

ಸಾಗರ: ಸಾಗರ ತಾಲೂಕಿನ ಕಾರ್ಗಲ್ ನಾಡ ಕಚೇರಿಗೆ ದಾಖಲೆಗಳನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಶುಕ್ರವಾರ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಾಗರವೂ ಸೇರಿ ರಾಜ್ಯದ ಎಲ್ಲ ಹೋಬಳಿಗಳಲ್ಲಿ ಸರ್ಕಾರವು 2013ರಲ್ಲಿ ನಾಡ ಕಚೇರಿ ಪ್ರಾರಂಭ ಮಾಡಿದೆ. ಕಾರ್ಗಲ್‌ನಲ್ಲಿ ಸಹ 2013ರಲ್ಲಿ ನಾಡ ಕಚೇರಿ ಆರಂಭಿಸಲಾಗಿದೆ. 2022ರಲ್ಲಿ ನಾಡ ಕಚೇರಿಗೆ ನೂತನ ಕಟ್ಟಡ ನಿರ್ಮಾಣವಾಗಿ ಉದ್ಘಾಟನೆಯಾಗಿದೆ. ಆದರೆ ನಾಡ ಕಚೇರಿಯಲ್ಲಿ ಯಾವುದೇ ದಾಖಲೆಗಳು ಸಿಗುತಿಲ್ಲ. ಈ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.
ಭಾರಂಗಿ ಹೋಬಳಿಯ ಅರ್ಕಳ, ನಾಗವಳ್ಳಿ, ಮೆಗ್ಗಾನೆ ಸೇರಿದಂತೆ ಕುಗ್ರಾಮಗಳಿಂದ ಭೂಸಂಬಂಧಿತ ದಾಖಲೆಗಳನ್ನು ಪಡೆಯಲು ಸಾಗರಕ್ಕೆ ಬರಲು ಸಮಸ್ಯೆಯಾಗುತ್ತಿದೆ. ಕನಿಷ್ಠ 80ರಿಂದ 100 ಕಿ.ಮೀ ಪ್ರಯಾಣಿಸಬೇಕಾದ ಸ್ಥಿತಿಯಿದೆ. ಕಚೇರಿಗೆ ಅಲೆದು ದಾಖಲೆ ಪಡೆಯಲು ಕನಿಷ್ಠ ಒಂದು ವಾರ ತಿರುಗಬೇಕಾಗಿದೆ. ಇದಕ್ಕೆ ಒಂದು ಸಾವಿರ ರೂ.ವರೆಗೆ ಖರ್ಚಾಗುತ್ತದೆ. ಈ ಸಮಸ್ಯೆ ಪರಿಹಾರಕ್ಕೆ ತಾಲೂಕು ಆಡಳಿತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಕಾರ್ಗಲ್ ನಾಡ ಕಚೇರಿಗೆ ಸೂಕ್ತ ದಾಖಲೆಗಳನ್ನು ವರ್ಗಾವಣೆ ಮಾಡುವಂತೆ ತಹಸೀಲ್ದಾರ್ ಅವರಿಗೆ ಅನೇಕ ಬಾರಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಆರ್.ಆರ್. 5 ಮತ್ತು 6 ದಾಖಲೆ, ಪಹಣಿ ದಾಖಲೆ, ಜನನ ಮರಣ ದಾಖಲೆ ಇತ್ಯಾದಿಗಳು ಬಡವರಿಗೆ ಸಿಗುತ್ತಿಲ್ಲ. ಇನ್ನು 15 ದಿನದೊಳಗೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ನಾಡಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಸಂಚಾಲಕ ರೇವಪ್ಪ ಕೆ., ರವಿಕುಮಾರ್, ಮಧುಕುಮಾರ್, ಗಣಪತಿ ವಡ್ನಾಲ, ಜಗನ್ನಾಥ್, ಮಂಜಪ್ಪ ಜನ್ನೆಹಕ್ಲು, ಪ್ರಶಾಂತ್, ರವಿಕುಮಾರ್, ಚಂದ್ರು, ನಾರಾಯಣ ಇತರರಿದ್ದರು.