

ರಾಯಚೂರು: 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿಗಳು (Panchamasali) ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸರ್ಕಾರ ಹಾಗೂ ಸಮುದಾಯದ ನಡುವೆ ಸಂಘರ್ಷ ಶುರುವಾಗಿದೆ. ಪ್ರತಿಭಟನೆ ವೇಳೆ ಪಂಚಮಸಾಲಿಗಳ ಮೇಲಿನ ಲಾಠಿ ಚಾರ್ಜ್ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದವರು ಒತ್ತಾಯ ಮಾಡುತ್ತಿರುವುದು ಸಂವಿಧಾನಕ್ಕೆ ಬಗೆಯುವಂತಹ ಅಪಚಾರವಾಗಿದೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದ್ದಾರೆ.
ರಾಯಚೂರಿನಲ್ಲಿ ಈ ಬಗ್ಗೆ ಮಾತನಾಡಿದ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ, ಪಂಚಮಸಾಲಿ (Panchamasali) ಸಮುದಾಯದಿಂದ ಮೀಸಲಾತಿ ಹೋರಾಟ ಮಾಡುತ್ತಿರುವುದು ಸಂವಿಧಾನಕ್ಕೆ ಬಗೆಯುವಂತಹ ಅಪಚಾರವಾಗಿದೆ. ಪಂಚಮಸಾಲಿ ಸಮುದಾಯ ಬಲಿಷ್ಠವಾದ ಸಮುದಾಯವಾಗಿದೆ. ಸಿಎಂ ಆದವರಿದ್ದಾರೆ, ಭೂ ಮಾಲಿಕರಿದ್ದಾರೆ ಜತೆಗೆ ಉನ್ನತ ಪದವಿಯಲ್ಲಿದ್ದಾರೆ. ಬಹಳ ಮುಂದುವರೆದಿರುವ ಸಮುದಾಯವಾಗಿದೆ.
ಪಂಚಮಸಾಲಿ (Panchamasali) ಸಮುದಾಯದ ಜಯಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮಶ್ರೀ, ಬಸವ ಎಂಬ ಪದಗಳನ್ನು ತಮ್ಮ ಹೆಸರಿನ ಮುಂದೆ ಉಪಯೋಗಿಸಬಾರದು. ಮೀಸಲಾತಿಗಾಗಿ ಹಿಂಸೆಯನ್ನು ಪ್ರಚೋಧಿಸಬಾರದು. ಬಡವರ ಪರವಾಗಿ, ಭೂಹೀನರ ಪರವಾಗಿ ಹೋರಾಟ ಮಾಡಲಿ. ಒಬ್ಬರ ಹಕ್ಕನ್ನು, ತುತ್ತನ್ನು ಕಸಿದುಕೊಳ್ಳುವುದು ಸರಿಯಲ್ಲ. ಮೃತ್ಯುಂಜಯ ಸ್ವಾಮೀಜಿ ಪೂರ್ಣಪ್ರಮಾಣದ ಸ್ವಾಮೀಜಿಯವರಲ್ಲ ಅವರಲ್ಲಿಯೂ ರಾಜಕಾರಣಿಯ ಮುಖವಿದೆ. ರಾಜಕಾರಣ ಮಾಡುತ್ತಿದ್ದಾರೆ. ಸಮಾಜದಲ್ಲಿ ಹೆಸರುವಾಸಿಯಾಗಲು, ಚುಕ್ಕಾಣಿ ಹಿಡಿಯಲು ಹೀಗೆ ಮಾಡುತ್ತಿದ್ದಾರೆ.
ಪಂಚಮಸಾಲಿ ಸಮುದಾಯ ನಿರುಪದ್ರವಿ ಸಮುದಾಯವಾಗಿದೆ. ಒಬ್ಬರ ಗೊಡವಿಗೆ ಹೋದ ಸಮುದಾಯವಲ್ಲ. ಸ್ವಾಮೀಜಿಯವರಿಗೆ ಬಸವಣ್ಣನವರ ಹೆಸರು ಹೇಳಲು ಹಕ್ಕಿಲ್ಲ. ಲಿಂಗಾಯತ ಸಮುದಾಯ ಜಾರಿಗೆ ಸೀಮಿತವಾಗದ ಸಮುದಾಯವಲ್ಲ. ಹಿಂದುಳಿದ ಸಮುದಾಯಗಳ ಒಕ್ಕೂಟವಾಗಿದೆ. ಸ್ವಾಮೀಜಿಗಳು, ರಾಜಕಾರಣಿಗಳು ಹಿಂದುಳಿದ ಸಮುದಾಯಗಳ ಸ್ವಾಹಿತತೆಯನ್ನು ಕಾಪಾಡುವಂತಹ ಕೆಲಸ ಮಾಡಬೇಕು ಎಂದು ಹಿರಿಯ ಸಾಹಿತಿ ಕುಂ ವೀರಭದ್ರಪ್ಪ ಹೇಳಿದ್ದಾರೆ.