'ನನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ'; ಪ್ರಯಾಣಿಕನ ಬೆದರಿಕೆಗೆ ಆಕಾಸ ಫ್ಲೈಟ್​​ ತುರ್ತು ಭೂಸ್ಪರ್ಶ!

Untitled design - 2023-10-21T134507.495
Published on

ಮುಂಬೈ: ನನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಪ್ರಯಾಣಿಕರೊಬ್ಬರು ಹೇಳಿದ ಬೆನ್ನಲ್ಲೇ ಪುಣೆಯಿಂದ ದೆಹಲಿಯತ್ತ ಸಾಗುತ್ತಿದ್ದ ಆಕಾಸ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶವಾದ ಘಟನೆ ಮುಂಬೈನಲ್ಲಿ ವರದಿಯಾಗಿದೆ.

ಪುಣೆಯಿಂದ ದೆಹಲಿಗೆ ತೆರಳುತ್ತಿದ್ದ ಆಕಾಸ ಫ್ಲೈಟ್​ನಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗ್​ನಲ್ಲಿ ಬಾಂಬ್​ ಇದೆ ಎಂದು ಹೇಳಿದ ಕೂಡಲೇ ಆತಂಕಗೊಂಡ ವಿಮಾನ ಸಿಬ್ಬಂದಿ ಇಂದು ಮಧ್ಯರಾತ್ರಿ 12.42ಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಡಿಂಗ್​ ಮಾಡಿದೆ.

ವಿಮಾನ ಕೆಳಗಿಳಿದ ತಕ್ಷಣ ಬಾಂಬ್ ಪತ್ತೆ ಮತ್ತು ಡಿಸ್ಪೋಸಲ್ ಸ್ಕ್ವಾಡ್ (BDDS) ತಂಡವನ್ನು ಕರೆಸಿ, ವ್ಯಕ್ತಿಯ ಬ್ಯಾಗ್ ಅನ್ನು ಪರಿಶೀಲನೆ ನಡೆಸಲಾಯಿತು. ಈ ವೇಳೆ ಬ್ಯಾಗ್​ನಲ್ಲಿ ಯಾವುದೇ ಬಾಂಬ್​ ಕಂಡುಬಂದಿಲ್ಲ. ತದನಂತರದಲ್ಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಪ್ರಯಾಣಿಕರನ್ನು ಬಂಧಿಸಿದ್ದಾರೆ.

ಆಕಾಸ ಏರ್​ಲೈನ್ಸ್​ ಅಧಿಕೃತ ಹೇಳಿಕೆಯ ಪ್ರಕಾರ, “ಅಕಾಸಾ ಏರ್ ಫ್ಲೈಟ್ ಕ್ಯೂಪಿ 1148, ಅಕ್ಟೋಬರ್ 21, 2023 ರಂದು 12.07ಕ್ಕೆ ಪುಣೆಯಿಂದ ದೆಹಲಿಗೆ ತೆರಳುತ್ತಿತ್ತು. 185 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಹೊತ್ತೊಯ್ದಿದ್ದ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಈ ಬೆದರಿಕೆ ಕರೆ ಸ್ವೀಕರಿಸಿದೆವು" ಎಂದು ತಿಳಿಸಿದೆ.

ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, “ಸಿಐಎಸ್ಎಫ್ ಅಧಿಕಾರಿ ಮುಂಬೈ ಪೊಲೀಸ್ ನಿಯಂತ್ರಣಕ್ಕೆ ಮುಂಜಾನೆ 2.30ರ ಸುಮಾರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದರು. ನಂತರ ಆ ವಿಮಾನದ ಪ್ರಯಾಣಿಕರ ವಸ್ತುಗಳನ್ನು ಪರಿಶೀಲಿಸಲಾಯಿತು. ಬಿಡಿಡಿಎಸ್ ತಂಡ ಹಾಗೂ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳದಲ್ಲಿ ಹಾಜರಿದ್ದರು. ಆದರೆ ತನಿಖೆಯ ವೇಳೆ ಪೊಲೀಸರಿಗೆ ಅಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ" ಎಂದು ಹೇಳಿದರು.

"ಆ ವಿಮಾನದಲ್ಲಿ ವ್ಯಕ್ತಿಯ ಜತೆಗೆ ಪ್ರಯಾಣಿಸುತ್ತಿದ್ದ ಅವರ ಸಂಬಂಧಿಯೊಬ್ಬರು ಅವರು ಎದೆನೋವಿಗೆ ಮದ್ದು ಸೇವಿಸಿ ಏನೇನೋ ಬೊಬ್ಬೆ ಹೊಡೆಯುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಕೂಲಂಕಷ ತನಿಖೆಯ ನಂತರ ಮುಂಬೈ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ವಿಮಾನ ದೆಹಲಿಯತ್ತ ಸಾಗಿತು. ಸದ್ಯ ಮುಂಬೈ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ" ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net