ವಿವಾದಗಳ ಬೆನ್ನಲ್ಲೇ ಇಬ್ಬರು ಸ್ಟಾರ್​ ನಟರ ಚಿತ್ರಕ್ಕೆ ಸಹಿ ಹಾಕಿದ ತ್ರಿಶಾ! 18 ವರ್ಷಗಳ ನಂತರ ಈ ನಟನ ಜತೆ ಅಭಿನಯ

Untitled design - 2024-02-26T083007.149
Published on

ತಮಿಳುನಾಡು: 'ಲಿಯೋ' ಚಿತ್ರದ ಸಕ್ಸಸ್ ಬಳಿಕ ವಿವಾದ ಅಲೆಗೆ ಸಿಲುಕಿದ ತಮಿಳು ನಟಿ, ಬಹುಭಾಷಾ ತಾರೆ ತ್ರಿಶಾ ಕೃಷ್ಣನ್, ತದನಂತರವೂ ಬೇರೆ ಬೇರೆ ವಿವಾದಗಳನ್ನು ಎದುರಿಸಿದರು. ಮೊನ್ನೆಯಷ್ಟೇ ರಾಜಕಾರಣಿ ಎ.ವಿ. ರಾಜು ತನ್ನ ವಿರುದ್ಧ ಮಾಡಿದ ಅವಹೇಳನಕಾರಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ತ್ರಿಶಾ, ರಾಜುಗೆ ಮಾನನಷ್ಟ ಮೊಕದ್ದಮೆ ನೋಟಿಸ್​ ರವಾನಿಸಿದ್ದಾರೆ. ಸದ್ಯ ಒಂದಲ್ಲ ಒಂದು ಕಾಂಟ್ರವರ್ಸಿಗಳಿಗೆ ತುತ್ತಾಗುತ್ತಿರುವ ತ್ರಿಶಾ, ಇದೀಗ ಟಾಲಿವುಡ್​ ಅಂಗಳಕ್ಕೆ ಎರಡು ಸಿನಿಮಾಗಳಿಗೆ ಸಹಿ ಹಾಕುವ ಮೂಲಕ ಮರಳಿದ್ದಾರೆ.

ಇತ್ತೀಚೆಗಷ್ಟೇ ತೆಲುಗಿನ ಖ್ಯಾತ ನಟ, ಮೆಗಾಸ್ಟಾರ್​ ಚಿರಂಜೀವಿ ಜತೆ ಹೊಸ ಸಿನಿಮಾವೊಂದಕ್ಕೆ ಸಹಿ ಹಾಕಿದ್ದು, 18 ವರ್ಷಗಳ ನಂತರ ಅವರೊಂದಿಗೆ ಮತ್ತೆ ನಟಿಸುತ್ತಿದ್ದಾರೆ ಎಂಬುದು ಒಂದೆಡೆಯಾದರೆ, ಮತ್ತೊಂದೆಡೆ ತ್ರಿಶಾ 12 ವರ್ಷಗಳ ಬಳಿಕ ಮತ್ತೊಬ್ಬ ತೆಲುಗು ಸ್ಟಾರ್​ ನಟನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೀಗ ಹೊರಬಿದ್ದಿದೆ.

ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್' ಚಿತ್ರದ ನಂತರ ತ್ರಿಶಾಗೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳು ಒಲಿದು ಬರುತ್ತಿರುವುದನ್ನು ನಾವು ಗಮನಿಸಿದ್ದೇವೆ. ಈಗಾಗಲೇ ವಿಜಯ್ ಜತೆ 'ಲಿಯೋ' ಸಿನಿಮಾದಲ್ಲಿ ನಟಿಸಿರುವ ತ್ರಿಶಾ, ಅಜಿತ್ ಅವರ 'ವಿದಾ ಮುಯಾರ್ಚಿ' ಹಾಗೂ ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ಮಲಯಾಳಂನಲ್ಲಿ ಮೋಹನ್ ಲಾಲ್ ಜತೆ ‘ರಾಮ್’ ಚಿತ್ರದಲ್ಲಿ ನಟಿಸುತ್ತಿರುವ ತ್ರಿಶಾ ‘ಐಡೆಂಟಿಟಿ’ ಚಿತ್ರದಲ್ಲಿ ನಿವಿನ್ ಪೌಲಿಗೆ ಜೋಡಿಯಾಗಿದ್ದಾರೆ.

ಈ ಬೆನ್ನಲ್ಲೇ ಟಾಲಿವುಡ್​ ಸ್ಟಾರ್​ ನಟ ವೆಂಕಟೇಶ್ ಅವರೊಂದಿಗೆ ನಟಿಸಲಿರುವ ತ್ರಿಶಾ, ಇತ್ತೀಚೆಗಷ್ಟೇ ಈ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ 12 ವರ್ಷಗಳ ನಂತರ ಇವರಿಬ್ಬರ ಜೋಡಿ ಮತ್ತೊಮ್ಮೆ ತೆರೆಮೇಲೆ ಒಂದಾಗಿದ್ದು, ತೆಲುಗು ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net