ವಕ್ಪ್ ಇತ್ಯರ್ಥಕ್ಕೆ ತ್ರಿಸೂತ್ರ; ವಿಧಾನಸಭೆಯಲ್ಲಿ ಮೂರು ನಿರ್ಣಯ ಪ್ರಕಟಿಸಿದ ಸರ್ಕಾರ

Waqf
Published on

ಬೆಳಗಾವಿ: ರೋಧದ ನಡುವೆ ವಕ್ಪ್ ಗೊಂದಲ, ಗೋಜಲುಗಳಿಗೆ ತೆರೆ ಎಳೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಬುಧವಾರ ಮೂರು ಪ್ರಮುಖ ನಿರ್ಣಯಗಳನ್ನು ಪ್ರಕಟಿಸಿದೆ. ಅಲ್ಲದೆ ಈ ವಿಚಾರವಾಗಿ ಅನುಮಾನ ಉಳಿಯದಂತೆ ಮಾಡಲು ಅಗತ್ಯಬಿದ್ದರೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚಿಸುವುದಾಗಿಯೂ ಪ್ರಕಟಿಸಿದೆ. ಸಮಸ್ಯೆಯ ವಾಸ್ತವ ಅರಿಯುವುದಕ್ಕಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಲು ಸರ್ಕಾರ ಚಿಂತನೆ ನಡೆಸಿರುವ ಬಗ್ಗೆ ವಿಜಯವಾಣಿ ಡಿ.15ರಂದೇ ಮುಖಪುಟದಲ್ಲಿ ವರದಿ ಮಾಡಿತ್ತು.

ಪ್ರತಿಪಕ್ಷದ ಸಭಾತ್ಯಾಗದ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ವಕ್ಪ್ ವಿಚಾರ ಕುರಿತ ಚರ್ಚೆಗೆ ಸುದೀರ್ಘ ಉತ್ತರ ನೀಡಿದರು. ಅದಕ್ಕೂ ಮುನ್ನ ವಕ್ಪ್ ಸಚಿವ ಜಮೀರ್ ಅಹಮದ್ ಕೂಡ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.

ದೇವಸ್ಥಾನ, ಶಾಲೆ- ಕಾಲೇಜು, ಇನಾಂ ಹಾಗೂ ಉಳುವವನೇ ಭೂಮಿ ಒಡೆಯ ಕಾನೂನಿನಂತೆ ಭೂ ಮಂಜೂರಾತಿ ಮೂಲಕ ರೈತರಿಗೆ ಲಭ್ಯವಾದ ಕೃಷಿ ಭೂಮಿಯನ್ನು ವಾಪಸ್ ಪಡೆಯಲ್ಲ ಎಂಬುದು ಸರ್ಕಾರದ ಮೊದಲ ನಿರ್ಧಾರವಾದರೆ, ಮಸೀದಿ, ಖಬರಸ್ಥಾನ, ದರ್ಗಾ ಇರುವ ಕಡೆ ಆ ಜಾಗವನ್ನು ವಕ್ಪ್ ಹೆಸರಿಗೆ ನಮೂದಿಸುವುದಾಗಿ ಪ್ರಕಟಿಸಿದೆ. ಜತೆಗೆ 1974ರ ಪೂರ್ವದಲ್ಲಿ ಜಾಗವು ಯಾರ ಹೆಸರಲ್ಲಿತ್ತು ಎಂಬುದನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲು ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ವಕ್ಪ್ ಅಧಿಕಾರಿ ಗಳನ್ನೊಳಗೊಂಡ ಟಾಸ್ಕ್​ಫೋರ್ಸ್ ರಚಿಸಲಾಗುತ್ತದೆ.

ಬಹುಮುಖ್ಯವಾಗಿ, ವಕ್ಪ್ ಗೊಂದಲ ಪರಿಶೀಲನೆಗೆ ಅಗತ್ಯಬಿದ್ದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತದೆ ಎಂದು ಕಂದಾಯ ಸಚಿವರು ಪ್ರಕಟಿಸಿದರೆ, ಮುಖ್ಯಮಂತ್ರಿಯವರು ಪುನರುಚ್ಚರಿಸಿದರು.

ಗೆಜೆಟ್ ಜಟಾಪಟಿ: 1974ರ ಗೆಜೆಟ್ ಎಲ್ಲ ಸಮಸ್ಯೆಗೆ ಮೂಲ. ಮೊದಲು ಅದನ್ನು ಹಿಂಪಡೆಯುವ ಕೆಲಸ ಆಗಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ಆದರೆ ಇದು ಸಾಧ್ಯವಿಲ್ಲ ಎಂದು ಸರ್ಕಾರ ಪಟ್ಟುಹಿಡಿಯಿತು. ಬಿಜೆಪಿ ಶಾಸಕರಾದ ಅಶ್ವತ್ಥನಾರಾಯಣ, ಸುನಿಲ್ ಕುಮಾರ್, ಆರಗ ಜ್ಞಾನೇಂದ್ರ ಸೇರಿ ಹಲವರು ತೀವ್ರ ಪ್ರತಿರೋಧ ತೋರಿದ ಪರಿಣಾಮ ಮಾತಿನ ಚಕಮಕಿ ನಡೆಯಿತು. ಕೊನೆಯಲ್ಲಿ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು.

ಮೂರು ನಾಮ ತೋರಿದ ಸಿಎಂ: ರಾಜಕೀಯ ಉದ್ದೇಶಕ್ಕೆ ಬಿಜೆಪಿಯವರು ಜನರನ್ನು ಎತ್ತಿಕಟ್ಟುವ ಕೆಲಸ ಮಾಡಿದರು. ನಾನು ಮುಸ್ಲಿಂ ಇರಬಹುದು. ಆದರೆ ಹಿಂದುಸ್ತಾನದ ಕನ್ನಡಿಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್ ಗುಡುಗಿದರು. ಉಪ ಚುನಾವಣೆ ಕಾರಣಕ್ಕೆ ಬಿಜೆಪಿಯವರು ರಾಜಕೀಯ ಮಾಡಿದ್ದರು, ಕಾಂಗ್ರೆಸ್ 3ಕ್ಕೆ ಮೂರೂ ಸ್ಥಾನ ಗೆದ್ದಿತು ಎಂದು ಪ್ರತಿಪಕ್ಷದತ್ತ ಮೂರು ಬೆರಳು ತೋರಿ ಕೆಣಕಿದರು. ಸಿಎಂ ಕೂಡ ಅದೇ ಕ್ರಮ ಅನುಸರಿಸಿದರು. ನಿಮ್ಮನ್ನು ನಂಬಿದರೆ ಮೂರು ನಾಮವೇ ಗತಿ ಎಂದು ಪ್ರತಿಪಕ್ಷ ನಾಯಕರು ಸಿಎಂ, ಜಮೀರ್​ಗೆ ತಿರುಗೇಟು ನೀಡಿದರು.

ಅಂತರ ಕಾಯ್ದ ಜೆಡಿಎಸ್: ವಕ್ಪ್ ವಿಚಾರದಲ್ಲಿ ಬಿಜೆಪಿಯಿಂದ ಜೆಡಿಎಸ್ ಸದಸ್ಯರು ಅಂತರ ಕಾಯ್ದುಕೊಂಡರು. ಬಿಜೆಪಿ ಸಭಾತ್ಯಾಗ ಮಾಡಿದರೂ ಜೆಡಿಎಸ್ ಸಭಾನಾಯಕರು, ಉಪ ಸಭಾನಾಯಕರು ಹಾಗೂ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಸದನದಲ್ಲೇ ಉಳಿದರು. ಹಾಗೆಯೇ, ಬಿಜೆಪಿಯಿಂದ ಆರಿಸಿಬಂದ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಕೂಡ ಸಭಾತ್ಯಾಗ ಮಾಡಲಿಲ್ಲ. ಸಚಿವರ ಉತ್ತರದ ಬಳಿಕ ಕೃತಜ್ಞತೆ ಸಲ್ಲಿಸಿದರು. ಕಾಂಗ್ರೆಸ್ ಸರ್ಕಾರ ಬಂದರೆ ಮುಸ್ಲಿಮರ ಪರ ತೀರ್ಮಾನ ಮಾಡುತ್ತದೆ ಎಂಬ ಅಪಪ್ರಚಾರ ಮಾಡಲಾಗುತ್ತಿದೆ, ವಕ್ಪ್ ವಿಚಾರದಲ್ಲಿ ವಿಷಬೀಜ ಬಿತ್ತಿದ್ದು, ಸಚಿವರು ಸಮರ್ಪಕ ಉತ್ತರ ನೀಡಿದ್ದಾರೆ ಎಂದು ಸೋಮಶೇಖರ್ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಅಚ್ಚರಿ ಎಂದರೆ, ವಕ್ಪ್ ವಿವಾದದ ಗುಲ್ಲೆಬ್ಬಿಸಿದ ಬಸನಗೌಡ ಯತ್ನಾಳ್ ಭೋಜನ ವಿರಾಮದ ಬಳಿಕ ಕಲಾಪದಲ್ಲಿ ಹಾಜರಿರಲಿಲ್ಲ.

ಮಂದಿರ- ಮಸೀದಿ ಪ್ರಸ್ತಾಪ: ‘ನಾವು ನಿಮ್ಮಂತಲ್ಲ, ಹಳೆಯ ಮಸೀದಿಯಲ್ಲಿ ಲಿಂಗ ಹುಡುಕುವ ಕೆಲಸ ಮಾಡಲ್ಲ’ ಎಂದು ಜಮೀರ್ ಅಹ್ಮದ್ ಬಿಜೆಪಿ ಸದಸ್ಯರನ್ನು ಕೆರಳಿಸಿದರು.‘ ನಾವು ಒಂದೇ ಒಂದು ಮಸೀದಿ ಕೆಡವಿ ಮಂದಿರ ಮಾಡಿಲ್ಲ. ಮಂದಿರಗಳನ್ನು ಮಸೀದಿ ಮಾಡಲಾಗಿದೆ’ ಎಂದು ಆರಗ ಜ್ಞಾನೇಂದ್ರ ತಿರುಗೇಟು ನೀಡಿದರು.

ಉತ್ತರಕ್ಕಾಗಿ ಕಿತ್ತಾಟ: ಕಾವೇರಿದ ವಾತಾವರಣದ ಸಂದರ್ಭದಲ್ಲಿ ಸಚಿವ ಎಂ.ಬಿ.ಪಾಟೀಲ್ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ನಡುವೆ ಉತ್ತರ ನೀಡಲು ಪೈಪೋಟಿ ಏರ್ಪಟ್ಟಿತು. ಕೃಷ್ಣಬೈರೇಗೌಡ ಹಠ ಹಿಡಿದಾಗ ಎಂ.ಬಿ.ಪಾಟೀಲ್ ಅಸಮಾಧಾನ ಹೊರಹಾಕಿ, ನಾನು ಸಣ್ಣ ಉತ್ತರ ನೀಡಲು ಸಿಎಂ ಅನುಮತಿ ಪಡೆದಿದ್ದೇನೆಂದು ದೊಡ್ಡದಾಗಿ ಕಣ್ಣರಳಿಸಿನಿಂತರು. ಕೊನೆಗೆ ಕಂದಾಯ ಸಚಿವರು ಕೈ ಸನ್ನೆ ಮೂಲಕ ಅಸಹನೆ ವ್ಯಕ್ತಪಡಿಸಿ ಸುಮ್ಮನಾದರು. ಇನ್ನೊಂದು ಭಾಗವಾಗಿ, ವಕ್ಪ್ ಸಚಿವರೇ ಈ ಚರ್ಚೆಗೆ ಉತ್ತರ ಕೊಡಬೇಕು, ಇಲ್ಲವಾದರೆ ಸಿಎಂ ಉತ್ತರ ಕೊಡಲಿ. ಕಂದಾಯ ಸಚಿವರೇಕೆ ಉತ್ತರ ಕೊಡಬೇಕೆಂದು ಪ್ರತಿಪಕ್ಷ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು. ಅರ್ಧತಾಸು ಮಾತಿನ ಚಕಮಕಿ ನಡೆದು ಕೊನೆಗೆ ಕಂದಾಯ ಸಚಿವರು ಉತ್ತರ ನೀಡಲು ಅರ್ಹರು ಎಂದು ರೂಲಿಂಗ್ ನೀಡಿದರು.

3 ನಿರ್ಣಯ

  1. ದೇವಸ್ಥಾನ ವಕ್ಪ್​ಗಿಲ್ಲ, ರೈತರ ತಂಟೆಗೆ ಹೋಗಲ್ಲ
  2. ವಕ್ಪ್ ಹೆಸರಿಗೆ ಮಸೀದಿ, ಖಬರಸ್ಥಾನ, ದರ್ಗಾ ಆಸ್ತಿ
  3. ಆಸ್ತಿ ಪರಿಶೀಲನೆಗೆ ಟಾಸ್ಕ್​ಫೋರ್ಸ್ ರಚನೆ

ಸಚಿವ ಜಮೀರ್ ಸ್ಪಷ್ಟನೆ

  • ದಾನಿಗಳು ನೀಡಿದ ಜಾಗವನ್ನು ವಕ್ಪ್ ಎಂದು ಪರಿಗಣಿಸಲಾಗುತ್ತದೆ. ಸರ್ಕಾರದ ಒಂದಿಂಚೂ ಸಹ ವಕ್ಪ್ ಆಸ್ತಿಯಲ್ಲ - ನೋಟಿಸ್ ನೀಡುವ ಪದ್ಧತಿ 60-70 ವರ್ಷದಿಂದ ನಡೆದಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲೂ ಇತ್ತು
  • ವಕ್ಪ್ ಆಸ್ತಿ ಸಂರಕ್ಷಣೆಗೆ ಕೇಂದ್ರವೇ ಅನುದಾನ ನೀಡುತ್ತಿದೆ. ಬಿಜೆಪಿ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು
  • ಅಸಲಿ ರೈತರು ಯಾರೂ ಹೋರಾಟಕ್ಕೆ ಬಂದಿಲ್ಲ, ರೈತರಿಗೆ ಅನ್ಯಾಯ ಆಗಿದ್ದರೆ ನಾನೇ ಸ್ಥಳಕ್ಕೆ ಬರುತ್ತೇನೆ

ಸಿಎಂ ಸಮರ್ಥನೆ

  • ದೇವಸ್ಥಾನಗಳಿಗೆ ನೋಟಿಸ್ ನೀಡಿದ್ದರೆ ಹಿಂಪಡೆಯಲು ಸೂಚಿಸಲಾಗಿದೆ. ಇನ್ನೂ ಪಡೆಯದಿದ್ದರೆ ಆ ಬಗ್ಗೆ ಕ್ರಮಕೈಗೊಳ್ಳುತ್ತೇವೆ
  • 1974ರ ಕಾಯ್ದೆ ಪ್ರಕಾರ ಸಮಸ್ಯೆ ಆಗುತ್ತಿದ್ದರೆ ಅದನ್ನು ತೆಗೆದು ಹಾಕಲು ಈವರೆಗೆ ಬಿಜೆಪಿ ಏಕೆ ಕ್ರಮಕೈಗೊಳ್ಳಲಿಲ್ಲ
  • ಈಗ ಬಿಜೆಪಿಯವರಿಗೆ ಜ್ಞಾನೋದಯವಾಯಿತೇ? ಕೇಂದ್ರ ಸರ್ಕಾರಕ್ಕೆ ಕಾಯ್ದೆ ತಿದ್ದುಪಡಿಗೆ ಒತ್ತಾಯಿಸಲಿ
  • ಲಕ್ಷಕ್ಕೆ ಒಬ್ಬ ರೈತರಿಗೂ ಸಮಸ್ಯೆಯಾಗುವುದಿಲ್ಲ. ಆದರೂ ರೈತರಿಗೆ ಚಳಿ ಜ್ವರ ಬರುವಂತೆ, ನೆಮ್ಮದಿ ಕೆಡಿಸುವಂತೆ ಮಾಡಲಾಗಿದೆ

ರೈತರ ನೆಮ್ಮದಿ ಕೆಡುವಂತೆ ಅಪಪ್ರಚಾರ: ಕೃಷ್ಣಬೈರೇಗೌಡ ಕಂದಾಯ ಸಚಿವ

  • ರಾಜ್ಯದಲ್ಲಿ ವಕ್ಪ್ ಆಸ್ತಿ ವಿಚಾರಗಳಲ್ಲಿ ಸುಳ್ಳು ಕಥೆ ಸೖಷ್ಟಿಸಿ, ಸಾರ್ವಜನಿಕರು ಹಾಗೂ ರೈತರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆದಿದೆ.
  • ವಕ್ಪ್ ಆಸ್ತಿಗಳ ವಿಚಾರದಲ್ಲಿ ಜನರ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸಲಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿಯೇ ವಕ್ಪ್ ಕಾಯ್ದೆ ಮಾಡಲಾಗಿದೆ.
  • 2016ರಲ್ಲಿ ಕೇಂದ್ರ ಸರ್ಕಾರ ಮಾಡೆಲ್ ವಕ್ಪ್ ರೂಲ್ಸ್ ಮಾಡಿ, ಒತ್ತುವರಿ ತೆರವುಗೊಳಿಸಿ ಸಂರಕ್ಷಿಸಲು ನಿರ್ದೇಶನ ಕೊಟ್ಟಿದೆ

ಪ್ರಮುಖಾಂಶಗಳು

  • 2004ರಿಂದ ಈವರೆಗೆ 9800 ಆಸ್ತಿಯನ್ನು ವಕ್ಪ್ ಎಂದು ನಮೂದಿಸಲಾಗಿದೆ
  • ವಕ್ಪ್ ಎಂದು ನಮೂದಿಸಿದ್ದರಿಂದ 11204 ರೈತರು ಬಾಧೆಗೊಳಗಾಗಿದ್ದಾರೆ
  • ಇದರಲ್ಲಿ 9124 ಮುಸಲ್ಮಾನರು ಸೇರಿದ್ದರೆ, 2080 ಹಿಂದುಗಳಾಗಿದ್ದಾರೆ

ವಕ್ಪ್ ಭೂಕಬಳಿಕೆ ನೀತಿ ವಿರುದ್ಧ ಸದನದಲ್ಲಿ ಹೋರಾಟ ಮಾಡಿದ್ದೆವು. ಮುಂದೆ ಬೀದಿಯಲ್ಲಿ ಹೋರಾಟ ಮುಂದುವರಿಸುತ್ತೇವೆ. ವಕ್ಪ್ ನೋಟಿಸ್ ವಾಪಸ್ ಪಡೆಯುವುದು ಕಣ್ಣೊರೆಸುವ ತಂತ್ರವಷ್ಟೇ. ಸರ್ಕಾರ ಹಿಂದುಗಳನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನೋಡುವ ಕೆಲಸ ಮಾಡುತ್ತಿದೆ.

| ಆರ್.ಅಶೋಕ್ ವಿಧಾನಸಭೆ ವಿರೋಧ ಪಕ್ಷದ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net