ಉಡುಪಿಯಲ್ಲಿ ಗುಂಪುಗಳ ನಡುವೆ ಡೆಡ್ಲಿ ಗ್ಯಾಂಗ್​ವಾರ್​; ಭಯಾನಕ ವಿಡಿಯೋ ವೈರಲ್​

Udupi Gangwar
Published on

ಉಡುಪಿ: ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಉಡುಪಿಯಲ್ಲಿ ಪುಂಡ-ಪೋಕರಿಗಳ ಗುಂಪೊಂದು ನಡು ರಸ್ತೆಯಲ್ಲೇ ಬಡಿದಾಡಿಕೊಂಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಮೇ 18ರಂದು ಘಟನೆ ನಡೆದಿದ್ದು, ಗ್ಯಾಂಗ್​ವಾರ್​ನ ಭಯಾನಕ ವಿಡಿಯೋ ನೋಡಿ ಜನರು ಭಯಬಿದ್ದಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದು, ಬಂಧಿತರಿಂದ 2 ಸ್ವಿಫ್ಟ್​ ಕಾರು, ತಲವಾರ್ ಹಾಗೂ ಡ್ರ್ಯಾಗರ್​ಅನ್ನು ವಶಕ್ಕೆ ಪಡೆದಿದ್ದಾರೆ. ಉಡುಪಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 18ರಂದು ಘಟನೆ ನಡೆದಿದ್ದು, ಯಾವ ಸಿನಿಮಾ ದೃಶ್ಯಕ್ಕೂ ಕಡಿಮೆ ಇಲ್ಲ ಎಂಬಂತೆ ಎರಡು ತಂಡಗಳು ಹೊಡೆದಾಡಿಕೊಂಡಿವೆ. ಬಿಳಿ ಮತ್ತು ಕಪ್ಪು ಬಣ್ಣದ ಕಾರ್‌ಗಳಲ್ಲಿ ಇದ್ದ ಎರಡು ತಂಡಗಳು ರಸ್ತೆ ಮಧ್ಯದಲ್ಲಿ ಜಗಳ ಮಾಡಿಕೊಂಡಿದ್ದು, ಈ ವೇಳೆ ಗಲಾಟೆ ತಾರಕಕ್ಕೇರಿ ಕಾರ್‌ನಿಂದ ಇನ್ನೊಂದು ಕಾರ್‌ಗೆ ಒಂದು ತಂಡ ಗುದ್ದಿದೆ. ಆಗ ವಿರೋಧಿ ಗ್ಯಾಂಗ್‌ನ ಒಬ್ಬ ಸದಸ್ಯ ಮತ್ತೊಂದು ತಂಡದ ಮೇಲೆ ತಲವಾರ್ ಬೀಸಿದ್ದಾನೆ. ಆತ ಬೀಸಿದ ತಲವಾರ್ ಏಟು ಕಾರ್‌ಗೆ ಬಿದ್ದು ಕಾರ್ ಗಾಜು ಪುಡಿ ಪುಡಿಯಾಗಿದೆ.

ಈ ವೇಳೆ ಸಿಟ್ಟಿಗೆದ್ದ ಆ ಗ್ಯಾಂಗ್‌ ಕಾರ್‌ನ್ನು ಮುಂದಕ್ಕೆ ಚಲಾಯಿಸಿ ವಾಪಸ್ ಬಂದು ಮತ್ತೆ ವಿರೋಧಿ ಗ್ಯಾಂಗ್‌ನ ಕಾರ್‌ಗೆ ಗುದ್ದಿದೆ. ಅಷ್ಟೇ ಅಲ್ಲದೇ ವೇಗವಾಗಿ ಕಾರ್ ಚಲಾಯಿಸಿ ಆ ಗ್ಯಾಂಗ್‌ನ ಸದಸ್ಯನೊಬ್ಬನ ಮೇಲೆ ಕಾರ್ ಹರಿಸಿದ್ದಾರೆ. ಕಾರ್ ಹರಿಸಿದ ವೇಗಕ್ಕೆ ಆತ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದೀಗ ಈ ಗ್ಯಾಂಗ್​ವಾರ್‌ನ ವಿಡಿಯೋ ವೈರಲ್ ಆಗಿದ್ದು, ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡುರಸ್ತೆಯಲ್ಲಿ ತಲವಾರು ಹಿಡಿದು ಹೊಡೆದಾಟ ನಡೆಸಿದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಾದ ಪ್ರಶ್ನೆಗಳು ಉದ್ಭವಿಸಿದೆ.

ಸುದ್ದಿ ಮೂಲಗಳ ಪ್ರಕಾರ ಕಾರು ಮಾರಾಟಕ್ಕೆ ಸಂಬಂಧಿಸಿದಂತೆ ಈ ಗ್ಯಾಂಗ್ ವಾರ್ ನಡೆದಿದೆ ಎನ್ನಲಾಗಿದ್ದು, ಗರುಡ ಎಂಬ ಹೆಸರಿನ ಮುಸ್ಲಿಂ ಸಮುದಾಯಕ್ಕೆ ಸೇರಿದ ಎರಡು ಗ್ಯಾಂಗ್‌ಗಳ ನಡುವೆ ಈ ಗ್ಯಾಂಗ್ ವಾರ್ ನಡೆದಿದೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಉಡುಪಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಉಳಿದವರಿಗೆ ಹುಡುಕಾಟ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net