

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾದ ಮೊದಲ ದಿನದಿಂದಲೂ ಹಲವು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸದ್ಯ ಜಗಳ, ಮನಸ್ತಾಪಗಳಿಂದ ಕೊಂಚ ದೂರ ಉಳಿದಿರುವ ಸ್ಪರ್ಧಿಗಳು ಟಾಸ್ಕ್ ಸೇರಿದಂತೆ ಮನೆಯ ಸದಸ್ಯರೊಡನೆ ಮಾತು, ಹರಟೆಯಲ್ಲಿ ಭಾಗಿಯಾಗಿದ್ದಾರೆ. ಇದರ ಬೆನ್ನಲ್ಲೇ ಬೃಂದಾವನ ತಂಡದೊಂದಿಗೆ ಮೋಜು-ಮಸ್ತಿ ಮಾಡಿದ ಸ್ಪರ್ಧಿಗಳು ಹಾಡು, ಡ್ಯಾನ್ಸ್, ಕಾಮಿಡಿ, ಮಿಮಿಕ್ರಿ ಮಾಡಿ ಭರಪೂರ ಮನರಂಜನೆಗೆ ಕಾರಣರಾದರು.
ಶುಕ್ರವಾರ ಬಿಗ್ ಬಾಸ್ ಮನೆಗೆ 36 ಕಲಾವಿದರುನ್ನು ಒಳಗೊಂಡ ಬೃಂದಾವನ ತಂಡ ಎಂಟ್ರಿ ಕೊಟ್ಟಿತು. ಅತಿಥಿಯಾಗಿ ಬಂದ ಕಲಾವಿದರ ದಂಡನ್ನು ಸ್ವಾಗತಿಸಿದ ಸದಸ್ಯರು, ಅವರ ಮನರಂಜನೆಗಾಗಿ ಕಾರ್ತಿಕ್ ಮೆಲೋಡಿ ಹಾಡನ್ನು ಹಾಡಿದರು. ಹುಡುಗರ ತಂಡದಿಂದ ಒಂದು ನೃತ್ಯ ಜತೆಗೆ ಹುಡುಗಿಯರ ತಂಡದಿಂದ ಒಂದು ನೃತ್ಯ ಏರ್ಪಡಿಸಲಾಗಿತ್ತು. ಸಾಂಗ್-ಡ್ಯಾನ್ಸ್ ಮಧ್ಯೆ ತುಕಾಲಿ ಸಂತೋಷ್ ಮಾಡಿದ ಮಿಮಿಕ್ರಿಗೆ ಬೃಂದಾವನ ಟೀಂ ಹೊಟ್ಟೆ ಹುಣ್ಣಾಗುವಂತೆ ನಕ್ಕರು.
ಗೌರೀಶ್ ಅಕ್ಕಿ ಅವರ ನ್ಯೂಸ್ ವರದಿ ನಂತರ ಬಂದದ್ದೇ ಮಾಡಿದ್ದು ಅಸಲಿ ಜಾದು. ಮನೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಡ್ರೋನ್ ಪ್ರತಾಪ್ ಮೊದಲ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಅವರ ಎದುರು 'ಎದೆಯಲ್ಲಿ ಗಿಟ್ಟಾರು'... ಹಾಡಿಗೆ ಕುಣಿದು ಕುಪ್ಪಳಿಸಿದ್ದರು. ಅದೇ ಹಾಡಿಗೆ ಮನೆಗೆ ಬಂದ ಅತಿಥಿಗಳ ಕೋರಿಕೆ ಮೇರೆಗೆ ಮನಬಿಚ್ಚಿ ನೃತ್ಯ ಮಾಡಿದರು.
ಪ್ರತಾಪ್ ಅವರ ಡ್ಯಾನ್ಸ್ ಪ್ರತಾಪಕ್ಕೆ ಫಿದಾ ಆದ ಅತಿಥಿಗಳು ಮತ್ತು ಸ್ಪರ್ಧಿಗಳು ಶಿಳ್ಳೆ, ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಿದರು. ಈ ವೇಳೆ ಬಹಿರಂಗವಾಗಿ ಮಾತನಾಡಿದ ಪ್ರತಾಪ್, "ನಾನು ಬಿಗ್ ಬಾಸ್ಗೆ ಬರಬೇಕೋ ಬೇಡವೋ ಎಂಬ ಯೋಚನೆಯಲ್ಲೇ ಇದ್ದೆ. ತದನಂತರ ಮನೆಗೆ ಬಂದ ಮೊದಲ ವಾರ ಹೇಗಿರುತ್ತೆ, ಏನು ಕಥೆ ಎಂದು ಅಂದುಕೊಳ್ಳುತ್ತಿದ್ದೆ. ಆದ್ರೆ, ಮೊದಲ ವಾರ ಸುದೀಪ್ ಸರ್ ಬಂದು ಆ ಗೊಂದಲಗಳನ್ನು ನನ್ನಿಂದ ದೂರ ಮಾಡಿದರು. ಒಂದು ಗೇಮ್ ಚೇಂಜರ್ ಆಗಿ ನನ್ನ ಲೈಫ್ನಲ್ಲಿ ಕೆಲಸ ಮಾಡಿದ್ರು" ಎಂದು ಪ್ರತಾಪ್ ಹೇಳಿದರು.