಿ ಸ್ವಾಗತ ಪಡೆದಿದ್ದ ಯೂಕ್ರೇನಿಗರಿಗೆ ಈ ಮೂಲಕ ದೊಡ್ಡ ಹಿನ್ನಡೆ ಎದುರಾದಂತಾಗಿದೆ. ಈ ಕಾನೂನು ಸ್ಥಾನಮಾನ ರದ್ದುಪಡಿಸುವುದರ ಯೋಜನೆ ಕಳೆದ ವಾರ ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ನಡೆದಿದ್ದ ಸಾರ್ವಜನಿಕ ಸಂಘರ್ಷಕ್ಕೂ ಮೊದಲೇ ರೂಪುಗೊಂಡಿತ್ತು. ಬೈಡೆನ್ ಆಡಳಿತದಲ್ಲಿ ತಾತ್ಕಾಲಿಕ ಮಾನವೀಯ ಪರೋಲ್ ಕಾರ್ಯಕ್ರಮಗಳಡಿ ಅಮೆರಿಕಕ್ಕೆ ಪ್ರವೇಶಿಸಲು ಅನುಮತಿಸಲಾದ 18 ಲಕ್ಷಕ್ಕೂ ಅಧಿಕ ವಲಸಿಗರ ಕಾನೂನು ಸ್ಥಾನಮಾನ ತೆಗೆಯುವ ನಿಟ್ಟಿನಲ್ಲಿ ಇದು ಟ್ರಂಪ್ ಸರ್ಕಾರದ ಪ್ರಮುಖ ಭಾಗ ಎನ್ನಲಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ಹೋಮ್್ಯಾಂಡ್ ಸೆಕ್ಯುರಿಟಿ ಡಿಪಾರ್ಟ್ವೆುಂಟ್ ವಕ್ತಾರರಾದ ಟ್ರಿಸಿಯಾ ಮೆಕ್ಲಾಫ್ಲಿನ್, ಸದ್ಯ ಅಂಥ ಯಾವುದೇ ಘೋಷಣೆಗಳಿಲ್ಲ ಎಂದು ಹೇಳಿದ್ದಾರೆ. ಇನ್ನೊಂದೆಡೆ ಶ್ವೇತಭವನ ಮತ್ತು ಯೂಕ್ರೇನ್ನ ರಾಯಭಾರ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಕೂಡ ವರದಿಯಾಗಿದೆ.