ತ್ರಿಪಕ್ಷೀಯ ಸಭೆಯಲ್ಲಿ ಚೀನಾಕ್ಕೆ ಪರೋಕ್ಷ ಚಾಟಿ

china abhiyana
Published on

ಗಡಿ ಬಿಕ್ಕಟ್ಟು ಪರಿಹಾರಕ್ಕೆ ಭಾರತ ಮತ್ತು ಚೀನಾ ಮಧ್ಯೆ ಮಾತುಕತೆ ನಡೆದಿರುವ ಬೆನ್ನಿಗೆ ರಷ್ಯಾ, ಭಾರತ ಮತ್ತು ಚೀನಾ (ಆರ್​ಐಸಿ) ವಿದೇಶಾಂಗ ಸಚಿವರು ಮಂಗಳವಾರ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಚೀನಾಗೆ ಪರೋಕ್ಷವಾಗಿ ಚಾಟಿ ಬೀಸಿದರು. ನಾಜಿಗಳ ವಿರುದ್ಧ ರಷ್ಯಾ ಎರಡನೇ ಮಹಾಯುದ್ಧ ಗೆದ್ದ 75ನೇ ವರ್ಷಾಚರಣೆಯ ವಿಜಯೋತ್ಸವದ ಹಿನ್ನೆಲೆಯಲ್ಲಿ ಈ ತ್ರಿಪಕ್ಷಿಯ ಸಭೆ ನಡೆದಿದೆ.

ಗಲ್ವಾನ್ ಘರ್ಷಣೆ ಕುರಿತಂತೆ ಜೂನ್ 17ರಂದು ನಡೆದ ಮಾತುಕತೆ ವೇಳೆ ಚೀನಾದ ವಿದೇಶಾಂಗ ವಾಂಗ್ ಯಿ ಅವರ ಬೆವರಿಳಿಸಿದ್ದ ಜೈಶಂಕರ್, ಈಗ ವಿಡಿಯೋ ಕಾನ್ಪರೆನ್ಸ್ ಮೂಲಕ ಮೊದಲ ಬಾರಿಗೆ ವಾಗ್ ಯಿರನ್ನು ಮುಖಾಮುಖಿಯಾಗಿದ್ದರು. ಭದ್ರತಾ ಸುರಕ್ಷತೆ, ಆರ್ಥಿಕ ಸ್ಥಿರತೆಗೆ ಸಂಬಂಧಿಸಿದಂತೆ ವಿಶ್ವದ ಪ್ರಸ್ತುತ ಪ್ರಮುಖ ಸವಾಲುಗಳ ಬಗ್ಗೆ ಸಭೆಯಲ್ಲಿ ರ್ಚಚಿಸಲಾಗಿದೆ ಎಂದು ತಿಳಿದುಬಂದಿದೆ.

ಗಲ್ವಾನ್ ಘಟನೆ ಬಳಿಕ ರಷ್ಯಾದ ಜತೆಗೆ ಸಚಿವರ ಮಟ್ಟದಲ್ಲಿ ನಡೆದ ಮೊದಲ ಸಭೆ ಇದಾಗಿದ್ದರೂ ಘರ್ಷಣೆಗೂ ಮೊದಲು ರಾಜ ತಾಂತ್ರಿಕ ಮಟ್ಟದಲ್ಲಿ ಎರಡು ಬಾರಿ ಭಾರತ-ರಷ್ಯಾ ನಡುವೆ ಗಡಿ ಉದ್ವಿಗ್ನತೆ ಕುರಿತು ಮಾಹಿತಿ ವಿನಿಯಮಯವಾಗಿದೆ. ಜೂನ್ 15ರ ಘಟನೆ ಬಳಿಕ ರಷ್ಯಾದ ಉಪವಿದೇಶಾಂಗ ಸಚಿವರ ಮಧ್ಯೆ ಮಾತುಕತೆ ನಡೆದಿತ್ತು.

ವಿಶ್ವದ ದೊಡ್ಡ ಮತ್ತು ಪರಿಣಾಮ ಕಾರಿ ಧ್ವನಿ ಹೊಂದಿರುವ ದೇಶಗಳು ಎಲ್ಲ ರೀತಿಯಲ್ಲೂ ಉತ್ತಮ ಉದಾಹರಣೆಯಾಗ ಬೇಕು. ಅಂತಾರಾಷ್ಟ್ರೀಯ ಕಾನೂನುಗಳನ್ನು ಗೌರವಿಸುವ ಮೂಲಕ ಹಾಗೂ ಪಾಲುದಾರ ರಾಷ್ಟ್ರಗಳ ನ್ಯಾಯಸಮ್ಮತ ಹಿತಾಸಕ್ತಿಗಳನ್ನು ಗುರುತಿಸಿ ಮಾದರಿಯಾಗಬೇಕು. | ಎಸ್.ಜೈಶಂಕರ್ ಭಾರತದ ವಿದೇಶಾಂಗ ಸಚಿವ ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ಉಂಟಾಗಿ ರುವ ಗಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಭಾರತ-ಚೀನಾಗಳಿಗೆ ಬಾಹ್ಯ ಸಹಾಯದ ಅಗತ್ಯವಿಲ್ಲವೆಂದು ಭಾವಿಸುತ್ತೇನೆ | ಸೆರ್ಗೆಯ್ ಲಾವ್ರೊವ್ ರಷ್ಯಾ ವಿದೇಶಾಂಗ ಸಚಿವ

2017ರಲ್ಲಿ ನಡೆದಿತ್ತು ಆರ್​ಐಸಿ ಸಭೆ ರಷ್ಯಾ-ಭಾರತ-ಚೀನಾದ ವಿದೇಶಾಂಗ ಸಚಿವರ 2017ರ ಫೆಬ್ರವರಿಯಲ್ಲಿ ಚೀನಾದ ವುಹಾನ್ ನಗರದಲ್ಲಿ ನಡೆದಿತ್ತು. ಭಾರತದ ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ಸಭೆಯಲ್ಲಿ ಭಾಗವಹಿಸಿದ್ದರು. ಗಲ್ವಾನ್ ಸಂಘರ್ಷ ದಿಂದ ಚೀನಾ ಮತ್ತು ಭಾರತ ನಡುವೆ ಉದ್ವಿಗ್ನ ಸ್ಥಿತಿ ಉಂಟಾಗಿದ್ದರಿಂದ ಈ ಬಾರಿ ಆರ್​ಐಸಿ ಸಭೆ ನಡೆಯುತ್ತದೋ ಇಲ್ಲವೋ ಎಂಬ ಆತಂಕವಿತ್ತು.

ಚೀನಾಕ್ಕೆ ಬೆಂಬಲ ನೀಡುವ ರಷ್ಯಾ?: ಭಾರತ ಮತ್ತು ಚೀನಾ ಆರ್​ಐಸಿ ಸಭೆಯಲ್ಲಿ ರಷ್ಯಾ ಮೂಲಕ ಮುಖಾಮುಖಿಯಾಗಿದ್ದರೂ ಗಡಿ ಬಿಕ್ಕಟ್ಟಿನ ವಿಷಯದಲ್ಲಿ ರಷ್ಯಾದ ಪಾತ್ರ ಭಾರತದ ಪರವಾಗಿರುವುದು ಅನುಮಾನವಾಗಿದೆ. ಏಕೆಂದರೆ ಕಳೆದ ಕೆಲ ವರ್ಷಗಳಿಂದ ರಷ್ಯಾ ಮತ್ತು ಚೀನಾ ನಡುವೆ ವ್ಯಾಪಾರ, ಹೂಡಿಕೆ ಹೆಚ್ಚಿದೆ ಹಾಗೂ ಕರೊನಾ ವೈರಸ್​ನ ಕಾರಣ ಚೀನಾ ವಿರುದ್ಧ ಅಮೆರಿಕ ತಿರುಗಿ ಬಿದ್ದಿದ್ದಾಗಲೂ ರಷ್ಯಾ ಚೀನಾದ ಬೆಂಬಲಕ್ಕಿತ್ತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ರಾಜನಾಥ್ ರಷ್ಯಾ ಭೇಟಿ: ಮೂರು ದಿನಗಳ ರಷ್ಯಾ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ತಡರಾತ್ರಿ ಮಾಸ್ಕೊ ತಲುಪಿದ್ದಾರೆ. ರಷ್ಯಾದ ರಕ್ಷಣಾ ಸಚಿವರೊಂದಿಗೆ ಮಹತ್ವದ ಸಭೆ ನಡೆಸಲಿದ್ದು, ಉಭಯ ದೇಶಗಳ ನಡುವೆ ರಕ್ಷಣಾ ಸಹಭಾಗಿತ್ವವನ್ನು ಹೆಚ್ಚಿಸುವ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಜತೆಗೆ ಮುಂದಿನ ಕೆಲ ತಿಂಗಳಲ್ಲಿ ರಷ್ಯಾದಿಂದ ಭಾರತಕ್ಕೆ ಬರುವ ಶಸ್ತ್ರಾಸ್ತ್ರಗಳ ಬಗ್ಗೆಯೂ ಚರ್ಚೆಯಾಗಲಿದೆ. 2ನೇ ಮಹಾಯುದ್ಧದ ಜಯಗಳಿಸಿದ 75ನೇ ವರ್ಷಾಚರಣೆ ಹಿನ್ನೆಲೆ ಬುಧವಾರ ನಡೆಯಲಿರುವ ಪರೇಡ್​ನಲ್ಲಿ ರಾಜನಾಥ್ ಸಿಂಗ್ ಭಾಗಿಯಾಗಲಿದ್ದಾರೆ. ಈ ವೇಳೆ ಚೀನಾದ ರಕ್ಷಣಾ ಸಚಿವ ಜನರಲ್ ವೀ ಫೆಂಗ್ ಕೂಡ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net