ವೈರಲ್​ ವಿಡಿಯೋ; ಊಟ ನೀಡಲು ನಿರಾಕರಿಸಿದ ಹೋಟೆಲ್​​ಗೆ ಟ್ರಕ್​ ನುಗ್ಗಿಸಿದ ಚಾಲಕ

Untitled-design-79
Published on

ಪುಣೆ: ಊಟ ನೀಡಿಲು ನಿರಾಕರಿಸಿದ ಕಾರಣ ಸಿಟ್ಟಿಗೆದ್ದ ಚಾಲಕ ಟ್ರಕ್​ನಿಂದ ಹೋಟೆಲ್​​ಗೆ ಡಿಕ್ಕಿ ಹೊಡೆದಿರುವ ಘಟನೆ ಮಹಾರಾಷ್ಟ್ರದ ಇಂಡಾಪುರ ತಾಲೂಕಿನಲ್ಲಿ ನಡೆದಿದೆ. ಹೋಟೆಲ್​ ಹೊರಗಿದ್ದ ಕೆಲವು ಜನರ ಈ ದೃಶ್ಯವನ್ನು ರೆಕಾರ್ಡ್​ ಮಾಡಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿ ಆತ ಪದೇಪದೆ ತನ್ನ ಟ್ರಕ್​ನಿಂದ ಹೋಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆಯುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ಅದೇ ಸಿಟ್ಟಿನಲ್ಲಿ ಹೋಟೆಲ್​ ಹೊರಗೆ ನಿಲ್ಲಿಸಿದ್ದ ಕಾರಿಗೂ ಡಿಕ್ಕಿ ಹೊಡೆಯುತ್ತಿರುವುದನ್ನು ನೋಡಬಹುದಾಗಿದೆ. ಚಾಲಕ ಮದ್ಯ ಸೇವಿಸಿದ್ದ ಎಂದು ಹೇಳಲಾಗುತ್ತಿದೆ.

ಚಾಲಕ ಸೊಲ್ಲಾಪುರದಿಂದ ಪುಣೆಗೆ ಪ್ರಯಾಣಿಸುತ್ತಿದ್ದು ಜನನಿಬಿಡ ಪುಣೆ-ಸೋಲಾಪುರ ಹೆದ್ದಾರಿಯಲ್ಲಿರುವ ಹೋಟೆಲ್‌ನಲ್ಲಿ ನಿಲ್ಲಿಸಿದ್ದಾನೆ. ನಂತರ ಆತ ಹೋಟೆಲ್ ಒಳಗೆ ಹೋಗಿ ಆಹಾರ ಕೇಳಿದ್ದಾನೆ. ಆದರೆ ದಿನಪೂರ್ತಿ ಉಪಾಹಾರ ಗೃಹವನ್ನು ಮುಚ್ಚಿದ್ದರಿಂದ ಮಾಲೀಕರು ಊಟ ನೀಡಲು ನಿರಾಕರಿಸಿದ್ದಾರೆ. ಅಷ್ಟರಲ್ಲಾಗಲೇ ಮದ್ಯ ಸೇವಿಸಿದ್ದ ಚಾಲಕ ಕೋಪಗೊಂಡು ತನ್ನ ಲಾರಿಯಲ್ಲಿ ಕುಳಿತು ಹೋಟೆಲ್​​ ಕಟ್ಟಡಕ್ಕೆ ಹಾನಿ ಮಾಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಚಾಲಕನನ್ನು ತಡೆಯಲು ಸ್ಥಳೀಯರು ಯತ್ನಿಸಿದ್ದಾರೆ. ಅವರ ಮಾತನ್ನು ಕೇಳದಿದ್ದಾಗ ಅಲ್ಲಿದ್ದ ಕೆಲವರು ಟ್ರಕ್​ಗೆ ಕಲ್ಲನ್ನು ತೂರಿದ್ದಾರೆ. ಇಷ್ಟೆಲ್ಲಾ ಗಲಾಟೆ ನಡೆದ ಬಳಿಕ ಪಾನಮತ್ತ ಟ್ರಕ್ ಚಾಲಕ ಕಾರನ್ನು ನಿಲ್ಲಿಸಿ ಹೋಟೆಲ್ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿದ್ದಾನೆ. ಈ ಘಟನೆಯ ನಡುವೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net