

ಮಂಡ್ಯ: ಸಂಸದೆ ಸುಮಲತಾ ಅಂಬರೀಷ್ ನಡೆಯನ್ನು ಟೀಕಿಸಿರುವ ಮೈಸೂರು-ಕೊಡುಗು ಸಂಸದ ಪ್ರತಾಪ್ ಸಿಂಹ, ಸುಮಲತಾ ಅವರು ಏನೂ ಕೆಲಸ ಮಾಡಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ದೇವೇಗೌಡರ ಕುಟುಂಬದವರನ್ನು ಸೋಲಿಸಲು ಸುಮಲತಾ ಅವರನ್ನು ಗೆಲ್ಲಿಸಿದ್ದಾರಷ್ಟೇ. ಮಂಡ್ಯದಲ್ಲಿ ಒಂದು ಕೆಲಸ ಮಾಡುವುದಕ್ಕೂ ಬಿಡುತ್ತಿಲ್ಲ. ಮಂಡ್ಯದ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ, ಆ ಯಮ್ಮ ಏನೂ ಕೆಲಸ ಮಾಡುವುದಿಲ್ಲ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಈ ಸಂಬಂಧ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರು–ಮೈಸೂರು ದಶಪಥ ಕಾಮಗಾರಿಯ ಬಗ್ಗೆ ಅಧಿಕಾರಿಯೊಬ್ಬರ ಜತೆ ಫೋನ್‌ನಲ್ಲಿ ಮಾತನಾಡುವ ವೇಳೆ ಸುಮಲತಾ ವಿರುದ್ಧ ಅಧಿಕಾರಿ ದೂರು ಹೇಳಿದಾಗ ಅವರ ವಿರುದ್ಧ ಪ್ರತಾಪ್ ಸಿಂಹ ಮಾತನಾಡಿದ್ದಾರೆ.
ಮಂಡ್ಯ ತಾಲೂಕಿನ ಯಲಿಯೂರು ಗ್ರಾಮಸ್ಥರ ಅಹವಾಲು ಸ್ವೀಕರಿಸಿ, ಅಧಿಕಾರಿ ಜತೆ ಫೋನ್‌ನಲ್ಲಿ ಮಾತನಾಡುವಾಗ ಈ ಪ್ರಸಂಗ ಜರುಗಿದೆ. ಇದೀಗ ಪ್ರತಾಪ್ ಸಿಂಹ ವಿರುದ್ಧ ಸುಮಲತಾ ಬೆಂಬಲಿಗರು ಆಕ್ರೋಶ ಹೊರಹಾಕುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)