

ರಾಯ್ಪುರ: ಮಂಗಳಮುಖಿಯರನ್ನು ಸಾಮಾನ್ಯರಂತೆ ಕಾಣಬೇಕು ಎಂದು ಅದೆಷ್ಟೇ ಹೇಳಿಕೊಂಡರೂ ಅವರಿಗೆ ಸಿಕ್ಕಿರುವ ಸ್ಥಾನ ಮಾನ ಮಾತ್ರ ಇಂದಿಗೂ ಒಂದು ಹೆಜ್ಜೆ ಹಿಂದೆಯೇ ಇದೆ. ಭಿಕ್ಷೆ ಬೇಡುವುದನ್ನೇ ಕಾಯಕ ಮಾಡಿಕೊಂಡಿದ್ದ ಮಂಗಳಮುಖಿಯೊಬ್ಬಳು ಇದೀಗ ತನ್ನ ಕಠಿಣ ಪರಿಶ್ರಮದಿಂದ ಪೊಲೀಸ್ ಇಲಾಖೆಗ ಆಯ್ಕೆಯಾಗಿದ್ದಾಳೆ.
ಚತ್ತೀಸಗಢದ ಅಂಬಿಕಾಪುರದ ಅಕ್ಷರ ಚತ್ತೀಸಗಢ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದಾಳೆ. ಕಷ್ಟ ಪಟ್ಟು ಓದಿ, ಇತ್ತೀಚೆಗೆ ದೈಹಿಕ ಪರೀಕ್ಷೆ ಕೊಟ್ಟ ಈಕೆ ಇಲಾಖೆಗೆ ಆಯ್ಕೆ ಆಗಿದ್ದಾಳೆ. ನನ್ನ ಜತೆಗಿರುವವರೆಲ್ಲ ಮೇಕಪ್ ಮಾಡಿಕೊಂಡು ಭಿಕ್ಷೆ ಬೇಡಲು ಹೋಗುತ್ತಿದ್ದರು ಆದರೆ ನಾನು ಮಾತ್ರ ಮನೆಯಲ್ಲೇ ಕುಳಿತು ಓದಿಕೊಳ್ಳುತ್ತಿದ್ದೆ. ಪ್ರತಿದಿನ ಎಂಟು ತಾಸು ಓದುತ್ತಿದ್ದೆ. ನಾನು ಅವರೊಂದಿಗೆ ಕೆಲಸಕ್ಕೆ ಹೋಗಲು ಆಗಲಿಲ್ಲವಾದರೂ ನನ್ನ ಜತೆಗಿದ್ದವರು ಬೇಜಾರಾಗದೆ ನನ್ನ ಸಾಕಿ ಸಲಹಿದ್ದಾರೆ. ನನಗೆ ಪ್ರೋತ್ಸಾಹಿಸಿದ್ದಾರೆ ಎಂದು ತನ್ನ ಮನದ ಮಾತನ್ನು ಅಕ್ಷರ ಹಂಚಿಕೊಂಡಿದ್ದಾರೆ.
ಅಕ್ಷರ ಅಂಬಿಕಾಪುರದ ಕಿನ್ನಾರಾ ಸಮಾಜದೊಂದಿಗೆ ಬದುಕುತ್ತಿದ್ದಾರೆ. ಆಕೆ ಪೊಲೀಸ್ ಇಲಾಖೆಗೆ ಆಯ್ಕೆಯಾಗಿರುವುದು ಸಮಾಜಕ್ಕೆ ಕೀರ್ತಿ ತಂದಿದೆ. ಪೊಲೀಸ್ ಸಮವಸ್ತ್ರ ತೊಟ್ಟು ಬರುವ ಅಕ್ಷರಾಳಿಂದ ನಾವು ಇನ್ನಷ್ಟು ಸ್ಫೂರ್ತಿ ಪಡೆಯಲಿದ್ದೇವೆ ಎಂದಿದ್ದಾರೆ ಸಮಾಜದ ಜನರು. (ಏಜೆನ್ಸೀಸ್)