

ಕೊಟ್ಟಾಯಂ: ಯಾವುದಾದರೂ ಸ್ಥಳಕ್ಕೆ ಹೋಗಬೇಕಾದಾಗ, ಯಾವುದಾದರೂ ಸ್ಥಳವನ್ನು ನೋಡಿ ತಿಳಿಯಬೇಕಾದಾಗ ಸಾಮಾನ್ಯವಾಗಿ ನಾವೆಲ್ಲ ಒಂದಲ್ಲ ಒಂದು ಸಲ ಗೂಗಲ್ ಮ್ಯಾಪ್, ಗೂಗಲ್ ಸರ್ಚ್ನ ಮೊರೆ ಹೋಗುತ್ತೇವೆ. ಅದರಲ್ಲೂ ಗೂಗಲ್ ಮ್ಯಾಪ್ ಹೆಚ್ಚಾಗಿ ಬಳಕೆ ಮಾಡುತ್ತೇವೆ. ಆದರೆ, ಗೂಗಲ್ ಮ್ಯಾಪ್ ಬಳಸುವಾಗ ಸ್ವಲ್ಪ ಎಚ್ಚರ ತಪ್ಪಿದರೆ ಏನಾಗಬಹುದು ಎಂಬುದಕ್ಕೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ.
ಕೊಟ್ಟಾಯಂ ಜಿಲ್ಲೆಯ ಕುರುಪಂಥರಾ ಪ್ರದೇಶದಲ್ಲಿ ಶನಿವಾರ ಬೆಳಗಿನ 03 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆಂಧ್ರಪ್ರದೇಶ ಮೂಲದ ನಾಲ್ವರು ಪ್ರವಾಸಿಗರನ್ನು ಪೊಲೀಸರು ರಕ್ಷಿಸಿದ್ದಾರೆ. ನೀರಿನಲ್ಲಿ ಮುಳುಗಿರುವ ಕಾರನ್ನು ಅಧಿಕಾರಿಗಳು ಹೊರತೆಗೆಯುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೊಟ್ಟಾಯಂ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು, ಆಂಧ್ರಪ್ರದೇಶದಿಂದ ಅಲಪ್ಪುರಕ್ಕೆ ನಾಲ್ವರು ಪ್ರಯಾಣಿಸುತ್ತಿದ್ದರು. ಹೆಚ್ಚಾಗಿ ಮಳೆ ಸುರಿದಿದ್ದ ಕಾರಣ ಗೂಗಲ್ ಮ್ಯಾಪ್ ಸೂಚಿಸಿದ ವೇಗದ ಮಾರ್ಗವನ್ನು ಅನುಸರಿಸಲು ಹೋಗಿ ಎಸ್ಯುವಿ ಕಾರೊಂದು ರಸ್ತೆಯನ್ನು ಬಿಟ್ಟು ನೀರಿಗೆ ಇಳಿದಿದೆ.
ಕಾರು ನೀರಿನಲ್ಲಿ ಮುಳುಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪುರುಷರು ಹಾಗೂ ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ. ಕಾರು ನೀರಿನಲ್ಲಿ ಸಂಫೂರ್ಣವಾಗಿ ಮುಳುಗಿದ್ದು, ಹೊರತೆಗೆಯಲಾಗುತ್ತಿದೆ ಎಂದು ಕೊಟ್ಟಾಯಂ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.