ನನ್ನ ಅವಶ್ಯಕತೆ ಇಲ್ಲದಿದ್ದಾಗ... Ashwin ನಿವೃತ್ತಿ ಘೋಷಣೆ ಬೆನ್ನಲ್ಲೇ ಕ್ಯಾಪ್ಟನ್​ ಜತೆಗಿನ ಮಾತುಕತೆ ರಿವೀಲ್​

Rohit Ashwin
Published on

ಬ್ರಿಸ್​ಬೇನ್​: ಇಲ್ಲಿನ ದಿ ಗಾಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ ಬಾರ್ಡರ್​-ಗವಾಸ್ಕರ್​ ಟ್ರೋಫಿ (Border-Gavaskar Trophy) ಟೆಸ್ಟ್​ ಸರಣಿಯ ಮೂರನೇ ಪಂದ್ಯ ಮಳೆಯಿಂದಾಗಿ ಡ್ರಾಗೊಂಡಿದ್ದು, ವಿಶ್ವ ಟೆಸ್ಟ್​ ಭಾರತದ ಪಾಲಿಗೆ ಚಾಂಪಿಯನ್​​ಶಿಪ್​ (World Test Championship) ಫಿನಾಲೆ ಆಸೆ ಇನ್ನೂ ಜೀವಂತವಾಗಿದೆ. ಇನ್ನೂ ದಿನದ ಅಂತ್ಯದಲ್ಲಿ ನಡೆದ ಮಹತ್ತರ ಬೆಳವಣಿಗೆಯಲ್ಲಿ ಟೀಮ್​ ಇಂಡಿಯಾದ (Team India) ಸ್ಪಿನ್​ ಮಾಂತ್ರಿಕ ರವಿಚಂದ್ರನ್​ ಅಶ್ವಿನ್ (R Ashwin) ತಕ್ಷಣಕ್ಕೆ ಜಾರಿಗೆ ಬರುವಂತೆ​ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿಯನ್ನು (Retirement) ಘೋಷಿಸಿದ್ದಾರೆ.

ಟೆಸ್ಟ್​ ಸರಣಿಯ ಮೂರನೇ ಪಂದ್ಯ ಡ್ರಾಗೊಂಡ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅಶ್ವಿನ್ (R Ashwin)​ ಈ ನಿರ್ಧಾರವನ್ನು ಪ್ರಕಟಿಸಿದ್ದು, ನಾಯಕ ರೋಹಿತ್​ ಶರ್ಮ, ಆಯ್ಕೆ ಸಮಿತಿ, ಕೋಚ್​ ಹಾಗೂ ಆಟಗಾರರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇನ್ನೂ ಅಶ್ವಿನ್​ ನಿವೃತ್ತಿ ಬಗ್ಗೆ ಮಾತನಾಡಿದ ನಾಯಕ ರೋಹಿತ್ ಶರ್ಮ (Rohit Sharma) ಅವರೊಬ್ಬ ಮ್ಯಾಚ್​ ವಿನ್ನರ್​ ಎಂದು ಬಣ್ಣಿಸಿದ್ದಾರೆ.

ಅಶ್ವಿನ್​ (R Ashwin) ನಿವೃತ್ತಿ ಬಗ್ಗೆ ಮಾತನಾಡಿದ ರೋಹಿತ್ ಶರ್ಮ (Rohit Sharma), ಅಶ್ವಿನ್​ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಅವರಿಗೆ ಸ್ಪಷ್ಟನೆಯಿದ್ದು, ಈ ವಿಚಾರ ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್​ ವೇಳೆಯೇ ನನ್ನ ಗಮನಕ್ಕೆ ಬಂದಿತ್ತು. ಮೊದಲ ಟೆಸ್ಟ್ ನಲ್ಲಿ ನಾನು ಆಡದಿದ್ದರೂ, ನಿವೃತ್ತಿಯ ಚಿಂತನೆ ಅವರಲ್ಲಿತ್ತು.

ಅಶ್ವಿನ್ ಯಾವರೀತಿಯ ಮೈಂಡ್ ಸೆಟ್ ಹೊಂದಿದ್ದರು ಎಂದರೆ, ಯಾವ ರೀತಿ ಕಾಂಬಿನೇಶನ್ ಇರಬೇಕು ಎನ್ನುವುದನ್ನು ತಂಡ ಆಲೋಚಿಸುತ್ತಿದೆ ಎನ್ನುವ ಅರಿವು ಅವರಿಗಿದೆ. ಯಾವ ಸ್ಪಿನ್ನರ್ ಅನ್ನು ಆಡಿಸಬೇಕು ಎನ್ನುವುದನ್ನು ನಾವು ಪಂದ್ಯದ ದಿನವೇ ಅಂತಿಮಗೊಳಿಸುತ್ತೇವೆ. ಕಂಡೀಷನ್ ಮತ್ತು ಪಿಚ್ ಆಧರಿಸಿ, ನಾವು ಸ್ಪಿನ್ನರ್ ಆಯ್ಕೆಯನ್ನು ಮಾಡುತ್ತೇವೆ. ಈ ವಿಚಾರದ ಬಗ್ಗೆ ಪರ್ತ್​​ನಲ್ಲಿ ಅಶ್ವಿನ್ ನನ್ನ ಜೊತೆ ಮಾತುಕತೆ ನಡೆಸಿದ್ದರು. ತಂಡಕ್ಕೆ ನನ್ನ ಅವಶ್ಯಕತೆ ಇಲ್ಲದಿದ್ದಾಗ ನಾನು ಹೊರ ನಡೆಯುವುದು ಉತ್ತಮ ಎನ್ನುವ ಮಾತನ್ನು ಅವರು ಆಡಿದ್ದರು. ನಿವೃತ್ತಿಯ ವಿಚಾರವಾಗಿ ನಾನು ಅಶ್ವಿನ್​ ಅವರ ಮನವೊಲಿಸಲು ಪ್ರಯತ್ನಿಸಿದೆ. ಆದರೆ, ನಾನು ಅವರ ನಿರ್ಧಾರವನ್ನು ಗೌರವಿಸಬೇಕಿದೆ ಎಂದು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಅಶ್ವಿನ್​ (R Ashwin) ನಿವೃತ್ತಿಯ ಕುರಿತು ಹೇಳಿದ್ದಾರೆ.

ಅಂದಹಾಗೆ ಅಶ್ವಿನ್​ (R Ashwin) ಅವರು 106 ಟೆಸ್ಟ್‌ ಪಂದ್ಯಗಳಲ್ಲಿ 24ರ ಸರಾಸರಿಯಲ್ಲಿ 537 ವಿಕೆಟ್‌ಗಳನ್ನು ಪಡೆದು ಟೆಸ್ಟ್​ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. 132 ಟೆಸ್ಟ್‌ಗಳಲ್ಲಿ 619 ವಿಕೆಟ್‌ಗಳನ್ನು ಪಡೆದಿರುವ ಟೀಮ್​ ಇಂಡಿಯಾದ ದಿಗ್ಗಜ ಆಟಗಾರ ಅನಿಲ್ ಕುಂಬ್ಳೆ ಬಳಿಕ ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ವೃತ್ತಿ ಬದುಕನ್ನು ಅಶ್ವಿನ್​ ಕೊನೆಗೊಳಿಸಿದರು. ಬೌಲಿಂಗ್​ನಲ್ಲಿ ಮಾತ್ರವಲ್ಲದೆ, ಆರು ಶತಕಗಳು ಮತ್ತು 14 ಅರ್ಧಶತಕಗಳೊಂದಿಗೆ 3503 ಟೆಸ್ಟ್ ರನ್‌ಗಳನ್ನು ಗಳಿಸಿ, ಬ್ಯಾಟಿಂಗ್​ನಲ್ಲೂ ಮಿಂಚಿದ್ದಾರೆ. 3000ಕ್ಕೂ ಹೆಚ್ಚು ರನ್ ಮತ್ತು 300 ವಿಕೆಟ್‌ಗಳೊಂದಿಗೆ 11 ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net