ಈಜಿಪ್ಟ್​ನಿಂದ ರಫಾ ಗಡಿಯ ಮೂಲಕ ಯುದ್ಧಪೀಡಿತ ಗಾಜಾ ಕಡೆ ಹೊರಟ ನೆರವು ತುಂಬಿದ ಟ್ರಕ್​ಗಳು!

Trucks Carrying Aid Start Entering Gaza
Published on

ಕೈರೋ: ಯುದ್ಧ ಪೀಡಿತ ಹಾಗೂ ಇಸ್ರೇಲ್​ನಿಂದ ಆಕ್ರಮಣಕ್ಕೆ ಒಳಗಾಗಿರುವ ಗಾಜಾಗೆ ಮಾನವೀಯ ನೆರವು ಹೊತ್ತ ಟ್ರಕ್​ಗಳು ಶನಿವಾರ ಈಜಿಪ್ಟ್‌ನಿಂದ ರಫಾ ಗಡಿಯ ಮೂಲಕ ಗಾಜಾ ಕಡೆ ಹೊರಡಲು ಆರಂಭಿಸಿವೆ ಎಂದು ಭದ್ರತಾ ಮೂಲ ಮತ್ತು ಈಜಿಪ್ಟ್ ರೆಡ್ ಕ್ರೆಸೆಂಟ್ ಕಚೇರಿ ಮಾಹಿತಿ ನೀಡಿದೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ 15ನೇ ದಿನಕ್ಕೆ ಕಾಲಿಟ್ಟಿದ್ದು, ಇದರ ನಡುವೆ ಅನೇಕ ಟ್ರಕ್‌ಗಳು ನೆರವನ್ನು ಹೊತ್ತು ಗಾಜಾ ಗಡಿಯ ಗೇಟ್‌ ಪ್ರವೇಶಿಸುತ್ತಿರುವುದನ್ನು ಈಜಿಪ್ಟ್ ರಾಷ್ಟ್ರದ ಮಾಧ್ಯಮಗಳು ಬಿತ್ತರಿಸಿವೆ. ಅ.7ರಂದು ಪ್ಯಾಲೆಸ್ತೀನ್​ನ ಹಮಾಸ್ ಉಗ್ರ ಗುಂಪು ಇಸ್ರೇಲ್​ ಮೇಲೆ 5 ಸಾವಿರ ರಾಕೆಟ್​ಗಳಿಂದ ಸರ್ಪ್ರೈಸ್​ ದಾಳಿ​ ಮಾಡಿದ ಬಳಿಕ ಹಮಾಸ್​ ವಿರುದ್ಧ ಪ್ರತೀಕಾರದ ಸಂಕಲ್ಪ ಮಾಡಿರುವ ಇಸ್ರೇಲ್​ ಸೇನಾ ಪಡೆ ಗಾಜಾದಲ್ಲಿ ಬಾಂಬ್​ ದಾಳಿಯನ್ನು ತೀವ್ರಗೊಳಿಸಿವೆ.

ಗಾಜಾವನ್ನು ಸಂಪೂರ್ಣ ವಶಕ್ಕೆ ಪಡೆದಿರುವುದಾಗಿ ಇಸ್ರೇಲ್​ ಘೋಷಣೆ ಮಾಡಿದ್ದು, ನೀರು, ವಿದ್ಯುತ್​, ಇಂಧನ ಮತ್ತು ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದ್ದು, ದೀರ್ಘಕಾಲ ಕೊರತೆಯನ್ನು ಸೃಷ್ಟಿಸುತ್ತಿದೆ. ಇಸ್ರೇಲ್‌ ನಿಯಂತ್ರಣಕ್ಕೆ ಒಳಗಾಗದ ರಫಾ ಗಡಿ ಒಂದೇ ಗಾಜಾಗೆ ಇರುವ ಏಕೈಕ ಮಾರ್ಗವಾಗಿದೆ. ತಮ್ಮ ಮಿತ್ರ ದೇಶವಾಗಿರುವ ಯುನೈಟೆಡ್​ ಸ್ಟೇಟ್ಸ್​ ಮನವಿಯ ಮೇರೆಗೆ ಈಜಿಪ್ಟ್​ನಿಂದ ಗಾಜಾಗೆ ನೆರವು ಸಾಗಿಸಲು ಇಸ್ರೇಲ್​ ಅನುಮತಿಸಿದೆ.

ವಿಶ್ವಸಂಸ್ಥೆಯ ವಿವಿಧ ಏಜೆನ್ಸಿಗಳಿಂದ ಬಂದ ನೆರವನ್ನು ಗಾಜಾಗೆ ತಲುಪಿಸುವ ಜವಾಬ್ದಾರಿಯನ್ನು ಈಜಿಪ್ಟಿನ ರೆಡ್ ಕ್ರೆಸೆಂಟ್‌ ಕಚೇರಿಯು ಹೊತ್ತಿದ್ದು, ಇಪ್ಪತ್ತು ಟ್ರಕ್‌ಗಳು ಈಜಿಪ್ಟಿನ ಟರ್ಮಿನಲ್ ಅನ್ನು ಪ್ರವೇಶಿಸಿದ್ದವು. ಪ್ಯಾಲೆಸ್ತೀನ್​ ಕಡೆಯ 36 ಖಾಲಿ ಟ್ರೇಲರ್‌ಗಳು ಟರ್ಮಿನಲ್‌ಗೆ ಪ್ರವೇಶಿಸಿ ಈಜಿಪ್ಟಿನ ಕಡೆಗೆ ಹೋಗಿ, ನೆರವನ್ನು ಲೋಡ್ ಮಾಡಿಕೊಂಡು ರಫಾ ಗಡಿಯ ಮೂಲಕ ಗಾಜಾಗೆ ತೆರಳಲು ಆರಂಭಿಸಿವೆ.

ನಾಲ್ಕು ಆ್ಯಂಬುಲೆನ್ಸ್​, ವಿಶ್ವಸಂಸ್ಥೆಯ ಎರಡು ವಾಹನ ಮತ್ತು ಎರಡು ರೆಡ್​ಕ್ರಾಸ್​ ವಾಹನಗಳು ಕೂಡ ಗಾಜಾ ತಲುಪಲಿವೆ. ಕಾರ್ಗೋ ವಿಮಾನಗಳು ಮತ್ತು ಟ್ರಕ್‌ಗಳು ಈಜಿಪ್ಟ್‌ನ ರಫಾದ ಭಾಗಕ್ಕೆ ಮಾನವೀಯ ನೆರವನ್ನು ತರುತ್ತಿದ್ದು, ಈವರೆಗೂ ಯಾವುದನ್ನೂ ಸಹ ಗಾಜಾಕ್ಕೆ ತಲುಪಿಸಲಾಗಿಲ್ಲ. ಶೀಘ್ರದಲ್ಲೇ ಎಲ್ಲಾ ನೆರವು ಗಾಜಾವನ್ನು ತಲುಪಲಿದೆ.

ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಶುಕ್ರವಾರ ಈಜಿಪ್ಟ್ ಕ್ರಾಸಿಂಗ್ ಬದಿಗೆ ಭೇಟಿ ನೀಡಿ ನೆರವು ವಿತರಣೆಯ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಿದರು. ಇವು ಕೇವಲ ಟ್ರಕ್​ಗಳಲ್ಲ, ಜೀವರಕ್ಷಕಗಳು ಎಂದು ಮಾಧ್ಯಮಗಳಿಗೆ ಇದೇ ಸಂದರ್ಭದಲ್ಲಿ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net