ಹುಲಿಯೊಂದಿಗೆ ವಾಕಿಂಗ್​ ಹೊರಟ ಮಾಲೀಕ: ಎದುರಾದವರಿಗೆ ಕಾದಿತ್ತು ಬಿಗ್​ ಸರ್ಪ್ರೈಸ್​!

Tiger
Published on

ಬೀಜಿಂಗ್​: ಚೀನಾದ ಬೀದಿಯಲ್ಲಿ ಹುಲಿಯೊಂದು ಕಾಣಿಸಿಕೊಳ್ಳುವ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿತು. ಇದೇನಪ್ಪಾ ಹುಲಿ ಕಾಣಿಸಿಕೊಂಡರೆ ಬದುಕಿತಾ ಬಡ ಜೀವಾ ಎಂದು ಎದ್ನೋ ಬಿದ್ನೋ ಅಂತಾ ಸ್ಥಳದಿಂದ ಕಾಲ್ಕೀಳುವುದುಂಟು. ಆದರೆ, ಬೀದಿಯಲ್ಲಿ ಹುಲಿ ಕಂಡು ಜನರು ನಗುವುದಾ? ಸಾಧ್ಯವೇ ಇಲ್ಲ ಎನ್ನುವವರ ಮಾತು ನೂರಕ್ಕೆ ನೂರು ಸತ್ಯ. ಏಕೆಂದರೆ ಚೀನಾದಲ್ಲಿ ಕಾಣಿಸಿಕೊಂಡಿದ್ದು ಹುಲಿಯಲ್ಲ. ಬದಲಾಗಿ ಹುಲಿ ರೂಪದ ಶ್ವಾನ.

ಮಾಲೀಕನೊಬ್ಬ ತನ್ನ ಶ್ವಾನಕ್ಕೆ ಕಿತ್ತಳೆ ಹಾಗೂ ಬಿಳಿಯ ಬಣ್ಣವನ್ನು ಬಳಿದು ಥೇಟ್​ ಹುಲಿಯಂತೆ ರೂಪ ನೀಡಿ ಚೀನಾದ ಬೀದಿಯಲ್ಲಿ ಕರೆದೊಯ್ದಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ವಿಡಿಯೋ ಭಾರಿ ವೈರಲ್​ ಆಗಿದ್ದು, ಟ್ರೆಂಡಿಂಗ್​ನಲ್ಲಿದೆ.

ಹುಲಿಯ ರೂಪದಲ್ಲಿದ್ದ ಶ್ವಾನ ಕಕೇಶಿಯನ್ ಶೆಫರ್ಡ್​ ತಳಿಯದ್ದು. ಅದರ ಉದ್ದನೆಯ ಕೂದಲಿಗೆ ಬಣ್ಣ ಹಚ್ಚಿ, ಉದ್ದದ ನಕಲಿ ಬಾಲವನ್ನು ಅಂಟಿಸಿ, ಮಾಲೀಕನೊಬ್ಬ ಶ್ವಾನಕ್ಕೆ ಹುಲಿಯ ರೂಪವನ್ನು ಕೊಟ್ಟು, ಚೀನಾದ ಗನ್ಸೂ ಪ್ರಾಂತ್ಯದ ಝಾಂಗ್ಯಾ ನಗರದ ಬೀದಿಯಲ್ಲಿ ವಾಕಿಂಗ್​ ಕರೆದೊಯ್ದಿದ್ದ. ಈ ವೇಳೆ ಪಾದಾಚಾರಿಯೊಬ್ಬ ವಿಡಿಯೋ ರೆಕಾರ್ಡ್​ ಮಾಡಿಕೊಂಡು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ನೋಡಲು ಥೇಟ್ ಹುಲಿಯಂತೆ ಕಾಣುವ ಶ್ವಾನವನ್ನು ನೋಡಿ ಅನೇಕ ದಾರಿಹೋಕರು ಹುಬ್ಬೇರಿಸಿದ್ದಾರೆ. ಇದು ನಕಲಿ. ಆದರೂ ನೋಡಲು ಹುಲಿಯಂತಿದೆ ಎಂದು ಮಹಿಳೆಯೊಬ್ಬಳು ಹೇಳುವುದು ವೈರಲ್​ ವಿಡಿಯೋದಲ್ಲಿ ದಾಖಲಾಗಿದೆ.

ಇನ್ನು ಶ್ವಾನವನ್ನು ಕಾಡು ಮೃಗಗಳಂತೆ ಮಾರ್ಪಾಡು ಮಾಡುವುದು ಇದೇ ಮೊದಲೇನಲ್ಲ. ಈ ಹಿಂದೆ ಪಾಂಡಾ ಮಾದರಿಯಲ್ಲಿ ಶ್ವಾನವನ್ನು ಮಾರ್ಪಾಡು ಮಾಡಲಾಗಿತ್ತು. ಕರಡಿಯ ರೂಪವನ್ನು ಕೊಡಲಾಗಿತ್ತು. ಇಂತಹ ಸಾಕಷ್ಟು ಉದಾಹರಣೆಗಳಿವೆ. ಇದೀಗ ವಿಡಿಯೋ ವೈರಲ್​ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. (ಏಜೆನ್ಸೀಸ್​) (ವಿಡಿಯೋ ಕೃಪೆ: ಡೈಲಿ ಮೇಲ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net